ADVERTISEMENT

ಸಿಇಟಿಗೆ ಅರ್ಜಿ: ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST
ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಲುವಾಗಿ ಕೋಲಾರದ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಶಾಖೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದರು.
ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಲುವಾಗಿ ಕೋಲಾರದ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಶಾಖೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದರು.   

ಕೋಲಾರ: ಮಾರ್ಚ್‌ 17ರ ಒಳಗೆ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕು. ಇದೇ ಬುಧವಾರದಿಂದ ಆರಂಭವಾಗ­ಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೂ ಸಿದ್ಧತೆ ನಡೆಸಬೇಕು. 

–ಇಂಥದೊಂದು ಸವಾಲು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಎದುರಾಗಿದೆ.

ಸಿಇಟಿಗೆ ಅರ್ಜಿ ಸಲ್ಲಿಸಲು ಬ್ಯಾಂಕ್‌­ನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದೋ ಪರೀಕ್ಷೆಗೆ ಪೂರ್ವಸಿದ್ಧತೆ ನಡೆಸುವುದೋ ಎಂಬ ದ್ವಂದ್ವ ಸನ್ನಿವೇಶ ನಿರ್ಮಾಣ­ವಾಗಿದೆ.

ಮಾರ್ಚ್‌ 11ರಿಂದಲೇ ಸಿಇಟಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆದರೆ ನಗರದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಶಾಖೆಯಲ್ಲಿ ಏಕಕಾಲಕ್ಕೆ ನೂರಾರು ವಿದ್ಯಾರ್ಥಿಗಳು ಧಾವಿಸು­ತ್ತಿರು­ವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ.

24 ಗಂಟೆ ನಂತರವಷ್ಟೇ ಅರ್ಜಿಗಳು ಬರಲಿವೆ. ನಂತರ ಬನ್ನಿ ಎಂದು ಹೇಳಿದ್ದಾರೆ. ನಾವು ದೂರದ ನೆರ್ನಹಳ್ಳಿಯಿಂದ ಬಂದಿದ್ದೇವೆ. ಮತ್ತೆ ನಾಳೆ ಬರಬೇಕು. ಓದಿಕೊಳ್ಳಲು ಪುರುಸೊತ್ತೇ ಇಲ್ಲ ಎಂದು ನೆರ್ನಹಳ್ಳಿಯ ವಿದ್ಯಾರ್ಥಿನಿ ಶ್ಯಾಮಲಾ, ಸುಜಾತಾ ತಮ್ಮ ಅಳಲು ವ್ಯಕ್ತಪಡಿಸಿದರು.

ದೂರದ ಹಳ್ಳಿಗಳಿಂದ ಬಂದಿದ್ದವರು ಸರಿಯಾದ ಸಮಯಕ್ಕೆ ಊಟ, ನೀರು ಇಲ್ಲದೆ ಬ್ಯಾಂಕ್‌ನ ಆವರಣದಲ್ಲಿ ಕಾಯುತ್ತಿದ್ದ ದೃಶ್ಯ ಮಂಗಳವಾರ ಕಂಡು ಬಂತು. ಸ್ಟಡಿ ಹಾಲಿಡೇಸ್‌ ಅನ್ನು ಹೀಗೆ ಕಳೆಯಬೇಕಾಗಿದೆ ಎಂದು ಹಲವರು ವಿಷಾದ ವ್ಯಕ್ತಪಡಿಸಿದರು.

ಗ್ರಾಹಕರ ಸಂಕಟ: ಸೋಮವಾರದಿಂದ ನೂರಾರು ವಿದ್ಯಾರ್ಥಿಗಳು ಏಕಕಾಲಕ್ಕೆ ಬ್ಯಾಂಕ್‌ಗೆ ಧಾವಿಸಿ ಬರುತ್ತಿರುವ ಪರಿಣಾಮ ನೂಕು– ನುಗ್ಗಲು ಏರ್ಪಡುತ್ತಿದೆ. ಇದರಿಂದ ದೈನಂದಿನ ಗ್ರಾಹಕರಿಗೆ ತೊಂದರೆ ಎದುರಾಗಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.