ADVERTISEMENT

ಸರ್ವರಿಗೂ ಭಾರತ ಮಾದರಿ: ದಲೈಲಾಮಾ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 19:30 IST
Last Updated 24 ಡಿಸೆಂಬರ್ 2013, 19:30 IST

ಮಂಡ್ಯ: ‘ಸರ್ವಧರ್ಮದವರಿಗೂ ಆಶ್ರಯ ನೀಡಿರುವ ಭಾರತವು ಎಲ್ಲ ರಾಷ್ಟ್ರಗಳಿಗೂ ಮಾದರಿ’ ಎಂದು ಟಿಬೆಟನ್‌ ಧರ್ಮಗುರು ದಲೈಲಾಮಾ ಮಂಗಳವಾರ ಇಲ್ಲಿ ಬಣ್ಣಿಸಿದರು. ಮೈಸೂರು ಜಿಲ್ಲೆಯ ಟಿಬೆಟನ್ ನಿರಾಶ್ರಿತರ ಶಿಬಿರ ಬೈಲುಕುಪ್ಪೆಗೆ ತೆರಳುತ್ತಿದ್ದ ಅವರು, ಮಂಡ್ಯದ ಪ್ರವಾಸಿ ಮಂದಿರ­ದಲ್ಲಿ ಕೆಲಕಾಲ ವಿಶ್ರಾಂತಿ ಪಡೆಯಲು ಬಂದಿದ್ದಾಗ ಸುದ್ದಿಗಾರ ರೊಂದಿಗೆ ಮಾತನಾಡಿದರು.

ಭಾರತದಲ್ಲಿ ಟಿಬೆಟನ್ನರಿಗೆ ಆಶ್ರಯ ಕೊಟ್ಟ ರಾಜ್ಯಗಳ ಪೈಕಿ ಕರ್ನಾಟಕದ ಕೊಡುಗೆ ಅಪಾರ. ರಾಜ್ಯದ ಈ ಕೊಡುಗೆಗಾಗಿ ಇಲ್ಲಿನ ಟಿಬೆಟನ್ನರು ಸದಾ ಚಿರಋಣಿಗಳು. ಇಲ್ಲಿನ ಜನರ ಪ್ರೀತಿ– ವಿಶ್ವಾಸವನ್ನು ಮರೆಯಲು ಸಾಧ್ಯವಿಲ್ಲ ಎಂದರು. ಮುಖ್ಯಮಂತ್ರಿಯಾಗಿದ್ದ ಎಸ್‌. ನಿಜಲಿಂಗಪ್ಪ ಅವರು, ಅಂದಾಜು 40 ಸಾವಿರ ನಿರಾಶ್ರಿತ ಟಿಬೆಟನ್ನರಿಗೆ ಆಶ್ರಯ ನೀಡಿದರು. ಸುಮಾರು 10 ಸಾವಿರ ಟಿಬೆಟನ್‌ ವಿದ್ಯಾರ್ಥಿಗಳಿಗೆ ವಿದ್ಯೆ ದಾನ ಮಾಡಿದರು ಎಂದು ಸ್ಮರಿಸಿದರು.

ಅದ್ದೂರಿ ಸ್ವಾಗತ (ಪಿರಿ­ಯಾಪಟ್ಟಣ ವರದಿ): ಧರ್ಮ­­­ಗುರು ದಲೈಲಾಮಾ ಅವರನ್ನು ಬೈಲು­ಕುಪ್ಪೆಯ ಟಿಬೆಟನ್‌ ನಿರಾಶ್ರಿತರು ಮಂಗಳ­ವಾರ ಸಾಂಪ್ರ­ದಾಯಿಕ ರೀತಿಯಲ್ಲಿ  ಸ್ವಾಗತಿಸಿದರು. ತಾಲ್ಲೂಕಿನ ಬೈಲುಕುಪ್ಪೆ ನಿರಾಶ್ರಿತರ ಶಿಬಿರದಲ್ಲಿ 13 ದಿನಗಳ ಕಾಲ ಧಾರ್ಮಿಕ ಪ್ರವಚನ ನೀಡಲು ಆಗಮಿ–ಸಿದ ದಲೈಲಾಮಾ ಅವರಿಗೆ ಸಾಂಪ್ರ­ದಾಯಿಕ ಉಡುಗೆ ತೊಟ್ಟಿದ್ದ ಟಿಬೆಟನ್‌ ನಿರಾಶ್ರಿತರು ಧಾರ್ಮಿಕ ಗೀತೆಗಳನ್ನು ಹಾಡುತ್ತಾ ಮಂಗಳ ವಾದ್ಯದೊಂದಿಗೆ ಸ್ವಾಗತಿಸಿದರು.

ಟಿಬೆಟನ್ ನಿರಾಶ್ರಿತರ ಶಿಬಿರದ ಸೆಟ್ಲ್‌­ಮೆಂಟ್ ಅಧಿಕಾರಿ ಮಾತನಾಡಿ, ಪ್ರವ­ಚನ ಆಲಿಸಲು ಮಲೇಷ್ಯಾ, ಕೆನಡಾ, ಸಿಂಗಪುರ ಸೇರಿದಂತೆ ಜಗ­ತ್ತಿನ  ನಾನಾ ಭಾಗಗಳಿಂದ ಸಾವಿರಾರು ಅಭಿ­­ಮಾನಿ­­ಗಳು ಆಗಮಿಸಿದ್ದಾರೆ ಎಂದರು. ಸಿಪಿಐ ಪ್ರಸನ್ನಕುಮಾರ್ ಮಾಹಿತಿ ನೀಡಿ, ಕಾರ್ಯಕ್ರಮಕ್ಕೆ 500 ಪೊಲೀ­ಸರು, 40 ಅಧಿಕಾರಿಗಳನ್ನು ನಿಯೋಜಿಸ­ಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಹೇಳಿದರು. ಟಿಬೆಟನ್ ಮುಖಂಡರಾದ ತೆನ್ಜಿನ್ ಡೋಲ್ಮಾ, ತುಪ್ತಿನ್, ದವಾಸಿರಿಂಗ್, ತೆನ್ಜಿನ್, ಕರ್ಮಪ್ಪ, ಶವಾಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.