ADVERTISEMENT

ಸರ್ಕಾರ ದುಶ್ಯಾಸನ ಆಗಬಾರದು: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2011, 19:30 IST
Last Updated 28 ಸೆಪ್ಟೆಂಬರ್ 2011, 19:30 IST
ಸರ್ಕಾರ ದುಶ್ಯಾಸನ ಆಗಬಾರದು: ಪೇಜಾವರ ಶ್ರೀ
ಸರ್ಕಾರ ದುಶ್ಯಾಸನ ಆಗಬಾರದು: ಪೇಜಾವರ ಶ್ರೀ   

ಮೈಸೂರು: `ಸರ್ಕಾರವು ಹಸಿರು ಸೀರೆ ಉಟ್ಟ ಕನ್ನಡ ಮಾತೆಯ ಸೀರೆಯನ್ನು ಸೆಳೆಯುವ ದುಶ್ಯಾಸನ ಆಗಬಾರದು. ಅಕ್ಷಯಾಂಬರ ನೀಡಿದ ಶ್ರೀಕೃಷ್ಣನಾಗಬೇಕು~ ಎಂದು ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಬುಧವಾರ ಸಲಹೆ ನೀಡಿದರು.

ಚಾಮುಂಡಿ ಬೆಟ್ಟದಲ್ಲಿ 401 ನೇ ದಸರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಾಮುಂಡಿಯಲ್ಲಿ ಕನ್ನಡಮಾತೆಯನ್ನು ಕಾಣಬಹುದು.
 
ಹಸಿರು ಸೀರೆಯನ್ನು ಉಟ್ಟ ಪಶ್ಚಿಮ ಘಟ್ಟವು ಕಾವೇರಿ, ತುಂಗಾ ಭದ್ರ, ಶರಾವತಿ, ನೇತ್ರಾವತಿ ನದಿಗಳ ಉಗಮ ಸ್ಥಳವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇವುಗಳಿಗೆ ಕುತ್ತು ಬರುತ್ತಿದೆ~ ಎಂದು ಹೇಳುವ ಮೂಲಕ ರಾಜ್ಯದ ಪ್ರಾಕೃತಿಕ ಸಂಪತ್ತು ಲೂಟಿಯನ್ನು ಪರೋಕ್ಷವಾಗಿ ಟೀಕಿಸಿದರು.

`ಭ್ರಷ್ಟಾಚಾರ, ಶೋಷಣೆಯಿಂದ ರಾಜ್ಯದ ಪ್ರಗತಿ ಸಾಧ್ಯವಿಲ್ಲ. ಭ್ರಷ್ಟ ಅಧಿಕಾರಿಗಳಿಂದಾಗಿ ಸರ್ಕಾರದ ಯೋಜನೆಗಳು ಜನರನ್ನು ತಲುಪುತ್ತಿಲ್ಲ. ಆದ್ದರಿಂದ ಜನತೆ ಇಂತಹ ಕೆಡಕುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅಂತೆಯೇ ಭ್ರಷ್ಟಾಚಾರ ಮುಕ್ತ ಮತ್ತು ಸಾಮರಸ್ಯದ ಆಡಳಿತ ನೀಡುವತ್ತ ಗಮನ ಹರಿಸಬೇಕು~ ಎಂದು ಪಕ್ಕದಲ್ಲೇ ಕುಳಿತಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ಸಲಹೆ ಮಾಡಿದರು.

`ದುಷ್ಟರು ಹೊರಗಿಲ್ಲ, ನಮ್ಮಳಗೇ  ಇದ್ದಾರೆ. ಅವುಗಳು ಬೇರೆ ಬೇರೆ ರೀತಿಯಲ್ಲಿ ತಮ್ಮ ವಿಕಟರೂಪವನ್ನು ಪ್ರದರ್ಶಿಸುತ್ತವೆ. ನಮ್ಮ ನಡುವೆ ಎರಡು ಬಗೆಯ ಕೋಣಗಳಿವೆ. ಒಂದು ನಾಡು ಕೋಣ, ಮತ್ತೊಂದು ಕಾಡು ಕೋಣ.

ನಾಡು ಕೋಣ ಆಲಸ್ಯ, ನಿರ್ಲಕ್ಷ್ಯದಿಂದಿದೆ. ಕಾಡು ಕೋಣ ಆಕ್ರಮಣಕಾರಿಯಾಗಿದೆ. ಇವೆರಡೂ ತಪ್ಪು, ಇಂತಹ ಕೋಣಗಳ ವಿರುದ್ಧವೂ ಹೋರಾಟ ನಡೆಸಬೇಕು~ ಎಂದ ಅವರು `ಕನ್ನಡಿಗರು ಆಲಸ್ಯ ಮತ್ತು ಆಕ್ರಮಣ ಗುಣವನ್ನು ಬಿಟ್ಟು ಬದುಕಬೇಕು~ ಎಂದು ತಿಳಿಸಿದರು.

