ADVERTISEMENT

ಸಾಮೂಹಿಕ ನಕಲು; ನರ್ಸಿಂಗ್ ಪರೀಕ್ಷೆ ರದ್ದು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 18:05 IST
Last Updated 3 ಫೆಬ್ರುವರಿ 2011, 18:05 IST


ಬೆಂಗಳೂರು:  ಬೀದರ್ ಜಿಲ್ಲೆಯ 2,400 ಮಂದಿ ಅಂತಿಮ ಡಿಪ್ಲೊಮಾ ವಿದ್ಯಾರ್ಥಿಗಳು ನಗರದಲ್ಲಿ ಪರೀಕ್ಷೆ ಬರೆಯುವ ಮೂಲಕ ಸಾಮೂಹಿಕವಾಗಿ ನಕಲು ಮಾಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಪಡಿಸಲಾಗಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಸಾಲಿ ಅವರನ್ನು ಅಮಾನತು ಮಾಡಲಾಗಿದೆ.

ಯಲಹಂಕದ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದಾಗ ಕೊಠಡಿಯ ಮೇಲ್ವಿಚಾರಕರೇ ಉತ್ತರ ಚೀಟಿಗಳನ್ನು ನೀಡಿ ಪರೀಕ್ಷೆ ಬರೆಸುತ್ತಿರುವುದು ಬೆಳಕಿಗೆ ಬಂತು. ತಕ್ಷಣ ಉತ್ತರ ಪತ್ರಿಕೆಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೀದರ್ ಜಿಲ್ಲೆಯ 43 ನರ್ಸಿಂಗ್ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ 2400 ಮಂದಿ ನಗರದ ಆರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿರುವುದು ಅಚ್ಚರಿಯನ್ನುಂಟು ಮಾಡಿದೆ. ಇದೇ ಒಂದರಿಂದ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆ ಆರಂಭದ ಹಿಂದಿನ ದಿನ ಅಂದರೆ ಜ.31ರಂದು ಬೀದರ್‌ನಿಂದ ಬೆಂಗಳೂರಿಗೆ ಪರೀಕ್ಷಾ ಕೇಂದ್ರಗಳ ಸ್ಥಳಾಂತರಕ್ಕೆ ಒಪ್ಪಿಗೆ ನೀಡಲಾಗಿದೆ.

ಎರಡು ವರ್ಷಗಳಿಂದ ಇವರೆಲ್ಲ ಇದೇ ರೀತಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆದಿದ್ದಾರೆ. ಸಾಮೂಹಿಕ ನಕಲು ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಗೆ ಸೀಮಿತವಾಗಿ ಈಗಾಗಲೇ ನಡೆದಿರುವ ಮೂರು ವಿಷಯಗಳ ಪರೀಕ್ಷೆಯನ್ನು ರದ್ದು ಮಾಡಲಾಗಿದೆ.

ಅಲ್ಲದೆ ಫೆ. 4,5 ಮತ್ತು 6ರಂದು ನಡೆಯಬೇಕಿದ್ದ ಇನ್ನುಳಿದ ಮೂರು ವಿಷಯಗಳ ಪರೀಕ್ಷೆಯನ್ನು ಮುಂದೂಡಲಾಗಿದೆ. ಇದು ಬೀದರ್ ಜಿಲ್ಲೆಗೆ ಮಾತ್ರ ಅನ್ವಯವಾಗುತ್ತದೆ ಎಂದರು.ನಕಲಿಗೆ ಸಂಬಂಧಿಸಿದಂತೆ 10 ದಿನಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷೆ) ಡಾ.ವೆಂಕಟೇಶ್ ಅವರಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಪರೀಕ್ಷೆ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಆರು ಕೇಂದ್ರಗಳಿಗೂ ಅಧಿಕಾರಿಗಳನ್ನು ಕಳುಹಿಸಿ ವರದಿ ತರಿಸಿಕೊಳ್ಳಲಾಗಿದೆ. ಎಲ್ಲ ಕಡೆ ನಕಲು ಮಾಡಿರುವುದು ಗೊತ್ತಾಗಿದೆ.ಇದರ ಹಿಂದೆ ವ್ಯವಸ್ಥಿತವಾದ ಜಾಲವಿದ್ದು, ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.