ADVERTISEMENT

ಸಾಧಕಿಯರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುಳಕ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ನಂದಾದೇವಿ (ಎಡದಿಂದ), ಲಕ್ಷ್ಮಿ ಡಿ.ಗೌಡರ, ಕೆ.ಪಿ.ಅರುಣಾಕುಮಾರಿ, ರಚನಾ ಮಹೇಶ್‌, ಎಚ್‌.ಆರ್‌.ಶಾಲಿನಿ, ಕೆ.ಎನ್‌.ಸವಿತಾ ರಾಮು, ಅನುಷಾ ಎನ್‌.ಆರ್‌.ರಮೇಶ್‌ ಹಾಗೂ ಸಲ್ಮಾ ತಾಜ್‌ ಅವರಿಗೆ ‘ಕಿತ್ತೂರು ರಾಣಿ ಚನ್ನಮ್ಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್‌, ರಾಜ್ಯ ಸಾಂಬಾರು ಬೆಳೆಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಶಿಕಲಾ ಕವಲಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್‌, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ಉಮಾಶ್ರೀ, ವಿಧಾನಪರಿಷತ್‌ ಸದಸ್ಯೆಯರಾದ ಜಯಮ್ಮ ಹಾಗೂ ವಿನಿಶಾ ನಿರೊ ಇದ್ದಾರೆ –ಪ್ರಜಾವಾಣಿ ಚಿತ್ರ
ನಂದಾದೇವಿ (ಎಡದಿಂದ), ಲಕ್ಷ್ಮಿ ಡಿ.ಗೌಡರ, ಕೆ.ಪಿ.ಅರುಣಾಕುಮಾರಿ, ರಚನಾ ಮಹೇಶ್‌, ಎಚ್‌.ಆರ್‌.ಶಾಲಿನಿ, ಕೆ.ಎನ್‌.ಸವಿತಾ ರಾಮು, ಅನುಷಾ ಎನ್‌.ಆರ್‌.ರಮೇಶ್‌ ಹಾಗೂ ಸಲ್ಮಾ ತಾಜ್‌ ಅವರಿಗೆ ‘ಕಿತ್ತೂರು ರಾಣಿ ಚನ್ನಮ್ಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್‌, ರಾಜ್ಯ ಸಾಂಬಾರು ಬೆಳೆಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಶಿಕಲಾ ಕವಲಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್‌, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ಉಮಾಶ್ರೀ, ವಿಧಾನಪರಿಷತ್‌ ಸದಸ್ಯೆಯರಾದ ಜಯಮ್ಮ ಹಾಗೂ ವಿನಿಶಾ ನಿರೊ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರವೀಂದ್ರ ಕಲಾಕ್ಷೇತ್ರ ದಲ್ಲಿ ‘ಸ್ತ್ರೀಶಕ್ತಿ’ಯ ಸಮಾಗಮ ವಾಗಿತ್ತು. ವೇದಿಕೆಯ ಮೇಲೆ ಹಾಗೂ ಕೆಳಗೆ ಅವರದ್ದೇ ಕಲರವ. ಕೆಲವರಿಗೆ ಪ್ರಶಸ್ತಿಯ ಪುಳಕ, ಮತ್ತೆ ಕೆಲವರಿಗೆ ಸ್ಫೂರ್ತಿಯ ತಾಣ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ಯಲ್ಲಿ ಕಂಡುಬಂದ ದೃಶ್ಯಗಳಿವು.

ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು ಮಹಿಳೆಯರು, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮೂವರು, ಕ್ರೀಡೆಯಲ್ಲಿ ಸಾಧನೆ ಮಾಡಿದ ಇಬ್ಬರು, ಶಿಕ್ಷಣಕ್ಕೆ ಕೊಡುಗೆ ನೀಡಿದ ಒಬ್ಬರು ಹಾಗೂ ಶೌರ್ಯ ಮೆರೆದ ಒಬ್ಬರಿಗೆ ‘ಕಿತ್ತೂರು ರಾಣಿ ಚನ್ನಮ್ಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ತಲಾ ₹25 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.

