ADVERTISEMENT

ಸಾಲ ವಸೂಲಿಗೆ ಬಾಲಕಿ ಒತ್ತೆಯಾಳು ; ಮಹಿಳೆ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 19:30 IST
Last Updated 18 ಜೂನ್ 2012, 19:30 IST
ಸಾಲ ವಸೂಲಿಗೆ ಬಾಲಕಿ ಒತ್ತೆಯಾಳು ; ಮಹಿಳೆ ಬಂಧನ
ಸಾಲ ವಸೂಲಿಗೆ ಬಾಲಕಿ ಒತ್ತೆಯಾಳು ; ಮಹಿಳೆ ಬಂಧನ   

ಬಳ್ಳಾರಿ: ಸಾಲ ಪಾವತಿಸದ ವ್ಯಕ್ತಿಯ ಮಗಳನ್ನೇ ಒಂದೂವರೆ ತಿಂಗಳಿಂದ ಒತ್ತೆಯಾಳಾಗಿ ಇರಿಸಿಕೊಂಡು, ಮನೆಗೆಲಸಕ್ಕೆ ಹಚ್ಚಿದ್ದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬಿಹಾರ ಮೂಲದ ಸುನಿಲ್‌ಕುಮಾರ್ ಎಂಬಾತನ 10 ವರ್ಷದ ಮಗಳನ್ನು ಸಾಲ ನೀಡಿದ್ದ ದೇವಿನಗರದ ನಿವಾಸಿ ಮೆಹಬೂಬಿ ತನ್ನ ಮನೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಳು ಎನ್ನಲಾಗಿದೆ. ಈ ಸಂಬಂಧ ಸುನಿಲ್‌ಕುಮಾರ್ ಪತ್ನಿ ರೇಖಾ ಅವರು ಬ್ರೂಸ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮೆಹಬೂಬಿ ಅವರನ್ನು ಬಂಧಿಸಿದ್ದಾರೆ.

ಬಳ್ಳಾರಿ ಮೆದು ಕಬ್ಬಿಣ ಕಾರ್ಖಾನೆಯೊಂದಕ್ಕೆ ಬಿಹಾರದಿಂದ ಕಾರ್ಮಿಕರನ್ನು ಕೆಲಸಕ್ಕೆ ತಂದು ಬಿಟ್ಟಿದ್ದ ಸುನಿಲ್‌ಕುಮಾರ್ ಕಾರ್ಮಿಕರಿಗೆ ಕೂಲಿ ಕೊಡಲು ಮೆಹಬೂಬಿಯಿಂದ ರೂ 2 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ.

ಘಟನೆಯ ವಿವರ: ಬಿಹಾರದಿಂದ ಸುನಿಲ್‌ಕುಮಾರ್ ಕರೆತಂದಿದ್ದ ಕಾರ್ಮಿಕರಿಗೆ  ಕಬ್ಬಿಣ ಕಾರ್ಖಾನೆ ಮಾಲೀಕರು ಸಂಬಳ ನೀಡಿರಲಿಲ್ಲ. ಅವರಿಗೆ ಸಂಬಳ ನೀಡಲು ಆರು ತಿಂಗಳ ಹಿಂದೆ ಸುನಿಲ್ ಸಾಲ ಪಡೆದಿದ್ದರು. ದೇವಿನಗರದಲ್ಲಿ ವಾಸಿಸುತ್ತಿದ್ದ ಈತನ ಕುಟುಂಬ ಬೇರೆಡೆಗೆ ಸ್ಥಳಾಂತರಗೊಂಡಿತು. ಆಗ ಮೆಹಬೂಬಿ, ಸುನಿಲ್ ಕುಟುಂಬಕ್ಕೆ ತಮ್ಮ ಮನೆ ಮೇಲಿರುವ ಕೊಠಡಿಯಲ್ಲಿ ಇರಲು ಅವಕಾಶ ನೀಡಿದ್ದರು.

ಇಲ್ಲಿಗೆ ಬಂದು ನೆಲೆಸಿದ ಕೆಲವೇ ದಿನಗಳಲ್ಲಿ ಹಣ ತರುವುದಾಗಿ ಹೋದ ಸುನಿಲ್ ಬಂದಿಲ್ಲ. 3 ಮಕ್ಕಳೊಂದಿಗೆ ಅಲ್ಲಿಯೇ ಇದ್ದ ರೇಖಾ ಹಿರಿಯ ಮಗಳನ್ನು ಮೆಹಬೂಬಿ ಮನೆಯಲ್ಲೇ ಬಿಟ್ಟು, ಇನ್ನಿಬ್ಬರು ಮಕ್ಕಳೊಂದಿಗೆ ಮೊದಲಿದ್ದ ಬಾಡಿಗೆ ಮನೆಗೇ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.