ADVERTISEMENT

ಸಾಮಾನ್ಯ ಭಕ್ತರಂತೆ ಬರಲಿ: ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 19:30 IST
Last Updated 20 ಜೂನ್ 2011, 19:30 IST

ಉಜಿರೆ: `ಧರ್ಮಸ್ಥಳಕ್ಕೆ `ವಾಕ್‌ಸತ್ಯ~ ಮೂಲಕ ನ್ಯಾಯ ತೀರ್ಮಾನಕ್ಕಾಗಿ ಬಂದಾಗ ಧರ್ಮಾಧಿಕಾರಿಯಾಗಿ ಕ್ಷೇತ್ರದ ಪದ್ಧತಿ ಅನುಷ್ಠಾನವಷ್ಟೇ ನನ್ನ ಕರ್ತವ್ಯ. ಇದರಲ್ಲಿ ಯಾವ ರಾಜಕೀಯವಿಲ್ಲ. ಅಭಯದಾನ ಹಾಗೂ ನ್ಯಾಯ ತೀರ್ಮಾನದಲ್ಲಿ ಬಡವ-ಬಲ್ಲಿದ ಎಂಬ ಭೇದಭಾವವೂ ಇಲ್ಲ. ಸ್ಥಾನಮಾನ ಪರಿಗಣಿಸದೆ ಎಲ್ಲಾ ಭಕ್ತರಿಗೂ ಸಮಾನವಾಗಿ ಅಭಯದಾನ ನೀಡಲಾಗುವುದು~ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸ್ಪಷ್ಟಪಡಿಸಿದರು.

ಧರ್ಮಸ್ಥಳದ `ಧರ್ಮಶ್ರೀ~ ಸಭಾಭವನದಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಬಂದು ಶ್ರೀಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ಬಗ್ಗೆ ಮಾಧ್ಯಮದಲ್ಲಿ ಬಂದ ಮಾಹಿತಿ ಗಮನಿಸಿದ್ದೇನೆ. ಕ್ಷೇತ್ರಕ್ಕೆ ಬರುವ ಬಗ್ಗೆ ಉಭಯ ಬಣದವರೂ ಇಂದಿನವರೆಗೆ ತಮ್ಮನ್ನು ಸಂಪರ್ಕಿಸಿಲ್ಲ. ಅವರು ಬಂದಲ್ಲಿ `ವಾಕ್‌ಸತ್ಯ~ ಪ್ರಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ನಾನೂ ಆ ಸಂದರ್ಭ ಉಪಸ್ಥಿತನಿರುತ್ತೇನೆ ಎಂದರು.

`ಪ್ರಮಾಣಕ್ಕೆ ಬಂದ ಉಭಯ ಬಣದವರೂ ಸ್ನಾನ ಮಾಡಿ ದೇವಸ್ಥಾನಕ್ಕೆ ಬಂದು ರೂ. 11 ಕಾಣಿಕೆ ಹಾಕಿ ಶ್ರೀಮಂಜುನಾಥ ಸ್ವಾಮಿ ಎದುರು ನಿಂತು ಸತ್ಯ ಹೇಳುವುದೇ ಪ್ರಮಾಣ. ನಾನು ಸತ್ಯವನ್ನೇ ಹೇಳುತ್ತೇನೆ. ಸತ್ಯ ಹೇಳದಿದ್ದರೆ ಸೂಕ್ತ ಶಿಕ್ಷೆಯನ್ನು ದೇವರು ಕೊಡಲಿ~ ಎಂದೂ ಹೇಳಬೇಕು.

`ಮಾತು ಬಿಡ ಮಂಜುನಾಥ~ ಎಂಬ ನಂಬಿಕೆಯೇ ಇಲ್ಲಿ ದೊಡ್ಡದಾಗಿದೆ. ಹಾಗಾಗಿ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ಮೊದಲು ಅವರು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಅವರು ಮಾಡುವ ಪ್ರಮಾಣ ಮತ್ತು ಶ್ರೀಮಂಜುನಾಥ ಸ್ವಾಮಿ ಮಧ್ಯೆ ತಾವು ಧರ್ಮಾಧಿಕಾರಿಯಾಗಿ ಸಾಕ್ಷಿಯಾಗಿರುವುದೇ ಹೊರತು, ಸರಿಯೋ- ತಪ್ಪೋ ಎಂಬ ವಿಮರ್ಶೆ ಮಾಡುವುದಿಲ್ಲ~ ಎಂದು ಹೆಗ್ಗಡೆ ಸ್ಪಷ್ಟಪಡಿಸಿದರು.

ಮಾಧ್ಯಮಗಳಲ್ಲಿ ವಿವಿಧ ನಾಯಕರು ನೀಡುತ್ತಿರುವ ಹೇಳಿಕೆಗಳತ್ತ ಗಮನ ಸೆಳೆದಾಗ, `ನಾವಾಗಿ ಅವರನ್ನು ಆಮಂತ್ರಿಸುವುದಿಲ್ಲ. ಸಾಮಾನ್ಯ ಭಕ್ತರಂತೆ ಅವರು ಕ್ಷೇತ್ರಕ್ಕೆ ಬಂದಾಗ, ಇಲ್ಲಿನ ಸಂಪ್ರದಾಯದಂತೆ ವ್ಯವಸ್ಥೆ ಕಲ್ಪಿಸಲಾಗುವುದು ಅಷ್ಟೆ~ ಎಂದರು.

ಆಣೆ ಮಾತು
ಜನರಿಗೆ ಯಾವುದೇ ವ್ಯವಹಾರದಲ್ಲಿ ಸರಿಯಾದ ನ್ಯಾಯ ಸಿಗದೆ ತೊಂದರೆಯಾದಾಗ ಅವರು, `ದೇವರು ಸತ್ಯದ ವಿಮರ್ಶೆ ಮಾಡಲಿ. ಶ್ರೀಮಂಜುನಾಥ ಸ್ವಾಮಿ ನ್ಯಾಯ ಕೊಡಲಿ~ ಎಂದು ಪ್ರಾರ್ಥಿಸುವುದೇ ಆಣೆ ಮಾತು. ಇದು ಸತ್ಯದ ಪ್ರತಿಪಾದನೆಗಾಗಿ ಹೇಳುವ ಮಾತು. ವಚನಭ್ರಷ್ಟರಾದಲ್ಲಿ ಇದೇ ಶಾಪವಾಗಿ ಪರಿಣಮಿಸಿ ಮುಂದೆ ಅನೇಕ ಕಷ್ಟ-ನಷ್ಟ ಎದುರಿಸಬೇಕಾಗುತ್ತದೆ ಎಂಬ ಪ್ರತೀತಿ-ನಂಬಿಕೆ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.