ADVERTISEMENT

ಸಿಇಟಿ: ಸೀಟು ಆಯ್ಕೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಪ್ರವೇಶಕ್ಕೆ ಆನ್‌ಲೈನ್‌ನಲ್ಲಿ ಆದ್ಯತೆ ಮೇಲೆ ಸೀಟುಗಳನ್ನು ಗುರುತಿಸುವ (ಆಪ್ಷನ್ ಎಂಟ್ರಿ) ಪ್ರಕ್ರಿಯೆ ಮಂಗಳವಾರ ರಾತ್ರಿ 11 ಗಂಟೆಯಿಂದಲೇ ಶುರುವಾಗಿದೆ.

ಈ ತಿಂಗಳ 7ರಂದು ಬೆಳಿಗ್ಗೆ 11 ಗಂಟೆವರೆಗೂ ಕಾಲೇಜು ಹಾಗೂ ಸೀಟುಗಳನ್ನು ಗುರುತಿಸಲು ಅವಕಾಶ ನೀಡಲಾಗಿದೆ. ಮೊದಲ ಸುತ್ತಿನಲ್ಲಿ ಸೀಟು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳ ಪಟ್ಟಿಯನ್ನು ಇದೇ 10ರಂದು ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಸೀಟುಗಳನ್ನು ಗುರುತಿಸಲು ಪ್ರಕ್ರಿಯೆಯನ್ನು ಈ ತಿಂಗಳ 4ರಿಂದ ಆರಂಭಿಸಲು ಸೋಮವಾರ ನಿರ್ಧರಿಸಲಾಗಿತ್ತು. ಆದರೆ, ಈಗಾಗಲೇ ಸೀಟು ಆಯ್ಕೆ ಪ್ರಕ್ರಿಯೆ ತಡವಾಗಿರುವ ಕಾರಣ ಮಂಗಳವಾರ ರಾತ್ರಿಯಿಂದಲೇ ಆನ್‌ಲೈನ್ ಮೂಲಕ ಸೀಟುಗಳನ್ನು ಗುರುತಿಸಲು ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಪದವಿ ಹಂತದ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ವಾಸ್ತುಶಿಲ್ಪ ಮತ್ತಿತರ ವಿಭಾಗಗಳಲ್ಲಿ ಕಾಲೇಜುವಾರು, ಕೋರ್ಸ್‌ವಾರು ಹಾಗೂ ಪ್ರವರ್ಗವಾರು ಲಭ್ಯವಿರುವ ಸೀಟುಗಳ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಮಂಗಳವಾರ ಪ್ರಕಟಿಸಲಾಗಿದೆ.

ಸೀಟುಗಳನ್ನು ಗುರುತಿಸುವ ಪ್ರಕ್ರಿಯೆ 7ರಂದು ರಾತ್ರಿ 11ಕ್ಕೆ ಅಂತ್ಯಗೊಳ್ಳಲಿದ್ದು, 8ರಂದು ಬೆಳಿಗ್ಗೆ 10ಕ್ಕೆ ಅಣಕು ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆಯ್ಕೆಗಳಲ್ಲಿ ಬದಲಾವಣೆ ಮಾಡಲು, ರದ್ದುಪಡಿಸಲು, ಹೆಚ್ಚುವರಿಯಾಗಿ ಏನಾದರೂ ಸೇರಿಸುವುದಿದ್ದರೆ 9ರಂದು ಸಂಜೆ 5ರ ಒಳಗೆ ಅವಕಾಶ ಇರುತ್ತದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಪಿ.ಕುಲಕರ್ಣಿ ತಿಳಿಸಿದ್ದಾರೆ. ಮೊದಲ ಸುತ್ತಿನಲ್ಲಿ ಸೀಟು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಇದೇ 10ರಿಂದ 15ರ ಒಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು. ಪ್ರಾಧಿಕಾರ ಆರಂಭಿಸಿರುವ ನಿಗದಿತ ಸಹಾಯವಾಣಿ ಕೇಂದ್ರದಲ್ಲಿ ಶುಲ್ಕ ಪಾವತಿಯ ಡಿ.ಡಿ.ಯನ್ನು ನೀಡುವ ಮೂಲಕ ಸೀಟು ಆಯ್ಕೆ ಮಾಡಿಕೊಂಡಿರುವ ಪತ್ರವನ್ನು ಪಡೆದು ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು. ಆ ನಂತರ ಈ ವಿಷಯವನ್ನು ಪ್ರಾಧಿಕಾರಕ್ಕೂ ತಿಳಿಸಬೇಕಾಗುತ್ತದೆ.

ಎರಡನೇ ಸುತ್ತಿನಲ್ಲಿ ಆದ್ಯತೆಗಳನ್ನು ಗುರುತಿಸುವ ಪ್ರಕ್ರಿಯೆ ಇದೇ 17ರಿಂದ ಆರಂಭವಾಗಲಿದ್ದು, 22ರಂದು ಸಂಜೆ 5 ಗಂಟೆವರೆಗೂ ಅವಕಾಶ ಇರುತ್ತದೆ. ಸೀಟುಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳ ಪಟ್ಟಿಯನ್ನು ಇದೇ 23ರಂದು ಪ್ರಕಟಿಸಲಾಗುತ್ತದೆ. 23ರಿಂದ 27ರವರೆಗೂ ಪ್ರವೇಶಕ್ಕೆ ಅವಕಾಶ ಇರುತ್ತದೆ.

