ADVERTISEMENT

ಸಿಇಟಿ: ಸೀಟ್ ಮ್ಯಾಟ್ರಿಕ್ಸ್‌ ಶೀಘ್ರ

ಐಚ್ಛಿಕ ಆಯ್ಕೆಗೆ ಕೆಇಎ ಮಾರ್ಗಸೂಚಿ– ಮಾಹಿತಿ ಅರಿತುಕೊಳ್ಳಲು ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:00 IST
Last Updated 13 ಜೂನ್ 2019, 20:00 IST
   

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಆಯ್ಕೆಗಾಗಿ ಸಿಇಟಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಕಾರ್ಯ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸಹಾಯವಾಣಿ ಕೇಂದ್ರಗಳಲ್ಲಿ ನಡೆಯುತ್ತಿದ್ದು, 4 ದಿನಗಳ ಒಳಗೆ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

‘ಜೂನ್ 19ರ ವರೆಗೆ ದಾಖಲೆಗಳ ಪರಿಶೀಲನೆ ನಡೆಯಲಿದೆ. ಈಗಾಗಲೇ ಪ್ರಕಟಿಸಿದಂತೆ ರ‍್ಯಾಂಕ್‌ ಪಟ್ಟಿಯ ಆಧಾರದಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಸರ್ಕಾರದಿಂದ ಸೀಟ್‌ ಮ್ಯಾಟ್ರಿಕ್ಸ್‌ ದೊರೆತ ನಂತರ ಅಭ್ಯರ್ಥಿಗಳಿಂದ ಐಚ್ಛಿಕ ನಮೂದಿಸುವ (ಆಪ್ಷನ್‌ ಎಂಟ್ರಿ) ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಯೊಬ್ಬರು ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಂಚಿಕೆಗೆ ಲಭ್ಯವಿರುವ ಕಾಲೇಜುವಾರು, ಕೋರ್ಸ್‌ವಾರು ಹಾಗೂ ಪ್ರವರ್ಗವಾರು ಸೀಟುಗಳ ವಿವರಗಳನ್ನು ಕೆಇಎ ವೆಬ್‌ಸೈಟ್‌ http://kea.kar.nic.in ಇಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಇದನ್ನು ಡೌನ್‌ಲೋಡ್‌ ಮಾಡಿಕೊಂಡು ಮುದ್ರಿತ ಪ್ರತಿಯನ್ನು ತೆಗೆದುಕೊಳ್ಳಬಹುದು’ ಎಂದರು.

ADVERTISEMENT

‘ದಾಖಲೆಗಳ ಪರಿಶೀಲನೆ ನಂತರ ಅರ್ಹರಾಗುವ ಅಭ್ಯರ್ಥಿಗಳನ್ನು ಮಾತ್ರ ಇಚ್ಛೆಗಳನ್ನು ನಮೂದಿಸಲು ಪರಿಗಣಿಸಲಾಗುವುದು. ಇಚ್ಛೆಗಳನ್ನು ಎಷ್ಟು ಬೇಕಾದರೂ ನಮೂದಿಸಬಹುದು. 500ರಷ್ಟು ಐಚ್ಛಿಕಗಳನ್ನು ಸಹ ನಮೂದಿಸಬಹುದು. ಕಾಲೇಜು, ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಇದ್ದರೆ ಕಂಪ್ಯೂಟರ್‌ನಲ್ಲಿ ನಮೂದಿಸುವುದು ಸುಲಭವಾಗುತ್ತದೆ.ಸೀಟು ಸಿಗದಿದ್ದರೆ ಉಂಟಾಗುವ ನಿರಾಸೆಯನ್ನುತಪ್ಪಿಸುವುದಕ್ಕಾಗಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಚ್ಛೆಗಳನ್ನು ನಮೂದಿಸಬೇಕು’ ಎಂದು ಅವರು ವಿವರಿಸಿದರು.

ಕಟ್‌ ಆಫ್‌ ರ‍್ಯಾಂಕ್‌– ಊಹೆ ಬೇಡ: ಕೆಇಎ ವೆಬ್‌ಸೈಟ್‌ನಲ್ಲಿ 2018–19ನೇ ಸಾಲಿನ ಹಾಗೂ ಅದಕ್ಕಿಂತ ಹಿಂದಿನ ವರ್ಷಗಳ ಕಟ್‌ ಆಫ್‌ ರ‍್ಯಾಂಕ್‌ಗಳನ್ನು ಪ್ರದರ್ಶಿಸಲಾಗಿದೆ. ಇದು ಅಭ್ಯರ್ಥಿಗಳ ಮಾಹಿತಿಗಾಗಿ ಮಾತ್ರ. ಇದರ ಆಧಾರದಲ್ಲೇ 2019–20ನೇ ಸಾಲಿನಲ್ಲಿ ಲಭ್ಯವಿರುವ ಸೀಟುಗಳ ಕುರಿತು ಊಹೆ ಮಾಡಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.