ADVERTISEMENT

ಸಾರಿಗೆ ಇಲಾಖೆಯಲ್ಲಿ ನಿಯೋಜನೆ ಪರ್ವ

ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮೂರು ತಿಂಗಳ ಹಿಂದೆ ವರ್ಗಾವಣೆ * ಈಗ ಪ್ರಭಾರ ಹೊಣೆ

ವೈ.ಗ.ಜಗದೀಶ್‌
Published 1 ನವೆಂಬರ್ 2017, 19:30 IST
Last Updated 1 ನವೆಂಬರ್ 2017, 19:30 IST
ಎಚ್.ಎಂ. ರೇವಣ್ಣ
ಎಚ್.ಎಂ. ರೇವಣ್ಣ   

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಆಯಕಟ್ಟಿನ ಹುದ್ದೆಗಳಾದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಮತ್ತು ಚೆಕ್‌ ಪೋಸ್ಟ್‌ಗಳ ಎಆರ್‌ಟಿಒ ಹುದ್ದೆಗಳಿಗೆ ವರ್ಷದ ಮಧ್ಯ ಭಾಗದಲ್ಲಿ ನಿಯೋಜನೆ ಆದೇಶ ಹೊರಡಿಸಲಾಗಿದೆ.

‘ಈ ವರ್ಷ ಜುಲೈ 31ರವರೆಗೆ ಸಾರ್ವತ್ರಿಕ ವರ್ಗಾವಣೆ ನಡೆದಿತ್ತು. ಒಂದೇ ಸ್ಥಳದಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಸಮಯ ಕೆಲಸ ಮಾಡಿದವರನ್ನು ವರ್ಗಾವಣೆ ಮಾಡಲಾಗಿತ್ತು. ಸಾರಿಗೆ ಇಲಾಖೆ ಸಚಿವರಾಗಿ ಎಚ್.ಎಂ. ರೇವಣ್ಣ ಅಧಿಕಾರ ವಹಿಸಿಕೊಂಡ ಮೇಲೆ ಈಚೆಗೆ ವರ್ಗಾವಣೆಯಾದವರನ್ನು ಎತ್ತಂಗಡಿ ಮಾಡಿ, ಆ ಜಾಗಕ್ಕೆ ಬೇರೆಯವರನ್ನು ನಿಯೋಜನೆ ಮಾಡಿದ್ದಾರೆ’ ಎಂಬ ದೂರುಗಳು ಕೇಳಿಬಂದಿವೆ.

‘ವರ್ಷದ ಮಧ್ಯಭಾಗದಲ್ಲಿ ನಿಯೋಜನೆ ಮಾಡುವುದು 15 ವರ್ಷಗಳಿಂದ ನಡೆದುಕೊಂಡು ಬಂದಿದೆ. ಆಡಳಿತಾತ್ಮಕ ದೃಷ್ಟಿಯಿಂದ ಹೀಗೆ ಮಾಡಲಾಗುತ್ತಿದೆ. ಇದೇನು ನಾನು ಬಂದ ಮೇಲೆ ತಂದಿರುವ ಪದ್ಧತಿಯಲ್ಲ’ ಎಂದು ಸಚಿವ ರೇವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸರ್ಕಾರಕ್ಕೆ ಈ ವರ್ಷ ₹6,000 ಕೋಟಿ ಆದಾಯ ಸಂಗ್ರಹಿಸಿ ಕೊಡಬೇಕಿದೆ. ಆದಾಯ ಸಂಗ್ರಹಣೆಗೆ ಒತ್ತು ನೀಡಿದ್ದೇನೆ. ಇಲಾಖೆಯಲ್ಲಿದ್ದ ರಿಂಗ್‌ ಪದ್ಧತಿಯ ಹಿಡಿತವನ್ನು ತೊಲಗಿಸಿ, ಆಡಳಿತ ಬಿಗಿ ಮಾಡಲು ಯತ್ನಿಸಿದ್ದೇನೆ. ಅದಕ್ಕಾಗಿ ಈ ರೀತಿ ದೂರುತ್ತಿದ್ದಾರೆ. ಆರ್‌ಟಿಒ ಮತ್ತು ಮೋಟಾರ್ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಅವರನ್ನು ಇಲಾಖೆ ಒಳಬರಲು ಈ ಗುಂಪು ಬಿಡುತ್ತಿಲ್ಲ. ಇದು ವಸ್ತು ಸ್ಥಿತಿ’ ಎಂದೂ ಅವರು ಹೇಳಿದರು.

ಚೆಕ್‌ ಪೋಸ್ಟ್‌ಗಳಿಗೆ ಬೇಡಿಕೆ: ಸಾರಿಗೆ ಇಲಾಖೆಯಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವ ಜಾಗಗಳೆಂದರೆ ಹೊರರಾಜ್ಯಗಳಿಂದ ಕರ್ನಾಟಕ ಪ್ರವೇಶಿಸುವ ಚೆಕ್‌ ಪೋಸ್ಟ್‌ನ ಎಆರ್‌ಟಿಒ ಹುದ್ದೆಗಳು. ಅದರಲ್ಲೂ ಮಹಾರಾಷ್ಟ್ರ ಗಡಿಯಲ್ಲಿರುವ ಝಳಕಿ, ತಮಿಳುನಾಡು ಗಡಿಯಲ್ಲಿರುವ ಅತ್ತಿಬೆಲೆ, ಕೋಲಾರ ಜಿಲ್ಲೆಯ ನಂಗಲಿ, ಚಾಮರಾಜ ನಗರ ಹಾಗೂ ಆಂಧ್ರ ಪ್ರದೇಶ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಬಳ್ಳಾರಿ ಜಿಲ್ಲೆಯ ಹಗರಿ ಆಯಕಟ್ಟಿನ ಜಾಗಳಾಗಿವೆ.

