ವಿಜಾಪುರ: ಸಾಹಿತ್ಯ ಸಮ್ಮೇಳನದಲ್ಲಿ ವೈಭವೀಕರಣ ಮೇಳೈಸಿದೆ. ಜಾತ್ರೆಯಲ್ಲೇ ರಂಗು-ಗುಂಗಿನಲ್ಲಿ ಜನ ಕಳೆದುಹೋಗಿದ್ದಾರೆ. ಗೋಷ್ಠಿಗಳು ನಡೆಯುತ್ತಿದ್ದರೂ ಆಲಿಸುವ ಆಸಕ್ತಿ ಪ್ರೇಕ್ಷಕರಲ್ಲಿಲ್ಲ. ಸಾಹಿತ್ಯ ಗೌಣವಾಗಿ ರಾಜಕೀಯ ಪ್ರಧಾನವಾಗಿದೆ ಎಂಬ ಆರೋಪ ಸಮ್ಮೇಳನದ ಅಂಗಳದಲ್ಲಿ ವ್ಯಾಪಕವಾಗಿದೆ.
ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರವೂ ಜನಜಾತ್ರೆ ನೆರೆದಿದೆ. ಸಾವಿರಾರು ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಆಗಮಿಸಿದ್ದರೂ ಗೋಷ್ಠಿಗಳನ್ನು ಕೇಳಿಸಿಕೊಳ್ಳುವ ಉತ್ಸುಕತೆ ತೋರಿಸುತ್ತಿಲ್ಲ. `ಗೋಷ್ಠಿಗಳಲ್ಲಿ ಸತ್ವವೇ ಇಲ್ಲ. ವಿಚಾರ ಸಂಕಿರಣಗಳು ಪ್ರಚಾರ ಉಪನ್ಯಾಸಗಳಾಗುತ್ತಿವೆ. ವಿಷಯಗಳು ಚೌಕಟ್ಟು ಇಲ್ಲದೆ ಹರಿದಾಡುತ್ತಿವೆ.
ಸಮಯದ ಪರಿಪಾಲನೆಯಂತೂ ಇಲ್ಲವೇ ಇಲ್ಲ' ಎಂಬ ಅಪಸ್ವರ ಸಾಹಿತ್ಯಾಸಕ್ತರಿಂದ ವ್ಯಕ್ತವಾಗಿದೆ.
ಪ್ರಧಾನ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವ ಸಂದರ್ಭದಲ್ಲಿ ಕೆಲವರು ವೇದಿಕೆಯೇರಿ ಹರಟೆ ಹೊಡೆಯುತ್ತಿದ್ದಾರೆ. ಸಮ್ಮೇಳನದ ಹಿನ್ನೆಲೆಯಲ್ಲಿ ನಗರವಿಡೀ ಅಳವಡಿಸಿದ ಫ್ಲೆಕ್ಸ್, ಬೃಹತ್ ಕಟೌಟ್‌ಗಳಲ್ಲೂ ರಾಜಕಾರಣಿಗಳು ರಾರಾಜಿಸುತ್ತಿದ್ದು, ಸಾಹಿತಿಗಳು ಮೂಲೆಗುಂಪಾಗಿದ್ದಾರೆ!
ಪ್ರಧಾನ ವೇದಿಕೆ, ಸಮಾನಾಂತರ ವೇದಿಕೆ, ಪುಸ್ತಕ ಮಳಿಗೆಗಳಲ್ಲಿ ಜನ ತುಳುಕುತ್ತಿದ್ದಾರೆ. ಏನೋ ನಡೆಯುತ್ತಿದೆ ಎಂಬ ಕುತೂಹಲ ಮಾತ್ರ ಅವರಲ್ಲಿದೆ. ಹೀಗಾಗಿ ಒಳಗೆ ಹೋದವರು ಅಷ್ಟೇ ಬೇಗ ಹೊರಬರುತ್ತಿದ್ದರು. ಗದ್ದಲದಲ್ಲೇ ಗೋಷ್ಠಿಗಳ ಆರಂಭ- ಮುಕ್ತಾಯ ಕಾಣುತ್ತಿತ್ತು.