ಬೆಂಗಳೂರು ನಗರ, ಕೋಲಾರ, ಧಾರವಾಡದ ಸ್ತ್ರೀಶಕ್ತಿ ಸಂಘಗಳಿಗೆ ‘ರಾಜ್ಯಮಟ್ಟದ ಅತ್ಯುತ್ತಮ ಸ್ತ್ರೀಶಕ್ತಿ ಗುಂಪು’ ಪ್ರಶಸ್ತಿ, ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರ್ಗಿ ಜಿಲ್ಲೆಯ ಸ್ತ್ರೀಶಕ್ತಿ ಸಂಘಗಳಿಗೆ ‘ವಿಭಾಗ ಮಟ್ಟದ ಉತ್ತಮ ಸ್ತ್ರೀಶಕ್ತಿ ಗುಂಪು’ ಪ್ರಶಸ್ತಿ, ಬೆಂಗಳೂರು
ಉತ್ತರ ತಾಲ್ಲೂಕು ಒಕ್ಕೂಟ, ನೆಲಮಂಗಲ ತಾಲ್ಲೂಕು ಒಕ್ಕೂಟ ಮತ್ತು ಸೊರಬ ತಾಲ್ಲೂಕು ಒಕ್ಕೂಟಗಳಿಗೆ ‘ರಾಜ್ಯಮಟ್ಟದ ಉತ್ತಮ ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ’ ಪ್ರಶಸ್ತಿ ನೀಡಲಾಯಿತು.

ADVERTISEMENT

ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಗುಂಜ ಬಬಲಾದ ಗ್ರಾಮದ ನಂದಾದೇವಿ 161 ಶೌಚಾಲಯಗಳನ್ನು ಕಟ್ಟಿಸಿದ್ದಾರೆ.

‘ಗ್ರಾಮೀಣ ಜನರಿಗೆ ಶೌಚಾಲಯಗಳ ಮಹತ್ವ, ಬಯಲು ಬಹಿರ್ದೆಸೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಿದ್ದೇನೆ. ಚನ್ಮಮ್ಮ ಸ್ವಸಹಾಯ ಸಂಘದ ಆರ್ಥಿಕ ಸಹಾಯ ಪಡೆದು ಶೌಚಾಲಯಗಳನ್ನು ನಿರ್ಮಿಸಲಾಗಿದೆ’ ಎಂದು ನಂದಾದೇವಿ ತಿಳಿಸಿದರು.

‘ಉದ್ಯೋಗ ಖಾತರಿ ಯೋಜನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಇದರ ಫಲವಾಗಿ ಗ್ರಾಮ ಪಂಚಾಯಿತಿಗೆ ಪ್ರತಿವರ್ಷ ₹1 ಕೋಟಿ ಅನುದಾನ ಸಿಗುತ್ತಿದೆ’ ಎಂದರು.

ರಂಗಕರ್ಮಿ ಮಾಲತಿ ಸುಧೀರ್‌, ‘45 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೇನೆ. ರಂಗಭೂಮಿ ಕಲಾವಿದೆಯನ್ನು ಗುರುತಿಸಿ ಗೌರವಿಸಿದ್ದು ಖುಷಿ ನೀಡಿದೆ’ ಎಂದು ಹೇಳಿದರು.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಪದ್ಮಜಾ ಜಯರಾಮ್‌ ಬಡ ಮಕ್ಕಳಿಗೆ ಭರತನಾಟ್ಯ ಹೇಳಿಕೊಡುತ್ತಿದ್ದಾರೆ. ‘ಕಾಮಾಕ್ಷಿಪಾಳ್ಯ, ನಾಗರಬಾವಿ ಹಾಗೂ ನಂದಿನಿ ಬಡಾವಣೆಯಲ್ಲಿ ಭರತನಾಟ್ಯ ತರಗತಿಗಳನ್ನು ನಡೆಸುತ್ತಿದ್ದೇನೆ. ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಆಸಕ್ತಿ ಇರುವ ಮಕ್ಕಳಿಗೆ ಉಚಿತವಾಗಿ ಹೇಳಿಕೊಡುತ್ತಿದ್ದೇನೆ. ಪ್ರತಿ ವರ್ಷ 60 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಪದ್ಮಜಾ ತಿಳಿಸಿದರು.

