ADVERTISEMENT

ಸಾಮರಸ್ಯಕ್ಕೆ ಸಾಹಿತ್ಯ ಪ್ರೇರಕವಾಗಲಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2011, 19:30 IST
Last Updated 24 ನವೆಂಬರ್ 2011, 19:30 IST
ಸಾಮರಸ್ಯಕ್ಕೆ ಸಾಹಿತ್ಯ ಪ್ರೇರಕವಾಗಲಿ
ಸಾಮರಸ್ಯಕ್ಕೆ ಸಾಹಿತ್ಯ ಪ್ರೇರಕವಾಗಲಿ   

ಬೆಳ್ತಂಗಡಿ: ಧರ್ಮ ಮತ್ತು ಸಾಹಿತ್ಯ ಕೋಮು ಸೌಹಾರ್ದದ ಜತೆಗೇ ಸಾಮಾಜಿಕ ಶಾಂತಿ ಹಾಗೂ ಸುವ್ಯವಸ್ಥೆಗೂ ಪ್ರೇರಕವಾಗಬೇಕು. ಇತಿಹಾಸದ ದೃಷ್ಟಿಯಿಂದ ಎರಡನೇ ಸ್ಥಾನದಲ್ಲಿರುವ ದ್ರಾವಿಡ ಭಾಷಾ ಬಳಗಕ್ಕೆ ಸೇರಿದ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ನಮ್ಮ ನಾಡು-ನುಡಿಗೆ ಸಂದ ಗೌರವ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ. ಎನ್.ಪ್ರಭುದೇವ ಹೇಳಿದರು.

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನದ 79ನೇ ಅಧಿವೇಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಳೆಗನ್ನಡದಲ್ಲಿ ಪಂಪ, ಪೊನ್ನ, ರನ್ನ ಮೊದಲಾದ ಸಾಹಿತಿಗಳು ನಾಡು-ನುಡಿಗೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ನಡುಗನ್ನಡದ ಹರಿಹರನ ರಗಳೆಗಳು, ರಾಘವಾಂಕನ ಸಾಂಗತ್ಯ ಸಾಹಿತ್ಯವೂ ಸಾಮಾಜಿಕ ಸಾಮರಸ್ಯಕ್ಕೆ ಮಹತ್ವಪೂರ್ಣ ಕೊಡುಗೆ ನೀಡಿವೆ. ಜಾತಿ-ಮತ, ಭೇದ ಹೋಗಲಾಡಿಸುವಲ್ಲಿ ವಚನ ಸಾಹಿತ್ಯ ಸಾಮಾಜಿಕ ಕ್ರಾಂತಿಯನ್ನೇ ಮಾಡಿದೆ ಎಂದು ಬಣ್ಣಿಸಿದರು.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ತಮ್ಮ ಕಾರ್ಯಕ್ಷೇತ್ರವನ್ನು ಮೀರಿ ರಾಜ್ಯ ಮಟ್ಟದಲ್ಲಿ ರಾಜಧರ್ಮವನ್ನು ಸ್ಥಾಪಿಸುವ ರೂವಾರಿ ಆಗಬೇಕು ಎಂದು ಗಮನ ಸೆಳೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ವಿಮರ್ಶಕ ಧಾರವಾಡದ ಗಿರಡ್ಡಿ ಗೋವಿಂದರಾಜು ಅವರು ಮಾತನಾಡಿ, ನಮ್ಮ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕೀಳರಿಮೆ ಸಲ್ಲ. ದೇಸೀ ಸಂಸ್ಕೃತಿ ಭದ್ರ ಬುನಾದಿ ಮೇಲೇ ನಮ್ಮ ಭಾಷೆ ಮತ್ತು ಸಂಸ್ಕೃತಿ ಬೆಳೆಯಬೇಕು ಎಂದು ನುಡಿದರು.

