ADVERTISEMENT

ಸಹಾಯಧನದಿಂದಾಗಿ ಬೆಸ್ಕಾಂಗೆ ಆರ್ಥಿಕ ಹೊರೆ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಸ್ಕಾಂ ಗ್ರಾಹಕರ ಜಾಗೃತಿ ಅರಿವು ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 20:10 IST
Last Updated 5 ಫೆಬ್ರುವರಿ 2019, 20:10 IST
ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಎಚ್‌.ಡಿ.ಕುಮಾರಸ್ವಾಮಿ ಮತ್ತು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರು ಮಾತುಕತೆ ನಡೆಸಿದರು    –ಪ್ರಜಾವಾಣಿ ಚಿತ್ರ
ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಎಚ್‌.ಡಿ.ಕುಮಾರಸ್ವಾಮಿ ಮತ್ತು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರು ಮಾತುಕತೆ ನಡೆಸಿದರು    –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಮತ್ತು ಸಹಾಯಧನ ನೀಡುತ್ತಿರುವುದರಿಂದಲೇ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ(ಬೆಸ್ಕಾಂ) ಮೇಲೆ ಆರ್ಥಿಕ ಹೊರೆಬಿದ್ದಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಬೆಸ್ಕಾಂ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಬೆಸ್ಕಾಂ ಗ್ರಾಹಕರ ಜಾಗೃತಿ ಅರಿವು ಸಮ್ಮೇಳನ–2019, ಸೌರ ಮೇಲ್ಚಾವಣಿ ಘಟಕ ಸಾಮರ್ಥ್ಯದ ಮೌಲ್ಯಮಾಪನ ಸಾಧನ ಮತ್ತು ವಿದ್ಯುಚ್ಛಕ್ತಿ ಚಾಲಿತ ವಾಹನಗಳ ರೀಚಾರ್ಜಿಂಗ್‌ ಸ್ಟೇಷನ್‌ನ ಲಾಂಛನ ಬಿಡುಗಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೃಷಿಕರ ಬದುಕಿಗೆ ನೆರವಾಗಿರುವ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಲು ಸರ್ಕಾರ ಅಂದಾಜು ₹3,000 ಕೋಟಿ ವ್ಯಯಿಸುತ್ತಿದೆ. ಅಲ್ಲದೆ, ಸರಿಸುಮಾರು ₹ 11,000 ಕೋಟಿಯಷ್ಟು ಸಹಾಯಧನ ನೀಡುತ್ತಿದೆ. ಬೆಸ್ಕಾಂ ಸಿಬ್ಬಂದಿ ಸಂಸ್ಥೆಯನ್ನು ನಷ್ಟದಿಂದ ಹೊರತಂದು, ಲಾಭದ ಪಥದಲ್ಲಿ ನಡೆಸಲು ಶ್ರಮಿಸುತ್ತಿದ್ದಾರೆ. ಸಂಸ್ಥೆಯಲ್ಲಿ ಇನ್ನೂ ಇರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ADVERTISEMENT

‘ರೈತರು ಮತ್ತು ಕೈಗಾರಿಕೆಗಳಿಗೆ ದಿನದ 24 ಗಂಟೆಯೂ ಅಗತ್ಯವಿರುವಷ್ಟು ವಿದ್ಯುತ್‌ ಸರಬರಾಜಿಗೆ ಸರ್ಕಾರ ಯೋಜಿಸುತ್ತಿದೆ. ಈ ಎರಡು ವಲಯದಲ್ಲಿನ ಬಳಕೆದಾರರು ಮೀಟರ್‌ಗಳನ್ನು ಅಳವಡಿಸಿಕೊಂಡರೆ, ಶೇ 14ರಷ್ಟು ಸೋರಿಕೆಯ ಎಲ್ಲಿಯಾಗುತ್ತಿದೆ ಎಂದು ನಿಖರವಾಗಿ ಗೊತ್ತಾಗಲಿದೆ. ಅದರಿಂದ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ’ ಎಂದು ಹೇಳಿದರು.