`ಪ್ರಜಾವಾಣಿ' ಜೊತೆ ಮಾತನಾಡಿದ ಚಿಂತಕ, ಸಿಪಿಐ ಮುಖಂಡ ಜಿ.ಎನ್. ನಾಗರಾಜ, ಸಾಹಿತ್ಯ ಸಮ್ಮೇಳನ ಆಯೋಜಿಸುವುದರಿಂದ ಕನ್ನಡಿಗರನ್ನೆಲ್ಲ ಒಂದೇ ಸೂರಿನಡಿ ಸೇರಿಸಿ ಚಿಂತನೆಗೆ ಹಚ್ಚಲು ಅವಕಾಶ ಆಗುತ್ತದೆ. ಆದರೆ ಆ ನಿಟ್ಟಿನಲ್ಲಿ ಈ ಸಮ್ಮೇಳನದಿಂದ ಯಶಸ್ಸು ನಿರೀಕ್ಷಿಸುವುದು ಕಷ್ಟ' ಎಂದರು.
`ಸಮ್ಮೇಳನದಲ್ಲಿ ವಿಷಯಾಧಾರಿತ ವಿಚಾರ ಸಂಕಿರಣಗಳು ನಡೆಯಬೇಕೇ ಹೊರತು ಪ್ರಚಾರ ಉಪನ್ಯಾಸಗಳನ್ನು ಏರ್ಪಡಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಉತ್ಸವದ ವಾತಾವರಣದಲ್ಲಿ ಜನಸಾಮಾನ್ಯರನ್ನು ಚಿಂತನೆಗೆ ಹಚ್ಚುವ, ಸಾಹಿತ್ಯ ವಲಯದಲ್ಲಿ ಗಂಭೀರ ಚರ್ಚೆಗೆ ವಸ್ತುವಾಗುವ ವಿಷಯಗಳ ಕಡೆಗೆ ಇಂತಹ ಸಮ್ಮೇಳನದ ದೃಷ್ಟಿ ಇರಬೇಕು. ಆದರೆ ಇಲ್ಲಿ ಆ ಸ್ವರೂಪ ಇಲ್ಲ' ಎಂದು ಕಳವಳ ವ್ಯಕ್ತಪಡಿಸಿದರು.
`ಸರ್ಕಾರದ ಹಂಗಿನಲ್ಲಿ ಸಮ್ಮೇಳನಗಳನ್ನು ನಡೆಯುವುದರಿಂದ ಈ ಸ್ಥಿತಿ ಉಂಟಾಗಿದೆ. ಹೀಗಾಗಿ ಪ್ರಚಲಿತ ವಿಷಯಗಳಾದ ಭ್ರಷ್ಟಾಚಾರ, ಸಂಸ್ಕೃತಿ, ನೈಸರ್ಗಿಕ ಸಂಪತ್ತಿನ ಕೊಳ್ಳೆ ಮುಂತಾದ ವಿಷಯಗಳು ಸಮ್ಮೇಳನದ ಚರ್ಚಾ ವಿಷಯ ಆಗಿಲ್ಲ' ಎಂದು ಟೀಕಿಸಿದರು.
ಸಾಹಿತಿ, ಮಾಜಿ ಶಾಸಕಿ ಬಿ.ಟಿ.ಲಲಿತಾ ನಾಯಕ್, `ಸಮ್ಮೇಳನಕ್ಕೆ ಪ್ರಜಾಪ್ರಭುಗಳು (ಜನಸಾಮಾನ್ಯರು) ಬಂದಿದ್ದಾರೆ. ಆದರೆ ಪ್ರಜಾಸೇವಕರು (ರಾಜಕಾರಣಿಗಳು) ನಾಪತ್ತೆಯಾಗಿದ್ದಾರೆ. ಮಂತ್ರಿಗಳು, ಶಾಸಕರು ವೇದಿಕೆ ಏರಿ ಸಂದೇಶ ನೀಡಿ ಜಾಗ ಖಾಲಿ ಮಾಡುವುದಲ್ಲ. ಇಲ್ಲಿ ಕನ್ನಡ ಸಾಹಿತ್ಯ, ಕೃಷಿ, ಉದ್ಯೋಗ, ನೆಲ, ಜಲ ಕುರಿತು ನಡೆಯುವ ಗಂಭೀರ ಚರ್ಚೆಯನ್ನು ಮುಂದಿನ ಸಾಲಿನಲ್ಲಿ ಕುಳಿತು ಆಲಿಸಬೇಕು' ಎಂದರು.