ಲ್ಯಾಟರಲ್ ಪ್ರವೇಶ: ಡಿಪ್ಲೊಮಾ ಅಭ್ಯರ್ಥಿಗಳಿಗೆ ಎಂಜಿನಿಯರಿಂಗ್ 3ನೇ ಸೆಮಿಸ್ಟರ್‌ಗೆ ನೇರವಾಗಿ ಪ್ರವೇಶ ನೀಡಲು ಈಗಾಗಲೇ ಪ್ರವೇಶ ಪರೀಕ್ಷೆ ನಡೆದಿದ್ದು, ಇದೇ 6ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ. ಇದೇ 9ರಿಂದ 17ರವರೆಗೆ ಸಹಾಯವಾಣಿ ಕೇಂದ್ರಗಳಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ.

ಇದೇ 10ರಂದು ಸೀಟು ಆಯ್ಕೆ ಪಟ್ಟಿ ಪ್ರಕಟವಾಗಲಿದ್ದು, 12ರಿಂದ 15ರವರೆಗೆ ಆದ್ಯತೆಯ ಮೇಲೆ ಸೀಟುಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯಲಿದೆ. 16ರಂದು ಅಣಕು ಸೀಟು ಹಂಚಿಕೆ ಪಟ್ಟಿ ಪ್ರಕಟಿಸಲಾಗುತ್ತದೆ. 17ರವರೆಗೂ ಬದಲಾವಣೆಗೆ ಅವಕಾಶ ಇರುತ್ತದೆ. 18ರಂದು ಸೀಟು ಆಯ್ಕೆ ಮಾಡಿಕೊಂಡವರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅಂದಿನಿಂದ 22ರವರೆಗೂ ಪ್ರವೇಶಕ್ಕೆ ಕಾಲಾವಕಾಶ ನೀಡಲಾಗುತ್ತದೆ.

ಕಾಮೆಡ್ - ಕೆ: ಖಾಸಗಿ ವೃತ್ತಿಪರ ಕಾಲೇಜುಗಳಲ್ಲಿನ ಕಾಮೆಡ್ -ಕೆ ಕೋಟಾ ಸೀಟುಗಳ ಭರ್ತಿಗೆ ಮಂಗಳವಾರದಿಂದ ಕೌನ್ಸೆಲಿಂಗ್ ಆರಂಭವಾಗಿದೆ. ವೈದ್ಯಕೀಯ ವಿಭಾಗದಲ್ಲಿ ಲಭ್ಯವಿದ್ದ 683 ಸೀಟುಗಳ ಪೈಕಿ 537 ಸೀಟುಗಳು ಮೊದಲ ದಿನವೇ ಭರ್ತಿಯಾಗಿವೆ.

ಬುಧವಾರವೂ ಕೌನ್ಸೆಲಿಂಗ್ ಮುಂದುವರಿಯಲಿದ್ದು, ಕೇವಲ 146 ಸೀಟುಗಳು ಮಾತ್ರ ಹಂಚಿಕೆಗೆ ಲಭ್ಯವಾಗಲಿವೆ.

ದಂತ ವೈದ್ಯಕೀಯ ವಿಭಾಗದಲ್ಲಿ ಒಟ್ಟು 762 ಸೀಟುಗಳು ಲಭ್ಯವಿದ್ದವು. ಮೊದಲ ದಿನ ಕೇವಲ 18 ಸೀಟುಗಳು ಅಷ್ಟೇ ಭರ್ತಿಯಾಗಿವೆ. ಮೊದಲ ಸುತ್ತಿನಲ್ಲಿ ದಂತ ವೈದ್ಯಕೀಯ ಸೀಟುಗಳಿಗೆ ಈ ವರ್ಷವೂ ಬೇಡಿಕೆ ಇಲ್ಲ. ವೈದ್ಯಕೀಯ, ಎಂಜಿನಿಯರಿಂಗ್ ವಿಭಾಗದಲ್ಲಿ ಸೀಟು ಸಿಗದೆ ಇದ್ದವರು ಎರಡನೇ ಸುತ್ತಿನಲ್ಲಿ ದಂತ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯುವ ಸಾಧ್ಯತೆ ಇದೆ ಎಂದು ಕಾಮೆಡ್ - ಕೆ ಮೂಲಗಳು ತಿಳಿಸಿವೆ.

1658 ವೈದ್ಯ ಸೀಟು
2013-14ನೇ ಸಾಲಿನ ಪ್ರವೇಶಕ್ಕೆ ವೈದ್ಯಕೀಯ ವಿಭಾಗದಲ್ಲಿ 1,658 ಹಾಗೂ ದಂತ ವೈದ್ಯಕೀಯ ವಿಭಾಗದಲ್ಲಿ 752 ಸೀಟುಗಳು ಲಭ್ಯವಾಗಲಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಪಿ.ಕುಲಕರ್ಣಿ ತಿಳಿಸಿದರು.

ಬೀದರ್, ರಾಯಚೂರು ಸರ್ಕಾರಿ ವೈದ್ಯಕೀಯ ಕಾಲೇಜುಗಳ ತಲಾ 100 ವೈದ್ಯಕೀಯ ಸೀಟುಗಳು ಇದರಲ್ಲಿ ಸೇರಿಲ್ಲ. ಅಲ್ಲದೆ ಐದು ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳ ಸೀಟುಗಳು ಲಭ್ಯವಾಗಿಲ್ಲ. ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಈ ಕಾಲೇಜುಗಳ ಮಾನ್ಯತೆಯನ್ನು ನವೀಕರಿಸದ ಕಾರಣ ಮೊದಲ ಸುತ್ತಿನ ಕೌನ್ಸೆಲಿಂಗ್‌ಗೆ ಈ ಕಾಲೇಜುಗಳ ಸೀಟುಗಳು ಲಭ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.