ADVERTISEMENT

ಸರ್ಕಾರ, ಪಕ್ಷದ ವರ್ಚಸ್ಸು ಹೆಚ್ಚಿಸಲು ಅಭಿಯಾನ

ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನc

​ಪ್ರಜಾವಾಣಿ ವಾರ್ತೆ
Published 14 ಮೇ 2014, 19:30 IST
Last Updated 14 ಮೇ 2014, 19:30 IST
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿದ್ದೆಗೆ ಜಾರಿರುವುದು	–ಪ್ರಜಾವಾಣಿ ವಾರ್ತೆ
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿದ್ದೆಗೆ ಜಾರಿರುವುದು –ಪ್ರಜಾವಾಣಿ ವಾರ್ತೆ   

ಬೆಂಗಳೂರು: ರಾಜ್ಯ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳ ಕುರಿತು ಜನರಿಗೆ ಮಾಹಿತಿ ತಲುಪಿಸಲು ಹಾಗೂ ಪಕ್ಷ ಸಂಘಟನೆಗೆ ಮುಂದಿನ ಆರು ತಿಂಗಳು ವಿಶೇಷ ಅಭಿಯಾನ ನಡೆಸಲು ಪ್ರದೇಶ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸರ್ಕಾರದ ಸಾಧನೆಯನ್ನು ಜನರಿಗೆ ಮನವರಿಕೆ ಮಾಡುವ ವಿಷಯದಲ್ಲಿ ಕೇಂದ್ರದ ಯುಪಿಎ ಮೈತ್ರಿಕೂಟ ಹಿಂದೆ ಬಿದ್ದಿತ್ತು ಎಂಬ ಅಭಿಪ್ರಾಯ ಇದೆ. ಇಂಥ  ತಪ್ಪುಗಳು ರಾಜ್ಯದಲ್ಲಿ ಮರು­ಕಳಿಸ­­ದಂತೆ ಎಚ್ಚರಿಕೆ ವಹಿಸಲು ತೀರ್ಮಾನಿಸಲಾಗಿದೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಲೋಕ­ಸಭಾ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಹಿನ್ನಡೆ ಸಾಧಿಸ­ಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಚರ್ಚೆ ನಡೆದಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರಮೇಶ್ವರ್‌, ಎಐಸಿಸಿ ಕಾರ್ಯ­ದರ್ಶಿ­ಗಳಾದ ಶಾಂತಾರಾಂ ನಾಯ್ಕ್, ಡಾ.­ಚೆಲ್ಲ­ಕುಮಾರ್‌, ಸಚಿವ­ರಾದ ಕೆ.ಜೆ.­ಜಾರ್ಜ್‌ ಮತ್ತು ಡಿ.ಕೆ.ಶಿವಕುಮಾರ್‌ ಪಾಲ್ಗೊಂಡಿದ್ದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ  18ರಿಂದ 20 ಕಡೆ ಗೆಲುವು ಸಾಧಿಸುವುದಾಗಿ ಸಿದ್ದ­ರಾಮಯ್ಯ ಮತ್ತು ಪರಮೇಶ್ವರ್‌ ವಿಶ್ವಾಸ ವ್ಯಕ್ತ­ಪಡಿಸಿ­­ದ್ದಾರೆ. ಸ್ಥಳೀಯವಾಗಿ ಪಕ್ಷದ ವಿರುದ್ಧ­ವಾಗಿ ಕೆಲಸ ಮಾಡಿರುವ ಮುಖಂಡರ ವಿವರಗಳನ್ನೂ ನೀಡಿ­ದ್ದಾರೆ.

ಸಮಾವೇಶ, ಸಭೆ: ಜೂನ್‌ ತಿಂಗಳಲ್ಲಿ ಕೆಪಿಸಿಸಿ ಸರ್ವ ಸದಸ್ಯರ ಸಭೆ ನಡೆಸಲು, ಜೂನ್‌ ಅಥವಾ ಜುಲೈ ತಿಂಗಳಲ್ಲಿ ಎರಡು ದಿನಗಳ ಅವಧಿಯ ಪ್ರತಿನಿಧಿಗಳ ಸಮಾವೇಶ ನಡೆಸಲು ಯೋಚಿಸ­ಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಕ್ಕೆ ಡಿಸ್ಟಿಂಕ್ಷನ್‌: ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿಗ್ವಿ­ಜಯ್‌ ಸಿಂಗ್‌, ‘ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸದಸ್ಯರು ಒಂದು ವರ್ಷದ ಅವಧಿಯಲ್ಲಿ ಅತ್ಯು­ತ್ತಮ­­­ವಾಗಿ ಕೆಲಸ ಮಾಡಿದ್ದಾರೆ. ಇದ­ಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ’ ಎಂದರು. ಸರ್ಕಾರದ ಒಂದು ವರ್ಷದ ಅವಧಿಯ ಸಾಧನೆಗೆ ಎಷ್ಟು ಅಂಕ ನೀಡು­ತ್ತೀರಿ ಎಂಬ ಪ್ರಶ್ನೆಗೆ, ‘ಡಿಸ್ಟಿಂಕ್ಷನ್‌ನಲ್ಲಿ (ಅತ್ಯುತ್ತಮ ಶ್ರೇಣಿ) ಸರ್ಕಾರ ಉತ್ತೀರ್ಣವಾಗಿದೆ’ ಎಂದು ಅವರು ಹೇಳಿದರು.

ಪರಮೇಶ್ವರ್‌ಗೆ ‘ಮಂತ್ರಿ’ ಸ್ಥಾನ ಮಾತ್ರ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರಿಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಅವಕಾಶ ನೀಡಲು ಪಕ್ಷ ನಿರ್ಧರಿಸಿದೆ. ಸಚಿವ ಸಂಪುಟದಲ್ಲೂ ಅವರಿಗೆ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಮಗೆ ‘ಉಪ ಮುಖ್ಯಮಂತ್ರಿ’ ಸ್ಥಾನ ನೀಡುವಂತೆ ಪರಮೇಶ್ವರ್‌ ಕಾಂಗ್ರೆಸ್‌ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಅವರಿಗೆ ‘ಸಚಿವ’ ಸ್ಥಾನ ನೀಡು­ವುದಕ್ಕೆ ಮಾತ್ರ ಹೈಕಮಾಂಡ್‌ ಒಪ್ಪಿಕೊಳ್ಳಬಹುದು ಎನ್ನಲಾಗುತ್ತಿದೆ.

ವಿಧಾನ ಪರಿಷತ್‌ ಚುನಾವಣೆ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಪಕ್ಷ ಸಂಘಟನೆಗೆ ಅನುಕೂಲ ಆಗುವಂತಹವರಿಗೆ ಮಾತ್ರ ಟಿಕೆಟ್‌ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಲೋಕಸಭಾ ಚುನಾವಣಾ ಮತ ಎಣಿಕೆ ಬಳಿಕ ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ದಿಗ್ವಿಜಯ್‌ ಸಿಂಗ್‌ ಸೂಚಿಸಿದ್ದಾರೆ. ಹೀಗಾಗಿ ಶುಕ್ರವಾರದ ನಂತರ ಪರಮೇಶ್ವರ್‌ ಮತ್ತು ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆಯೂ ಈ ಭೇಟಿ ವೇಳೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT