ADVERTISEMENT

ಸಿಂದಗಿ: ಶಾಸಕ ಸೇರಿ ಕಾರ್ಯಕರ್ತರ ಸೆರೆ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಸಿಂದಗಿ (ವಿಜಾಪುರ ಜಿಲ್ಲೆ):  ಇಲ್ಲಿಯ ಮಿನಿವಿಧಾನಸೌಧದ ಆವರಣದಲ್ಲಿ ಪಾಕ್ ಧ್ವಜವನ್ನು ಹಾರಿಸಿದ್ದರಿಂದ ಧ್ವಜಸ್ತಂಭ ಮಲಿನಗೊಂಡಿದೆ ಎಂದು ಆರೋಪಿಸಿ, ಆ ಸ್ಥಳವನ್ನು ಪವಿತ್ರಗೊಳಿಸಿ ಅಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲು ಮುಂದಾದ ಶಾಸಕ ರಮೇಶ ಭೂಸನೂರ ಹಾಗೂ 30ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಮಂಗಳವಾರ ಬಂಧಿಸಿ, ನಂತರ  ಬಿಡುಗಡೆ ಮಾಡಿದರು.

ನೂರಕ್ಕೂ ಅಧಿಕ ಬಿಜೆಪಿ ಕಾರ್ಯಕತರು ಧ್ವಜ ಸ್ತಂಭವನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ಅಲ್ಲಿ ಭಾರತ ಮಾತೆಯ ಭಾವಚಿತ್ರವನ್ನಿಟ್ಟು ಧ್ವಜಾರೋಹಣ ನಡೆಸಬೇಕು ಎನ್ನುವಷ್ಟರಲ್ಲಿಯೇ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದರು.

ನಂತರ ರಮೇಶ ಭೂಸನೂರ ನೇತೃತ್ವದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಜಶೇಖರ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ಮಠ, ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಎನ್. ಕಿರಣರಾಜ್, ಬಿಜೆಪಿ ಪ್ರಮುಖರಾದ ಅಶೋಕ ಅಲ್ಲಾಪೂರ, ಚನ್ನಪ್ಪಗೌಡ ಬಿರಾದಾರ ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಪ್ರತಿಭಟನಾಕರರನ್ನು ಪೊಲೀಸರು ತಡೆದ ಪರಿಣಾಮ ಶಾಸಕರು ಕಾಯಕರ್ತರೊಂದಿಗೆ ರಸ್ತೆಯಲ್ಲಿಯೇ ಕುಳಿತು ಧರಣಿ ನಡೆಸಿ, ಧ್ವಜಾರೋಹಣಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿದರು.

`ರಾಷ್ಟ್ರ ಧ್ವಜಾರೋಹಣ ಮಾಡಲು ಅದಕ್ಕೆ ತನ್ನದೇ ಆದ ಧ್ವಜ ನೀತಿಸಂಹಿತೆಯಿದ್ದು, ಎಂಥ ದೊಡ್ಡ ವ್ಯಕ್ತಿಯಿದ್ದರೂ  ಅವರಿಗೆ ಅನಗತ್ಯ ಸಂದರ್ಭದಲ್ಲಿ ಧ್ವಜಾರೋಹಣ ಮಾಡಲು ಅನುಮತಿ ನೀಡುವುದಿಲ್ಲ. ಯಾರೋ ಕಿಡಿಗೇಡಿಗಳು ಕಳ್ಳತನದಿಂದ ಬಂದು ಪಾಕ್ ಧ್ವಜ ಹಾರಿಸಿದ ಮಾತ್ರಕ್ಕೆ  ಆ ಸ್ಥಳ ಎಂದಿಗೂ ಅಪವಿತ್ರವಾಗಲಾರದು~ ಎಂದು ತಹಸೀಲ್ದಾರ ಡಾ.ಶಂಕ್ರಣ್ಣ ವಣಕ್ಯಾಳ ಅವರು ಶಾಸಕರಿಗೆ ಮನವರಿಕೆ ಮಾಡಿದರೂ ಅವರು ಪಟ್ಟುಬಿಡಲಿಲ್ಲ. ಆಗ ಪೊಲೀಸರು ಶಾಸಕ ಭೂಸನೂರ ಸೇರಿದಂತೆ ಕಾರ್ಯಕರ್ತರನ್ನು ಬಂಧಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.