ADVERTISEMENT

`ಸಾಯಬಕ್ಕ'ಗೆ ವಿಕ್ಟೋರಿಯಾದಲ್ಲಿ ಚಿಕಿತ್ಸೆ

ನಿರಾಶ್ರಿತೆಯ ನೋವಿಗೆ ಜಿಲ್ಲಾಧಿಕಾರಿ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:31 IST
Last Updated 20 ಜುಲೈ 2013, 19:31 IST

ಗುಲ್ಬರ್ಗ: ಗುಲ್ಬರ್ಗ ನಿರಾಶ್ರಿತರ ಪರಿಹಾರ ಕೇಂದ್ರದ ನಿವಾಸಿ ಸಾಯಬಕ್ಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ್ ಶನಿವಾರ ಕ್ರಮ ಕೈಗೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ನಿರಾಶ್ರಿತರ ಪರಿಹಾರ ಕೇಂದ್ರ ಪ್ರಭಾರ ಅಧೀಕ್ಷಕ ನರಸಿಂಗ ರಾಥೋಡ್, `ಸಾಯಬಕ್ಕನ ಕಾಲಿನ ಗಾಯದಿಂದ ಜೀವಕ್ಕೇ ಅಪಾಯವಿದೆ. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇದುವರೆಗೆ ಶುಶ್ರೂಷೆ ನೀಡುತ್ತಿದ್ದ ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಅಧೀಕ್ಷಕರಿಂದ ಸೂಕ್ತ ದಾಖಲೆ ಪತ್ರಗಳನ್ನು ಪಡೆದು ಹೆಚ್ಚಿನ ಚಿಕಿತ್ಸೆಯನ್ನು ಕೊಡಿಸಲಾಗುತ್ತದೆ' ಎಂದು ತಿಳಿಸಿದರು.

`ಪ್ರಜಾವಾಣಿ'ಯ ಜುಲೈ 19 ರ ಸಂಚಿಕೆಯಲ್ಲಿ `ನಿರಾಶ್ರಿತೆ ಸಾಯಬಕ್ಕಗೆ ಕಾಲುಕೊಡಿ' ಎಂಬ ಮಾನವೀಯ ವರದಿಯನ್ನು ಪ್ರಕಟಿಸಲಾಗಿತ್ತು.

ರೋಟರಿ ಕ್ಲಬ್ ಸ್ಪಂದನೆ: `ಗುಲ್ಬರ್ಗ ನಿರಾಶ್ರಿತರ ಪರಿಹಾರ ಕೇಂದ್ರ'ದ ನಿರಾಶ್ರಿತರ ಕುರಿತು `ಪ್ರಜಾವಾಣಿ' ಯು ಜುಲೈ 18 ರಿಂದ ಪ್ರಕಟಿಸುತ್ತಿರುವ `ನಿರಾಶ್ರಿತರ ಬಯಲು ಬದುಕು, ಕಥೆಯಲ್ಲ; ಜೀವನ' ವಿಶೇಷ ವರದಿ ಸರಣಿಗೆ ಗುಲ್ಬರ್ಗ ರೋಟರಿ ಕ್ಲಬ್ ಸ್ವಯಂ ಪ್ರೇರಿತವಾಗಿ ಸ್ಪಂದಿಸಿದೆ.

ರೋಟರಿ ಕ್ಲಬ್ ಜಿಲ್ಲಾ ಅಧ್ಯಕ್ಷ ಪ್ರೊ.ಶಿವರಾಜ ಪಾಟೀಲ ಹಾಗೂ ಪದಾಧಿಕಾರಿಗಳು ಶನಿವಾರ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಅಗತ್ಯವನ್ನು ತಿಳಿದುಕೊಂಡಿದ್ದಾರೆ. ಹೀಗಾಗಿ ಅಲ್ಲಿರುವ ಪುರುಷರಿಗೆ ಹಾಫ್ ಪ್ಯಾಂಟ್, ಶರ್ಟ್, ಮಹಿಳೆಯರಿಗೆ ಲಂಗ, ಸೀರೆ, ರವಿಕೆ, ಎಲ್ಲರಿಗೂ ಎಲೆದಿಂಬು, ಹಾಸಿಗೆ, ಬೆಡ್‌ಶೀಟ್, ರಗ್ಗು, ತಂಬಿಗೆ, ಲೋಟ, ಪ್ಲೇಟ್, ಬಕೆಟ್, ಮಗ್‌ಗಳು ಹಾಗೂ ಅಡುಗೆಗಾಗಿ 5 ಕೆ.ಜಿ ಸಾಮರ್ಥ್ಯದ ಹಿಟ್ಟುರುಬ್ಬುವ ಯಂತ್ರ, 10 ಕೆ.ಜಿ ಸಾಮರ್ಥ್ಯದ ಕುಕ್ಕರ್‌ಗಳನ್ನು ನೀಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಿವರಾಜ ಪಾಟೀಲ ಅವರು, `ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಗಮನಿಸಿ ನಾವು ಈ ಪಟ್ಟಿ ಸಿದ್ಧಪಡಿಸಿದ್ದೇವೆ. ಇದನ್ನು ರೋಟರಿ ಆಡಳಿತ ಮಂಡಳಿ ಅಂಗೀಕರಿಸಿ, ಇನ್ನೊಂದು ವಾರದಲ್ಲಿ  ಅಧಿಕಾರಿಗಳ ಸಮಕ್ಷಮ ನಿರಾಶ್ರಿತರಿಗೆ ವಿತರಿಸಲಾಗುವುದು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.