‘ಆದಾಯ ಹೆಚ್ಚು ಎಂಬ ಕಾರಣಕ್ಕೆ ಈ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜುಲೈನಲ್ಲಿ ಈ ಜಾಗಗಳಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಅಕ್ಟೋಬರ್ 19ರಂದು ಹೊರಡಿಸಿದ ಆದೇಶದಲ್ಲಿ ಅಲ್ಲಿದ್ದವರನ್ನು ಬೇರೆ ಕಡೆಗೆ ನಿಯೋಜನೆ ಮಾಡಿ, ಆ ಜಾಗಕ್ಕೆ ಮೋಟಾರು ಇನ್‌ ಸ್ಪೆಕ್ಟರ್‌ ಹುದ್ದೆಯಲ್ಲಿದ್ದವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಆಪಾದಿಸಿದ್ದಾರೆ.

ಕರ್ನಾಟಕದಲ್ಲೇ ಹೆಚ್ಚು ‘ಪ್ರಸಿದ್ಧಿ’ ಪಡೆದ ಝಳಕಿ ಚೆಕ್‌ಪೋಸ್ಟ್‌ಗೆ ಎಆರ್‌ಟಿಒ ಬಿ.ಆರ್. ಮಂಜುನಾಥ್‌ ವರ್ಗಾವಣೆಯಾಗಿದ್ದರು. ಈ ಜಾಗಕ್ಕೆ ಬೆಳಗಾವಿ ಕಚೇರಿಯಲ್ಲಿದ್ದ ಇನ್‌ ಸ್ಪೆಕ್ಟರ್‌ ಎಂ.ಡಿ. ಪಾಟೀಲ ಅವರನ್ನು ಹೆಚ್ಚುವರಿ ಪ್ರಭಾರ ನೀಡಿ ನಿಯೋಜನೆ ಮಾಡಲಾಗಿದೆ.

ಹಿರಿಯ ಇನ್ ಸ್ಪೆಕ್ಟರ್‌ ಟಿ.ಆರ್.ಕೆ. ಕುಮಾರ್ ಅವರನ್ನು ಹಗರಿಗೆ, ಗಡಿಭಾಗದ ಬೀದರ್ ಜಿಲ್ಲೆಗೆ ಮಂಜುನಾಥ್‌ ಕೊರವಿ ಅವರನ್ನು  ಎಆರ್‌ ಟಿಒ ಹುದ್ದೆಗೆ ನಿಯೋಜನೆ ಮಾಡಲಾಗಿದೆ. ಒಂದೇ ದಿನ 25 ಎಆರ್‌ಟಿಒ, ಮೋಟಾರ್ ಇನ್‌ ಸ್ಪೆಕ್ಟರ್‌ಗಳನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.

‘ಚೆಕ್‌ಪೋಸ್ಟ್‌ಗಳಲ್ಲಿ ಕಿರುಕುಳ’
‘ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಮೇಲೆ ಎಲ್ಲ ರಾಜ್ಯಗಳಲ್ಲೂ ಚೆಕ್‌ ಪೋಸ್ಟ್‌ ರದ್ದು ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಹಣ ವಸೂಲಿಗಾಗಿ ಅವುಗಳನ್ನು ಉಳಿಸಿಕೊಳ್ಳಲಾಗಿದೆ’ ಎಂದು ಕರ್ನಾಟಕ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಷಣ್ಮುಖಪ್ಪ ಆಪಾದಿಸಿದರು.

‘ಗಡಿ ಭಾಗದ ಚೆಕ್‌ ಪೋಸ್ಟ್‌ನಲ್ಲಿ ಲಾರಿ ಮಾಲೀಕರಿಗೆ ಕಿರುಕುಳ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಹಿಂದೆಂದೂ ಇಂತಹ ಪರಿಸ್ಥಿತಿ ಇರಲಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಸರಕು ಸಾಗಣೆ ಲಾರಿಗಳು ರಾಜ್ಯಕ್ಕೆ ಬರುವುದನ್ನೇ ನಿಲ್ಲಿಸುತ್ತವೆ’ ಎಂದು ಅವರು ಎಚ್ಚರಿಸಿದರು.

‘ಆಡಳಿತ ಬಿಗಿ ಮಾಡಿ, ನಿಯಮ ಪಾಲಿಸದ ಲಾರಿಗಳಿಗೆ ಆರ್‌ಟಿಒಗಳು ದಂಡ ಹಾಕುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಸುಲಿಗೆ ನಿಲ್ಲಬೇಕು. ಈ ವಿಷಯ ಮುಂದಿಟ್ಟುಕೊಂಡು ಇದೇ 7ರಂದು ಸಾರಿಗೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.