ADVERTISEMENT

ಸರ್ಕಾರ ಬಿದ್ದರೂ ಸಮ್ಮೇಳನ ನಿಲ್ಲಲ್ಲ

ಸಮ್ಮೇಳನ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ: ಸಚಿವ ಎಸ್.ಕೆ.ಬೆಳ್ಳುಬ್ಬಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2013, 19:59 IST
Last Updated 23 ಜನವರಿ 2013, 19:59 IST
ವಿಜಾಪುರದ ಸೈನಿಕ ಶಾಲೆಯ ಆವರಣದಲ್ಲಿ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಬುಧವಾರ ಪೂಜೆ ನೆರವೇರಿಸಿದರು. ಮಲ್ಲಿಕಾರ್ಜುನ ಭೃಂಗೀಮಠ, ಸಂಗಮೇಶ ಬಾದವಾಡಗಿ, ಮಲ್ಲಿಕಾರ್ಜುನ ಯಂಡಿಗೇರಿ, ಶರಣಪ್ಪ ಕಂಚ್ಯಾಣಿ, ಕರ್ನಲ್ ಆರ್. ಬಾಲಾಜಿ. ಜೆ.ಸಿದ್ದಪ್ಪ, ಇಂದುಮತಿ ಲಮಾಣಿ  ಚಿತ್ರದಲ್ಲಿದ್ದಾರೆ
ವಿಜಾಪುರದ ಸೈನಿಕ ಶಾಲೆಯ ಆವರಣದಲ್ಲಿ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಬುಧವಾರ ಪೂಜೆ ನೆರವೇರಿಸಿದರು. ಮಲ್ಲಿಕಾರ್ಜುನ ಭೃಂಗೀಮಠ, ಸಂಗಮೇಶ ಬಾದವಾಡಗಿ, ಮಲ್ಲಿಕಾರ್ಜುನ ಯಂಡಿಗೇರಿ, ಶರಣಪ್ಪ ಕಂಚ್ಯಾಣಿ, ಕರ್ನಲ್ ಆರ್. ಬಾಲಾಜಿ. ಜೆ.ಸಿದ್ದಪ್ಪ, ಇಂದುಮತಿ ಲಮಾಣಿ ಚಿತ್ರದಲ್ಲಿದ್ದಾರೆ   

ವಿಜಾಪುರ: ಫೆಬ್ರುವರಿ 9ರಿಂದ 11ರ ವರೆಗೆ ಜರುಗಲಿರುವ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಂಟಪ ನಿರ್ಮಾಣಕ್ಕೆ ಇಲ್ಲಿಯ ಸೈನಿಕ ಶಾಲೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಬುಧವಾರ ಭೂಮಿ ಪೂಜೆ ನೆರವೇರಿಸಿದರು.

`ಸರ್ಕಾರ ಬೀಳುವುದಿಲ್ಲ. ಒಂದೊಮ್ಮೆ ಸರ್ಕಾರ ಬಿದ್ದರೂ ಸಾಹಿತ್ಯ ಸಮ್ಮೇಳನ ನಿಲ್ಲುವುದಿಲ್ಲ. ಸಾಹಿತಿಗಳು ಮತ್ತು ಅಧಿಕಾರಿಗಳು ಸಮ್ಮೇಳನ ನಡೆಸುತ್ತಾರೆ' ಎಂದು ಬೆಳ್ಳುಬ್ಬಿ ಹೇಳಿದರು.

`300 ಅಡಿ ಅಗಲ, 600 ಅಡಿ ಉದ್ದ ವಿಸ್ತೀರ್ಣದ ಮುಖ್ಯ ಮಂಟಪ, 50-100 ಅಡಿ ಅಳತೆಯ ವೇದಿಕೆ ನಿರ್ಮಿಸಲಾಗುತ್ತಿದೆ. 15 ಸಾವಿರ ಕುರ್ಚಿಗಳ ವ್ಯವಸ್ಥೆ, 100 ವಾಣಿಜ್ಯ ಹಾಗೂ 350 ಪುಸ್ತಕ ಮಳಿಗೆಗಳು, ಮಾಧ್ಯಮ ಕೇಂದ್ರ ನಿರ್ಮಿಸಲಾಗುವುದು. ಇದಕ್ಕೆ ರೂ 71 ಲಕ್ಷ ವೆಚ್ಚ ತಗುಲಲಿದ್ದು, ಕಾಮಗಾರಿಯನ್ನು ಸ್ಥಳೀಯ ರುಕ್ಮಾಂಗದ ಮಂಟಪ, ಬೆಂಗಳೂರಿನ ಎಂ.ಸಿ.ಎ. ಹಾಗೂ ಹುಬ್ಬಳ್ಳಿಯ ಗುತ್ತಿಗೆದಾರರಿಗೆ ನೀಡಲಾಗಿದೆ. ವಿದ್ಯುತ್ ಮತ್ತು ಧ್ವನಿವರ್ಧಕ ವ್ಯವಸ್ಥೆಯನ್ನು ಮಕಾನದಾರ ಲೈಟಿಂಗ್ ಅವರಿಗೆ ವಹಿಸಲಾಗಿದೆ. ಫೆಬ್ರುವರಿ 5ರ ವೇಳೆಗೆ ಮಂಟಪ ನಿರ್ಮಾಣ ಪೂರ್ಣಗೊಳ್ಳಲಿದೆ' ಎಂದರು.

`ಸೈನಿಕ ಶಾಲೆಯ ಆವರಣದಲ್ಲೇ ಊಟದ ವ್ಯವಸ್ಥೆ ಮಾಡಲಾಗುವುದು. ಪ್ರತಿ ಸಾವಿರ ಜನರಿಗೆ ಒಂದು ಊಟದ ಕೌಂಟರ್ ತೆರೆಯಲಾಗುವುದು' ಎಂದು ಹೇಳಿದರು. `ಸೈನಿಕ ಶಾಲೆ ಆವರಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಕೇಂದ್ರ ರಕ್ಷಣಾ ಇಲಾಖೆಯಿಂದ ಈಗಾಗಲೇ ಮೌಖಿಕ ಅನುಮತಿ ದೊರೆತಿದೆ. ಲಿಖಿತ ಅನುಮತಿ ಶೀಘ್ರವೇ ದೊರೆಯಲಿದ್ದು, ಈ ಕುರಿತಂತೆ ಯಾವುದೇ ಗೊಂದಲ ಬೇಡ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.