`ಸಮ್ಮೇಳನವು ಹಣ ಚೆಲ್ಲಿ, ಮೋಜಿಗಾಗಿ ನಡೆಯುವ ಕಾರ್ಯಕ್ರಮ ಎಂದು ಸರ್ಕಾರ ಭಾವಿಸಿಕೊಂಡಂತಿದೆ. ಇಲ್ಲಿಗೆ ಬಂದವರಿಗೆ ಊಟ, ವಸತಿ ಇತರ ಸೌಕರ್ಯ ಸರಿಯಾಗಿ ಸಿಕ್ಕಿಲ್ಲ ಎಂದಾದರೆ ಅದಕ್ಕೆ ಸರ್ಕಾರವೂ ಹೊಣೆಯಾಗುತ್ತದೆ. ಸಮ್ಮೇಳನದ ಯಶಸ್ಸಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇರುವಷ್ಟೇ ಜವಾಬ್ದಾರಿ ಸರ್ಕಾರಕ್ಕೂ ಇದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
`ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ, ಗೋಷ್ಠಿಯಾದರೂ, ಸಾಂಸ್ಕೃತಿಕ ಕಾರ್ಯಕ್ರಮವಾದರೂ ಆಸಕ್ತಿದಾಯಕವಾಗಿದ್ದರೆ ಆಲಿಸುತ್ತಾರೆ. ಇಲ್ಲದಿದ್ದರೆ ಹರಟೆ ಹೊಡೆಯುತ್ತಾರೆ. ಈ ಸಮ್ಮೇಳನದ ಹಿಂದೆ ಪ್ರಭುತ್ವವನ್ನು ಖುಷಿಪಡಿಸುವ ಉದ್ದೇಶ ಇರುವಂತಿದೆ. ರಾಜಕೀಯ ಲಾಭದ ಉದ್ದೇಶವೇ ಹೆಚ್ಚಿರುವಂತೆ ಕಾಣಿಸುತ್ತಿದೆ' ಎಂದು ಕನ್ನಡ ಸಂಘಟಕ, ಹುಬ್ಬಳ್ಳಿಯ ಮಾಜಿ ಮೇಯರ್ ಮೋಹನ್ ಏಕಬೋಟೆ ಪ್ರತಿಕ್ರಿಯಿಸಿದರು.
`ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜೊತೆಗಿದ್ದ ಶಿಲ್ಪಾ ಶೆಟ್ಟರ್ ಅವರನ್ನು `ರಾಜರಾಜೇಶ್ವರಿ' ಎಂದು ಬಣ್ಣಿಸಿರುವುದು ಎಷ್ಟು ಸರಿ? ಕನ್ನಡ ಸಮ್ಮೇಳನಕ್ಕೆ ಸರ್ಕಾರ ಕೋಟಿ ಕೋಟಿ ಹಣ ನೀಡುತ್ತಿದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಪತ್ನಿಯನ್ನು ಈ ರೀತಿಯ ಓಲೈಸುವ ಅಗತ್ಯ ಇದೆಯೇ?' ಎಂದರು.
`ನುಂಗಣ್ಣರು ಜಾಸ್ತಿ ಇದ್ದಾರೆ!'
`ಸಮ್ಮೇಳನದಲ್ಲಿ ನುಂಗಣ್ಣರು ಜಾಸ್ತಿ ಇದ್ದಾರೆ. ಇಡೀ ವ್ಯವಸ್ಥೆ ಅಯೋಮಯವಾಗಿದೆ. 25 ವರ್ಷಗಳಿಂದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದೇನೆ. ಇಷ್ಟೊಂದು ಅವ್ಯವಸ್ಥೆ, ಸಾಹಿತಿಗಳನ್ನು ಕೆಟ್ಟದಾಗಿ ನಡೆಸಿಕೊಂಡ ರೀತಿ ಎಲ್ಲೂ ನೋಡಿಲ್ಲ.
ಸಮ್ಮೇಳನಕ್ಕೆ ಸುಮಾರು ್ಙ 5 ಕೋಟಿ ಸಂಗ್ರಹವಾಗಿದ್ದರೂ ಇಂತಹ ಅವ್ಯವಸ್ಥೆ ಉಂಟಾಗಿರುವುದು ದುರಂತ. ಸರ್ಕಾರಕ್ಕೂ, ಸಂಘಟಕರಿಗೂ ಸಾಹಿತಿಗಳ ಬೆಲೆ ಗೊತ್ತಿಲ್ಲ. ಸಾಹಿತ್ಯ- ಸಾಹಿತಿಗಳಿಗಿಂತಲೂ ರಾಜಕೀಯ- ರಾಜಕಾರಣಿಗಳಿಗೆ ಮಣೆ ಹಾಕಿದ್ದರಿಂದ ಈ ಸ್ಥಿತಿ ನಿರ್ಮಾಣವಾಗಿದೆ' ಎನ್ನುವುದು ಸಾಹಿತ್ಯ ಪರಿಷತ್ತಿನಲ್ಲಿ 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನ. ಚಕ್ರಪಾಣಿ ಅವರ ಅನುಭವದ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.