`ಕನ್ನಡ ನಾಡು ವಿಶ್ವಕ್ಕೆ ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡಿದೆ. ಕವಿ ಪಂಪ ಮಾನವಕುಲ ಒಂದೇ ಎಂದರು. ಬಸವೇಶ್ವರ ಸಹೋದರ  ಭಾವನೆಯನ್ನು ತಿಳಿಸಿಕೊಟ್ಟರು. ಎಲ್ಲ ಪೂಜೆ, ಪ್ರಾರ್ಥನೆಗಿಂತ ನಾನಾ ರೀತಿಯ ಸೇವೆಯೇ ಶ್ರೇಷ್ಠ ಎಂದು ಮಧ್ವರು ಸಾರಿದರು. ಶೈವರು, ವೈಷ್ಣವರು, ಜೈನರು, ಬೌದ್ಧರು, ಮುಸ್ಲಿಮರು, ಕ್ರೈಸ್ತರು ಪರಸ್ಪರ ಪ್ರೀತಿ, ಸ್ನೇಹ, ಸಾಮರಸ್ಯದಿಂದ ಬದುಕುತ್ತಿದ್ದಾರೆ.
 
ಇಂತಹ ನಾಡಿನಲ್ಲಿ ದುಷ್ಟ,  ಶಿಷ್ಟ, ಒಳಿತು, ಕೆಡಕುಗಳ ನಡುವೆ ಸಂಘರ್ಷ ನಡೆಯುತ್ತಿದೆ. ದುಷ್ಟಶಕ್ತಿಗಳು ದಮನವಾಗಿ ಶಿಷ್ಟ ಶಕ್ತಿಗಳು ವಿಜೃಂಭಿಸಬೇಕು. ಇದರ ಸಂಕೇತವಾಗಿ ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ. ಇದು ಕೇವಲ ಮೈಸೂರು, ಕರ್ನಾಟಕದ ಹಬ್ಬವಲ್ಲ; ರಾಷ್ಟ್ರೀಯ ಹಬ್ಬವಾಗಿದೆ~ ಎಂದರು.

`ದಲಿತರೊಂದಿಗೆ ಸಾಮರಸ್ಯದಿಂದ ಬದುಕಬೇಕು. ಬೃಹತ್ ಕೈಗಾರಿಕೆಗಳ ಸ್ಥಾಪನೆಗಾಗಿ ಕೃಷಿ ಭೂಮಿಯನ್ನು ಕಿತ್ತುಕೊಳ್ಳಬಾರದು. ಕೃಷಿ ಮತ್ತು ಉದ್ಯಮಗಳ ನಡುವೆ ಸಮತೋಲನವನ್ನು ಸರ್ಕಾರಕಾಪಾಡಿಕೊಳ್ಳಬೇಕು. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವೆ ತಾರತಮ್ಯ  ತೋರಬಾರದು. ಶಾಂತಿ, ಸಮೃದ್ಧಿ, ಸಮಾನತೆ, ಸಾಮರಸ್ಯದ ಕನ್ನಡ ನಾಡು ನನ್ನ ಕನಸು~ ಎಂದು ಹೇಳಿದರು.

ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, `ದಸರಾ ಉತ್ಸವದ ಮಾದರಿಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿಯೂ ಉತ್ಸವಗಳನ್ನು  ಮಾಡಲಾಗುವುದು. ಇದರಿಂದ ಸಾಂಸ್ಕೃತಿಕ ಸಂಬಂಧವನ್ನು ಬೆಸೆಯಬಹುದು. ಇದಕ್ಕಾಗಿ ಸರ್ಕಾರ ಅಗತ್ಯವಾದ ಸಹಕಾರ ನೀಡಲಿದೆ~ ಎಂದು ತಿಳಿಸಿದರು.

ಹಣತೆ ಶಕ್ತಿ ಮತ್ತು ಜ್ಞಾನದ ಸಂಕೇತ ಎಂದ ಅವರು `ನಾನು ದೀಪ ಹಚ್ಚುವುದು ಕತ್ತಲನ್ನು ಗೆಲ್ಲುತ್ತೇನೆ ಎನ್ನುವ ಭ್ರಮೆಯಿಂದಲ್ಲ, ಇರುವವಷ್ಟು ಹೊತ್ತು ನಿನ್ನ ಮುಖ ನಾನು ನನ್ನ ಮುಖ ನೀನು ನೋಡಬಹುದು ಎಂಬ ಒಂದೇ ಒಂದು ಆಸೆಯಿಂದ~ ಎಂಬ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಕವಿತೆಯನ್ನು ಉಲ್ಲೇಖಿಸಿ ಚಪ್ಪಾಳೆ ಗಿಟ್ಟಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.