ಭಾರತೀಯರಿಗೆ ಇತಿಹಾಸದ ಜ್ಞಾನವಿಲ್ಲ ಹಾಗೂ ಸೂಕ್ತ ದಾಖಲೆ ಇಟ್ಟುಕೊಳ್ಳುವ ಪದ್ಧತಿ ಇಲ್ಲ. ಹೀಗಾಗಿ ಬ್ರಿಟಿಷರು ಮ್ಯಾಕ್ಸ್‌ಮುಲ್ಲರ್‌ನಂತಹ ಆಡಳಿತಗಾರನ ಮೂಲಕ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಲು ಇಂಡಾಲಜಿ ಎಂಬ ವಿಷಯದ ಅಧ್ಯಯನ ಆರಂಭಿಸಿದರು.

ಬ್ರಿಟಿಷರು ಹೋದಲೆಲ್ಲ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಪ್ರಚಾರ, ಪ್ರಸಾರ ಮಾಡಿದರೆ, ಭಾರತೀಯರು ಉದ್ಯೋಗ ಮತ್ತು ಹಣದ ಲಾಲಸೆಯಿಂದ ವಿದೇಶಗಳಿಗೆ ಹೋಗಿ ತಮ್ಮ ಮೂಲ ಭಾಷೆ ಮತ್ತು ಸಂಸ್ಕೃತಿ ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು. 

ಲೇಖಕಿ ರೂಪಾ ಹಾಸನ `ಸಾಹಿತ್ಯ ಮತ್ತು ಸಾಮಾಜಿಕ ಪರಿವರ್ತನೆಯ ಯುಗದಲ್ಲಿ ಸ್ತ್ರೀ~ ವಿಷಯವಾಗಿ, ಹೊಸಪೇಟೆ ಡಾ. ಬಸವರಾಜ ಮಲಶೆಟ್ಟಿ, `ಅವಸರದ ಬದುಕಿಗೆ ಜಾನಪದ~ ವಿಷಯದಲ್ಲಿ ಹಾಗೂ ಸತ್ಯನಾರಾಯಣ ಮಲ್ಲಿಪಟ್ಣ `ಸಮಕಾಲೀನ ಬದುಕು ಮತ್ತು ಭಕ್ತಿ ಸಾಹಿತ್ಯ~ದ ಬಗ್ಗೆ ಉಪನ್ಯಾಸ ನೀಡಿದರು.

ಯಕ್ಷಗಾನ ಕಮ್ಮಟ: ನಶಿಸಿಸುತ್ತಿರುವ ಜಿಲ್ಲೆಯ ಗಂಡುಕಲೆ ಯಕ್ಷಗಾನಕ್ಕೆ ಕಾಯಕಲ್ಪ ನೀಡುವ ಉದ್ದೇಶದಿಂದ ಧರ್ಮಸ್ಥಳದಲ್ಲಿ ಸದ್ಯದಲ್ಲೇ ಯಕ್ಷಗಾನದ ವಿವಿಧ ಪ್ರಕಾರಗಳ ಬಗ್ಗೆ ರಾಜ್ಯ ಮಟ್ಟದ ಕಮ್ಮಟ ಆಯೋಜಿಸಲಾಗುವುದು ಎಂದು ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು. 

ಪ್ರೊ. ಎಸ್.ಪ್ರಭಾಕರ್, ಡಿ. ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್. ಹೇಮಾವತಿ ವಿ.ಹೆಗ್ಗಡೆ ಮತ್ತು ಡಿ. ಶ್ರೇಯಸ್ ಕುಮಾರ್ ಇದ್ದರು.

ರಾತ್ರಿ ಶ್ರೀ ಮಂಜುನಾಥ ಸ್ವಾಮಿ ಗೌರಿಮಾರುಕಟ್ಟೆ ಉತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಬಂದಿದ್ದ ಲಕ್ಷಕ್ಕೂ ಅಧಿಕ ಭಕ್ತರು ಉತ್ಸವ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.