ADVERTISEMENT

ಸಾಮಾಜಿಕ ನ್ಯಾಯದಿಂದ ನವಭಾರತ

9ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂತಿಯಲ್ಲಿ ಕೇಂದ್ರ ಸಚಿವ ರಾಜನಾಥ ಸಿಂಗ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST
ನಗರದ ಅರಮನೆ ಮೈದಾನದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು ಆಯೋಜಿಸಿದ್ದ 9ನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಪತ್ರವನ್ನು ಕಾಳಹಸ್ತೇಂದ್ರ ಸ್ವಾಮೀಜಿ ಸಲ್ಲಿಸಿದರು (ಎಡದಿಂದ) ರವಿಶಂಕರ್ ಗುರೂಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿಜಿಪಿ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾದ್ಯಕ್ಷ ಕೆ.ಪಿ.ನಂಜುಂಡಿ, ಕೇಂದ್ರ ಸಚಿವ ಅನಂತಕುಮಾರ್, ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಹಾಗೂ ಇತರರು ಚಿತ್ರದಲ್ಲಿದ್ದಾರೆ. –ಪ್ರಜಾವಾಣಿ ಚಿತ್ರ
ನಗರದ ಅರಮನೆ ಮೈದಾನದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು ಆಯೋಜಿಸಿದ್ದ 9ನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಪತ್ರವನ್ನು ಕಾಳಹಸ್ತೇಂದ್ರ ಸ್ವಾಮೀಜಿ ಸಲ್ಲಿಸಿದರು (ಎಡದಿಂದ) ರವಿಶಂಕರ್ ಗುರೂಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿಜಿಪಿ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾದ್ಯಕ್ಷ ಕೆ.ಪಿ.ನಂಜುಂಡಿ, ಕೇಂದ್ರ ಸಚಿವ ಅನಂತಕುಮಾರ್, ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಹಾಗೂ ಇತರರು ಚಿತ್ರದಲ್ಲಿದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಕ್ಕರೆ ಮಾತ್ರ ನವಭಾರತ ನಿರ್ಮಾಣದ ಕನಸು ಈಡೇರಲು ಸಾಧ್ಯ ಹಾಗೂ ದೇಶ ಸಾಮರಸ್ಯದಿಂದ ಇರಲು ಸಾಧ್ಯ’ ಎಂದು ಕೇಂದ್ರ ಗೃಹಸಚಿವ ರಾಜನಾಥ ಸಿಂಗ್‌ ಅಭಿಪ್ರಾಯಪಟ್ಟರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ಇಲ್ಲಿ ಭಾನುವಾರ ಏರ್ಪಡಿಸಿದ್ದ 9ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂತಿ ಹಾಗೂ ವಿಶ್ವಕರ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2022ರ ಒಳಗೆ ನವಭಾರತ ನಿರ್ಮಿಸುವ ಕನಸನ್ನು ಪ್ರಧಾನಿ ಹೊಂದಿದ್ದಾರೆ. ಇದು ಈಡೇರಬೇಕಾದರೆ ರಾಜಕೀಯ ಮನೋಭೂಮಿಕೆ ಬದಲಾಗಬೇಕು. ಹಿಂದುಳಿದ ವರ್ಗಕ್ಕೆ ಸೇರಿದ ಎಲ್ಲ ಜಾತಿಯವರಿಗೂ ಅಧಿಕಾರ ಹಾಗೂ ಅವಕಾಶಗಳು ಸಮಾನವಾಗಿ ಸಿಗಬೇಕು’ ಎಂದರು.

ADVERTISEMENT

‘ಸಾಮಾಜಿಕ ನ್ಯಾಯ ಭಿಕ್ಷೆ ಅಲ್ಲ, ಅದು ಅಧಿಕಾರಯುತ ಹಕ್ಕು. ಈ ಉದ್ದೇಶದಿಂದಲೇ ರಾಷ್ಟ್ರೀಯ ಹಿಂದುಳಿದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ ಆಗಲು ವಿರೋಧ ಪಕ್ಷಗಳು ಬಿಡುತ್ತಿಲ್ಲ’ ಎಂದು ದೂರಿದರು.

‘ಹಿಂದುಳಿದ ವರ್ಗಗಳ ಮೀಸಲಾತಿ ಸೌಲಭ್ಯವನ್ನೂ ಕೆಲವೇ ಜಾತಿಗಳು ಅನುಭವಿಸುತ್ತಿವೆ. ತೀರಾ ಹಿಂದುಳಿದವರಿಗೆ ಈ ಸವಲತ್ತು ಸಿಗಬೇಕಾದರೆ ಒಳಮೀಸಲಾತಿ ಜಾರಿ ಆಗಬೇಕು. ಈ ಸಲುವಾಗಿ ಪ್ರಧಾನಿ ಸಮಿತಿಯೊಂದನ್ನು ರಚಿಸಿದ್ದಾರೆ’ ಎಂದರು.