‘ಬೆಸ್ಕಾಂನಲ್ಲಿ ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆ ಇರುವುದೇ ಬಹುತೇಕರಿಗೆ ಗೊತ್ತಿಲ್ಲ. ಇದರ ಉಪಯೋಗವನ್ನು ಗ್ರಾಹಕರು ಪಡೆಯಬೇಕು’ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಲೋಕಪಾಲ ಎನ್‌.ಎಸ್‌.ಪಟ್ಟಣಶೆಟ್ಟಿ ಸಲಹೆ ನೀಡಿದರು.

ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಮೂಹದ ಸಹಸ್ಥಾಪಕ ಶ್ರೀನಿವಾಸ ಅಲವಿಲ್ಲಿ, ‘ನಗರದಲ್ಲಿ ನಿರ್ಮಾಣಗೊಂಡಿರುವ ಅನಧಿಕೃತ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡಬಾರದು’ ಎಂದು ಒತ್ತಾಯಿಸಿದರು.

‘ಜನರ ಅಗತ್ಯವನ್ನು ಪೂರೈಸಲುಬೆಸ್ಕಾಂ ಸಿಬ್ಬಂದಿ ಜೀವವನ್ನು ಲೆಕ್ಕಿಸದೆ, ಅಪಾಯಕಾರಿ ಕೆಲಸ ಮಾಡುತ್ತಿದ್ದಾರೆ. ಅವರ ಶ್ರಮ ಗೌರವಿಸಬೇಕಿದೆ’ ಎಂದು ಅವರು ಪ್ರಶಂಸಿದರು.

‘ಹೆಚ್ಚು ಸಹಾಯಧನ ಕೊಟ್ಟಿದ್ದೇವೆ’

‘ಕೇಂದ್ರ ಸರ್ಕಾರ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಸಣ್ಣ ರೈತರಿಗೆ ವರ್ಷಕ್ಕೆ ₹ 6,000 ನೀಡಲು ಹೊರಟಿದೆ. ನಮ್ಮ ರಾಜ್ಯದ 60 ಲಕ್ಷ ರೈತರಿಗೆ ಈ ನಿಧಿ ವಿತರಿಸಲು ₹ 2,098 ಕೋಟಿ ಬೇಕಾಗುತ್ತದೆ. ಆದರೆ, ನಾವು ರೈತರ ಪಂಪ್‌ಸೆಟ್‌ಗಳಿಗೆ ₹ 11,000 ಕೋಟಿ ಸಹಾಯಧನ ನೀಡುತ್ತಿದ್ದೇವೆ. ಕೇಂದ್ರಕ್ಕಿಂತ ನಾವೇ ಹೆಚ್ಚಿನ ಅನುದಾನವನ್ನು ರೈತರಿಗೆ ಕೊಡುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ಸರ್ಕಾರದ ಗಾಡಿಗೆ ಬಿಜೆಪಿಯೇ ಗುದ್ಮೊಟ್ಟೆ’

‘ಮೈತ್ರಿ ಸರ್ಕಾರದ ಎತ್ತಿನಗಾಡಿ ಸುಭದ್ರವಾಗಿ ಸಾಗುತ್ತಿದೆ. ತೆಂಗಿನ ಗರಿಯ ಗುದ್ಮೊಟ್ಟೆಯಂತೆ ಬಿಜೆಪಿಯೇ ಸರ್ಕಾರ ಗಾಡಿ ಚಾಲನೆಗೆ ಅಡ್ಡಗಾಲು ಹಾಕುತ್ತಿದೆ’ ಎಂದು ಹೋಲಿಕೆ ನೀಡಿ ಮುಖ್ಯಮಂತ್ರಿ ಕುಟುಕಿದರು.

* ಪಡೆದ ಸಾಲ ಮತ್ತು ಬಿಲ್‌ಗಳು ವಸೂಲಾಗದೆ ಬೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂಗಳ ಮೇಲೆ‌ ₹16,000 ಕೋಟಿ ಆರ್ಥಿಕ ಹೊರೆಯಿದೆ

ಎಚ್.ಡಿ.ಕುಮಾರಸ್ವಾಮಿ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.