ADVERTISEMENT

ಸಿ.ಎಂ.ಶೆಟ್ಟರ್ ಕುಟುಂಬದಿಂದ ಹಗಲು ದರೋಡೆ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:59 IST
Last Updated 23 ಏಪ್ರಿಲ್ 2013, 19:59 IST

ಗುಲ್ಬರ್ಗ: ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ಗೆ 'ಗೂಟ'ದ ಕಾರು ಇದೇ ಕೊನೆಯಾಗಲಿದೆ; ಅವರೇನು ಶುದ್ಧ ಹಸ್ತರಲ್ಲ. ಶೆಟ್ಟರ್ ಪತ್ನಿ ಹಾಗೂ ಮಕ್ಕಳೆಲ್ಲ ಸೇರಿ ಸಾಕಷ್ಟು ಹಣ ಬಾಚಿಕೊಳ್ಳುತ್ತಿದ್ದಾರೆ ಎಂದು ಕೆ.ಜೆ.ಪಿ. ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಇಲ್ಲಿ ಹರಿಹಾಯ್ದರು.

ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ತಮ್ಮ ಬೆನ್ನಿಗೆ ತಾವೇ ಚೂರಿ ಹಾಕಿಕೊಂಡರು' ಎನ್ನುವ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಶೆಟ್ಟರ್ ಹದ್ದುಮೀರಿ ಮಾತನಾಡುತ್ತಿದ್ದಾರೆ. ಅವರ ಕುಟುಂಬದ ಸದಸ್ಯರು ಹಗಲು ದರೋಡೆ ನಡೆಸುತ್ತಿರುವುದರಿಂದ ರಾಜ್ಯದ ಅಭಿವೃದ್ಧಿ ಹಳ್ಳ ಹಿಡಿಯುತ್ತಿದೆ. ರಾಜ್ಯದ ಹಿತಾಸಕ್ತಿ ಕಾಯುವಲ್ಲಿ ಶೆಟ್ಟರ್ ಸಂಪೂರ್ಣ ವಿಫಲರಾಗಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ 40 ಸ್ಥಾನ ಗೆಲ್ಲುವುದು ಕಷ್ಟ. ಕೆಜೆಪಿಯನ್ನು ಟೀಕಿಸುವ ನೈತಿಕತೆ ಅವರಿಗೆ ಇಲ್ಲ ಎಂದು ಕಿಡಿಕಾರಿದರು.

`ಬೇಜವಾಬ್ದಾರಿ ಹೇಳಿಕೆ ನಿಲ್ಲಿಸಿ'

ಹುಬ್ಬಳ್ಳಿ: 'ನನ್ನ ಕುಟುಂಬದವರು ವಿಧಾನಸೌಧ ಲೂಟಿ ಮಾಡಿದ್ದರೆ ಸುಮ್ಮನೆ ಆರೋಪ ಮಾಡುವುದು ಬಿಟ್ಟು ದಾಖಲೆಗಳ ಸಮೇತ ಸಾಬೀತುಪಡಿಸಿ' ಎಂದು ಕೆಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸವಾಲು ಹಾಕಿದರು.

ನಗರದ ವಿವಿಧೆಡೆ ಮಂಗಳವಾರ ಚುನಾವಣಾ ಪ್ರಚಾರ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
'ಶೆಟ್ಟರ್ ಪತ್ನಿ ಹಾಗೂ ಮಕ್ಕಳು ವಿಧಾನಸೌಧ ಲೂಟಿ ಮಾಡಿದ್ದಾರೆ' ಎಂದು ಗುಲ್ಬರ್ಗಾದಲ್ಲಿ ಯಡಿಯೂರಪ್ಪ ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಶೆಟ್ಟರ್ ಮೇಲಿನಂತೆ ಪ್ರತಿಕ್ರಿಯಿಸಿದರು.

'ಬೇಜವಾಬ್ದಾರಿ ಹೇಳಿಕೆ ನೀಡುವುದು ನಂತರ ಕ್ಷಮೆ ಕೇಳುವುದು ಯಡಿಯೂರಪ್ಪ ಅವರ ಹುಟ್ಟುಗುಣ. ಈಗಾಗಲೇ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ವಿಚಾರದಲ್ಲಿ ಸಾಬೀತಾಗಿದೆ. ಈ ರೀತಿ ಇನ್ನೊಬ್ಬರ ಭಾವನೆಗೆ ಧಕ್ಕೆ ತರುವ ಕೀಳುಮಟ್ಟದ ಹೇಳಿಕೆ ನೀಡುವುದನ್ನು ಅವರು ನಿಲ್ಲಿಸಲಿ' ಎಂದು ಅವರು ಹೇಳಿದರು.

'ಅಡ್ವಾಣಿ ಅವರ ವಿರುದ್ಧ ಲಂಚ ಪಡೆದ ಆರೋಪ ಮಾಡಿದ ಧನಂಜಯಕುಮಾರ್ ಬಹಿರಂಗವಾಗಿ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದ ಶೆಟ್ಟರ್, ಹೀಗೆ ತಳಬುಡವಿಲ್ಲದೆ ಆರೋಪಗಳನ್ನು ಮಾಡುವವರಿಗೆ ಜನರೇ ಪಾಠ ಕಲಿಸಲಿದ್ದಾರೆ' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.