‘ಭಾರತವೀಗ ದುರ್ಬಲ ರಾಷ್ಟ್ರವಾಗಿ ಉಳಿದಿಲ್ಲ. ಚೀನಾಕ್ಕೆ ಕೂಡಾ ಇದು ಮನವರಿಕೆ ಆಗಿದೆ. ಹಾಗಾಗಿಯೇ ದೋಕಲಾ ಬಿಕ್ಕಟ್ಟು ಸಂಘರ್ಷವಿಲ್ಲದೆಯೇ ಬಗೆಹರಿಯಿತು. ದೇಶದೊಳಗೆ ಉಗ್ರರನ್ನು ಕಳುಹಿಸುವ ಚಾಳಿಯನ್ನು ಪಾಕಿಸ್ತಾನ ಬಿಟ್ಟಿಲ್ಲ. ನಮ್ಮ ಸೇನೆ ದಿನಕ್ಕೆ 2ರಿಂದ 6 ಉಗ್ರರನ್ನು ಸದೆಬಡಿಯುತ್ತಿದೆ. ನಮ್ಮಿಂದ ಮೊದಲ ಗುಂಡು ಸಿಡಿಯಬಾರದು. ಪಾಕಿಸ್ತಾನ ಮೊದಲು ಗುಂಡು ಹಾರಿಸಿದರೆ ನಮ್ಮ ತುಪಾಕಿನಿಂದ ಗುಂಡು ಹಾರುವುದು ನಿಲ್ಲಬಾರದು ಎಂಬುದು ನಮ್ಮ ನಿಲುವು’ ಎಂದರು.

ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ, ‘ರಾಜಕೀಯ ಶಕ್ತಿ ಪಡೆದರೆ ಮಾತ್ರ ನಮ್ಮ ಸಮಾಜವನ್ನು ಗುರುತಿಸುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ವಿಶ್ವಕರ್ಮರ ಸಂಖ್ಯೆ 6,000ದಿಂದ 20,000ದಷ್ಟು ಇದೆ. ಕುರುಬ ಸಮಾಜದ ಬಳಿಕ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಮಾಜ ನಮ್ಮದು. ನಮಗೆ ರಾಜಕೀಯ ಪ್ರಾತಿನಿಧ್ಯ ಎಷ್ಟು ಸಿಕ್ಕಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.

ಕೇಂದ್ರ ಕೌಶಲ ಅಭಿವೃದ್ಧಿ ಸಚಿವ ಅನಂತ ಕುಮಾರ್‌ ಹೆಗಡೆ, ‘ಹೊಸತನದ ನಿರ್ಮಾತೃಗಳೆಲ್ಲರೂ ವಿಶ್ವಕರ್ಮರು. ಅವರ ಯೋಗ್ಯತೆ ಜಗತ್ತಿಗೆ ಪರಿಚಯವಾಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಯೋಜನೆಯನ್ನು ಹೊಂದಿದೆ’ ಎಂದರು.  ಯೋಜನೆ ಏನೆಂಬುದನ್ನು ಅವರು ಬಹಿರಂಗಪಡಿಸಲಿಲ್ಲ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್‌.ಯಡಿಯೂರಪ್ಪ, ‘ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದರೆ ಮರದ ಕೆಲಸ ಹಾಗೂ ಕಬ್ಬಿಣದ ಕೆಲಸ ಮಾಡುವ ಗ್ರಾಮಾಂತರ ಪ್ರದೇಶದ ವಿಶ್ವಕರ್ಮರಿಗೆ ತಾಲ್ಲೂಕು ಮಟ್ಟದಲ್ಲಿ ಶೆಡ್‌ ನಿರ್ಮಿಸಿಕೊಡುತ್ತೇವೆ’ ಎಂದರು.

‘ಹಿಂದುಳಿದ ವರ್ಗದ ನಾಯಕ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು ಈ ವರ್ಗದವರ ನಾಶ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಈ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಹಿಂದೇಟು ಹಾಕಿದ್ದು, ಸರ್ಕಾರಕ್ಕೆ ಶೋಭೆ ತರುವ ಕಾರ್ಯವಲ್ಲ. ಈ ಕಾರ್ಯಕ್ರಮವನ್ನು ತಡೆಯುವ ಕೆಲಸ ಮಾಡಿದ್ದು ಅಕ್ಷಮ್ಯ’ ಎಂದರು.

‘ಕೇಂದ್ರ ಸರ್ಕಾರವೂ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಲಿ’
ಕೇಂದ್ರ ಸರ್ಕಾರವೂ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು, ಚಿನ್ನ ಬೆಳ್ಳಿ ಕೆಲಸಗಾರರ ಮೇಲೆ ನಡೆಯುವ ಪೋಲೀಸ್‌ ದೌರ್ಜನ್ಯ ತಡೆಯಲು ವಿಶೇಷ ಕಾನೂನು ರೂಪಿಸಬೇಕು ಎಂದು ಕೆ.ಪಿ.ನಂಜುಂಡಿ ಒತ್ತಾಯಿಸಿದರು.