ಬೆಂಗಳೂರಿನ ಸಂಪಂಗಿರಾಮನಗರದ ಕೆ.ಎನ್‌.ಸವಿತಾ ರಾಮು, ‘ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದೇನೆ. ಶಾಲಾ ಶುಲ್ಕ ಪಾವತಿಸಿ ಹಾಗೂ ಪುಸ್ತಕಗಳನ್ನು ವಿತರಿಸುತ್ತಿ ದ್ದೇನೆ. ಕೊಳೆಗೇರಿ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ನೆರವಾಗುತ್ತಿದ್ದೇನೆ’ ಎಂದರು.

ಬಾಗಲಕೋಟೆಯ ಲಕ್ಷ್ಮಿ ಡಿ.ಗೌಡರ, ‘20 ವರ್ಷಗಳಿಂದ ವಿದ್ಯಾರ್ಥಿಗಳು ಹಾಗೂ ಕೈದಿಗಳಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದೇನೆ. ಕೈದಿಗಳ ಮನಃಪರಿವರ್ತನೆ ಮಾಡಲು ಪ್ರಯತ್ನಿಸುತ್ತಿದ್ದೇನೆ’ ಎಂದು ಹೇಳಿದರು.

ಮೈಸೂರಿನ ಓಂ ಶ್ರೀಸಾಯಿ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಎಚ್‌.ಪಿ.ರಾಣಿಪ್ರಭಾ, ‘ಎಸ್ಸೆಸ್ಸೆಲ್ಸಿ ಬಳಿಕ ವಿದ್ಯಾಭ್ಯಾಸ ಮುಂದುವರಿಸಲು ಆಗದಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಊಟ, ವಸತಿ ಜತೆಗೆ ನರ್ಸಿಂಗ್‌ ಸಹಾಯಕರ ತರಬೇತಿ ನೀಡಲಾಗುತ್ತಿದೆ’ ಎಂದರು.

‘ಶೀಘ್ರವೇ ಮಹಿಳಾ ನೀತಿ ಕರಡು ಸಿದ್ಧ’
‘ಮಹಿಳೆಯರ ಅಭಿವೃದ್ಧಿಗೆ ಯೋಜನೆ ರೂಪಿಸಲು ಮಹಿಳಾ ನೀತಿಯನ್ನು ಘೋಷಿಸಲಾಗಿದೆ. ಇದರ ಕರಡು ಇನ್ನೆರಡು ದಿನಗಳಲ್ಲಿ ಸಿದ್ಧವಾಗಲಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತಿಳಿಸಿದರು.

ನವಜಾತ ಶಿಶುಗಳನ್ನು ತಿಪ್ಪೆಗುಂಡಿಗೆ ಎಸೆಯುವುದನ್ನು ತಪ್ಪಿಸುವ ಉದ್ದೇಶದಿಂದ ‘ಮಮತೆಯ ತೊಟ್ಟಿಲು’ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ವಿವರಿಸಿದರು.

ಮಹಿಳೆಯರಲ್ಲಿ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ಮಾತೃಪೂರ್ಣ ಯೋಜನೆ ತಂದಿದ್ದು, ಶೇ 70ರಷ್ಟು ಜಾರಿಯಾಗಿದೆ. ಘಟ್ಟ ಪ್ರದೇಶಗಳ ಗರ್ಭಿಣಿಯರು ಹಾಗೂ ಬಾಣಂತಿಯರ ಮನೆಗಳಿಗೆ ಬೈಕ್‌ಗಳ ಮೂಲಕ ಆಹಾರ ತಲುಪಿಸಲಾಗುತ್ತಿದೆ. ಜೋಯಿಡಾ ಸೇರಿದಂತೆ ಬೇರೆ ಕಡೆಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತದೆ ಎಂದರು.

*
ಆ್ಯಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಳ್ಳಲು ₹20 ಲಕ್ಷ ಸಹಾಯಧನ, ₹3 ಸಾವಿರ ಪಿಂಚಣಿ ನೀಡಲಾಗುತ್ತದೆ.
–ಉಮಾಶ್ರೀ, ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.