ADVERTISEMENT

ಸಾಹಿತ್ಯದ ನಿರಂತರ ಪರಾಮರ್ಶೆ ಬೇಕು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 18:30 IST
Last Updated 27 ಫೆಬ್ರುವರಿ 2011, 18:30 IST

ಬೆಂಗಳೂರು: ಉದಯೋನ್ಮುಖ ಕವಿಗಳು ತಾವು ಬರೆದ ಸಾಹಿತ್ಯವನ್ನು ನಿರಂತರವಾಗಿ ಪರಾಮರ್ಶಿಸಬೇಕು ಎಂದು ಸಾಹಿತಿ ಡಾ. ಹಂಪ ನಾಗರಾಜಯ್ಯ ಯವ ಸಾಹಿತಿಗಳಿಗೆ ಕಿವಿ ಮಾತು ಹೇಳಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕನ್ನಡ ಕ್ರಿಯಾ ಸಮಿತಿ ಇತ್ತೀಚೆಗೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ದ್ವಾರನಕುಂಟೆ ಪಾತಣ್ಣ ಅವರ ‘ತನ್ನ ಮಗನ ನೆನೆದು’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ದ್ವಾರನಕುಂಟೆ ಪಾಪಣ್ಣ ಕನ್ನಡದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದಾರೆ. 25 ವರ್ಷಗಳಿಂದ ಸತತವಾಗಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೊಂದು ವ್ಯಾಖ್ಯಾನ ನಿರಪೇಕ್ಷಿತ ಕವನ’ ಎಂದು ಅಭಿಪ್ರಾಯಪಟ್ಟರು. ಕವನ ಸಂಕಲನ ಕುರಿತು ಮಾತನಾಡಿದ ಪ್ರೊ. ಎಲ್.ಎನ್.ಮುಕುಂದರಾಜ್, ಹರಿಶ್ಚಂದ್ರ ಕಾವ್ಯಗಳಲ್ಲಿ ಮಕ್ಕಳನ್ನು ಕಳೆದುಕೊಂಡ ತಾಯಂದಿರ ರೋಧನೆ  ಅಡಕವಾಗಿದೆ.

ಅಂತಹ ಸನ್ನಿವೇಶಗಳನ್ನು ಇಲ್ಲಿ ತಮ್ಮ ಕವನ ಸಂಕಲನದಲ್ಲಿ ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ. ಕಾರ್ಖಾನೆಯಲ್ಲಿ ಎಂಜಿನಿಯರ್ ಆಗಿರುವ ವ್ಯಕ್ತಿ ಇಂತಹ ಕ್ರಿಯಾತ್ಮಕ ಕೆಲಸದಲ್ಲಿ ತೊಡಗಿರುವುದನ್ನು ಗಮನಿಸಿದರೆ ಕನ್ನಡ ಸಾಹಿತ್ಯ ಮತ್ತಷ್ಟು ಬೆಳವಣಿಗೆಯಾಗುವುದು ಖಚಿತ ಎಂದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ ‘ಆತ್ಮರತಿಯಲ್ಲಿ ಮೇಲ್ಜಾತಿಗಳು ಹಳವಳಿಸುತ್ತಿದ್ದರೆ, ಆತ್ಮ ಮರುಕದಲ್ಲಿ ಕೆಳಜಾತಿಗಳು ಕ್ಷೀಣಿಸುತ್ತಿದ್ದು, ಜಾತಿ, ಜಾತಿಗಳ ನಡುವಿರುವ ದ್ವೇಷ ತೊಡೆದುಹಾಕಲು ಸಾಹಿತ್ಯದಿಂದ ಮಾತ್ರ ಸಾಧ್ಯ’ ಎಂದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ. ಚನ್ನೇಗೌಡ, ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ರಾಜ್ಯ ಘಟಕ ಅಧ್ಯಕ್ಷ ಡಾ. ವೀರೇಶ್ ಬಳ್ಳಾರಿ, ಡಾ.ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.