‘ರಾಜ್ಯದಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಸರ್ಕಾರ ಅದಕ್ಕೆ ಮೊದಲ ವರ್ಷ ₹ 5 ಕೋಟಿ, ಎರಡನೇ ವರ್ಷ ₹15 ಕೋಟಿ ಹಾಗೂ ಮೂರನೇ ವರ್ಷ ₹ 20 ಕೋಟಿ ಅನುದಾನ ನೀಡಿದೆ. ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ವಿಶ್ವಕರ್ಮ ಸಮಾಜಕ್ಕೆ ಈ ಅನುದಾನ ಸಾಲದು’ ಎಂದರು.

‘ಎಲ್ಲ ಧರ್ಮದವರ ದೇವರ ಮೂರ್ತಿಯನ್ನು ಮಾಡಿಕೊಡುವ ವಿಶ್ವಕರ್ಮರು ಇಂದು ಜೀವನೋಪಾಯಕ್ಕಾಗಿ ಯಾವುದೋ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಅಮರಶಿಲ್ಪಿ ಜಕಣಾಚಾರಿಯ ಮೂರ್ತಿಯನ್ನು ಬೇಲೂರಿನ ಚನ್ನಕೇಶವ ದೇವಾಲಯದ ಬಳಿ ಸ್ಥಾಪಿಸಬೇಕು. ಸೆ.17ರಂದು ದೇಶದಾದ್ಯಂತ ವಿಶ್ವಕರ್ಮ ಜಯಂತಿ ಆಚರಿಸಬೇಕು’ ಎಂದು ಅವರು ಒತ್ತಾಯಿಸಿದರು.

ನೃತ್ಯ, ಯಕ್ಷಗಾನ ರದ್ದು
‘ಕಾರ್ಯಕ್ರಮದಲ್ಲಿ ವಿಶೇಷ ನೃತ್ಯ ಪ್ರದರ್ಶಿಸಲು ಆಯೋಜಕರು 15 ದಿನಗಳಿಂದ ಸಿದ್ಧತೆ ನಡೆಸಿದ್ದರು. ಯಕ್ಷಗಾನ ಕಾರ್ಯಕ್ರಮವನ್ನು ಪ್ರದರ್ಶಿಸಲು ಮಂಗಳೂರಿನ ತಂಡ ತಾಲೀಮು ನಡೆಸಿತ್ತು. ಆದರೆ, ಜಡ್‌ ಪ್ಲಸ್‌ ಭದ್ರತೆ ಹೊಂದಿರುವ ಕೇಂದ್ರ ಗೃಹಸಚಿವರು ಭಾಗವಹಿಸಿದ ಕಾರಣ ಪೊಲೀಸರು ಕೊನೇ ಕ್ಷಣದಲ್ಲಿ ಈ ಕಾರ್ಯಕ್ರಮ ನಡೆಸಲು ಅನುಮತಿ ನಿರಾಕರಿಸಿದರು. ಹಾಗಾಗಿ ಈ ಕಾರ್ಯಕ್ರಮಗಳನ್ನು ರದ್ದುಪಡಿಸಬೇಕಾಯಿತು’ ಎಂದು ಕೆ.ಪಿ.ನಂಜುಂಡಿ ತಿಳಿಸಿದರು.

*
ವಾಸ್ತುಶಿಲ್ಪಕ್ಕೆ ಜಗತ್ತಿನಾದ್ಯಂತ ಮನ್ನಣೆ ಸಿಕ್ಕಿದೆ. ವಿಶ್ವಕರ್ಮರ ಕೌಶಲಗಳನ್ನು ಹಾಗೂ ಪುರಾತನ ಜ್ಞಾನವನ್ನು ಉಳಿಸಿ ಬೆಳೆಸಲು ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಬೇಕು.
–ಶ್ರೀಶ್ರೀ ರವಿಶಂಕರ್‌ ಗುರೂಜಿ

*
ಕಾಂಗ್ರೆಸ್‌ಗಾಗಿ 16 ವರ್ಷ ಕೆಲಸ ಮಾಡಿದ ನಾನು ಎಂಎಲ್‌ಸಿ ಆಗಬಾರದು. ಕೇವಲ 8 ವರ್ಷಗಳ ಹಿಂದೆ ಪಕ್ಷಕ್ಕೆ ಸೇರಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬಹುದು. ಇದು ಯಾವ ನ್ಯಾಯ.
–ಕೆ.ಪಿ.ನಂಜುಂಡಿ, ಮಹಾಸಭಾದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.