ADVERTISEMENT

ಸಿ.ಎಂ ಅನುದಾನ ಬಳಕೆಯಲ್ಲಿ ಲೋಪ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST

ಬೆಂಗಳೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರಾಜ್ಯದ ಏಳು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡ ತಲಾ 100 ಕೋಟಿ ರೂಪಾಯಿ ಮೊತ್ತದ ವಿವಿಧ ಕಾಮಗಾರಿಗಳ ಅನುಷ್ಠಾನದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ನಗರದ ಸಮಗ್ರ ಅಭಿವೃದ್ಧಿಗಿಂತ ಹೆಚ್ಚಾಗಿ ರಸ್ತೆ ಕಾಮಗಾರಿಗಳಿಗೇ ಅಧಿಕ ಹಣ ವ್ಯಯ ಮಾಡಲಾಗಿದೆ ಎಂದು ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಆಕ್ಷೇಪಿಸಿದೆ.

ಸ್ಥಳೀಯ ಸಂಸ್ಥೆಗಳ ಕುರಿತಂತೆ 2012ರ ಮಾರ್ಚ್‌ಗೆ ಅಂತ್ಯಗೊಂಡ ವರ್ಷದ ವರದಿಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

2008-09 ಮತ್ತು 2009-10ನೇ ಸಾಲಿನಲ್ಲಿ ರಾಜ್ಯದ ಏಳು ಮಹಾನಗರ ಪಾಲಿಕೆಗಳಿಗೆ ತಲಾ 100 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಬಿಡುಗಡೆ ಮಾಡಲಾಗಿತ್ತು. ನೀರು ಸರಬರಾಜು, ಒಳಚರಂಡಿ, ಮಳೆ ನೀರು ಚರಂಡಿ ಹಾಗೂ ಹೆದ್ದಾರಿ, ಹಣಕಾಸಿನ ಕೊರತೆ ಕಾರಣದಿಂದ ಸ್ಥಗಿತಗೊಂಡಿದ್ದ ತುರ್ತು ಕಾಮಗಾರಿಗಳನ್ನು ಈ ಅನುದಾನದಡಿ ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ನಿರ್ದಿಷ್ಟ ಕಾಮಗಾರಿಗಳಿಗೆ ಅನುದಾನ ಬಳಸದೆ, ರಸ್ತೆ ಸಲುವಾಗಿಯೇ ಶೇ 58ರಿಂದ 68ರಷ್ಟು ಹಣ ಬಳಸಲಾಗಿದೆ ಎಂದು ವರದಿ ಎತ್ತಿ ತೋರಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಸಮಿತಿಗೆ ಪ್ರಮುಖ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಅದು ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ ಎಂದು ಹೇಳಲಾಗಿದೆ.

ಕಾಮಗಾರಿಗಳ ವಿಭಜನೆ:ಲಾಭ ಮಾಡುವ ಉದ್ದೇಶದಿಂದ ಕಾಮಗಾರಿಗಳ ವಿಭಜನೆ ಕೂಡ ನಡೆದಿದೆ. ರೂ. 50 ಲಕ್ಷ  ವರೆಗಿನ ಕಾಮಗಾರಿಗಳಿಗೆ, ಕಾರ್ಯನಿರ್ವಾಹಕ ಎಂಜಿನಿಯರ್ ಮಟ್ಟದಲ್ಲೇ ಅನುಮತಿ ನೀಡಲು ಅವಕಾಶ ಇದೆ. ಇದಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಸೂಪರಿಂಟೆಂಡಿಂಗ್ ಎಂಜಿನಿಯರ್ ಅಥವಾ ಮುಖ್ಯ ಎಂಜಿನಿಯರ್ ಅವರ ಅನುಮತಿಗೆ ಕಳುಹಿಸಬೇಕು.

ಈ ನಿಯಮವನ್ನು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉಲ್ಲಂಘಿಸಲಾಗಿದೆ. ಒಟ್ಟು 6.21 ಕೋಟಿ ರೂಪಾಯಿ ಮೊತ್ತದ 15 ರಸ್ತೆ ಕಾಮಗಾರಿಗಳನ್ನು ವಿಭಜಿಸಿ, ಸ್ಥಳೀಯವಾಗಿ ಮಂಜೂರಾತಿ ಪಡೆಯಲಾಗಿದೆ. ಇದಕ್ಕೆ ತ್ವರಿತ ಅನುಷ್ಠಾನದ ನೆಪವೊಡ್ಡಿರುವುದು ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಆಡಳಿತಾತ್ಮಕ ಅನುಮೋದನೆ ಮತ್ತು ತಾಂತ್ರಿಕ ಮಂಜೂರಾತಿ ಪಡೆಯುವ ಮೊದಲೇ ಟೆಂಡರ್ ಕರೆದ ಪ್ರಕರಣಗಳನ್ನೂ ಪತ್ತೆಹಚ್ಚಲಾಗಿದೆ. ಬಳ್ಳಾರಿ ಮತ್ತು ದಾವಣಗೆರೆ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈ ಅಕ್ರಮ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕುಡಿವ ನೀರು: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅನುಷ್ಠಾನದಲ್ಲೂ ಲೋಪಗಳು ಆಗಿವೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಯೋಜನೆಗಳ ಮಂಜೂರಾತಿಗೆ ವಿಳಂಬ ನೀತಿ ಅನುಸರಿಸಿರುವ ಕಾರಣ ಅವುಗಳ ಅನುಷ್ಠಾನ ನಿಗದಿತ ಅವಧಿಯಲ್ಲಿ ಆಗಿಲ್ಲ. ಅನೇಕ ಯೋಜನೆಗಳಿಗೆ ಹಣಕಾಸು ವರ್ಷದ ಕೊನೆ ದಿನಗಳಲ್ಲಿ ಒಪ್ಪಿಗೆ ನೀಡಲಾಗಿದೆ. ಕ್ರಿಯಾ ಯೋಜನೆಗಳು ಕೂಡ ನ್ಯೂನತೆಗಳಿಂದ ಕೂಡಿದ್ದವು ಎಂದು ಅದು ತಿಳಿಸಿದೆ.

ಹಣ ದುರುಪಯೋಗ: ಸಿರಾ ತಾಲ್ಲೂಕಿನ ಸಮಾಜ ಕಲ್ಯಾಣಾಧಿಕಾರಿ ಸರ್ಕಾರಕ್ಕೆ ಜಮಾ ಮಾಡಬೇಕಿದ್ದ 10.77 ಲಕ್ಷದಲ್ಲಿ ಕೇವಲ 77 ಸಾವಿರ ರೂಪಾಯಿ ಮಾತ್ರ ಕಟ್ಟಿ ಉಳಿದ 10 ಲಕ್ಷ ರೂಪಾಯಿಯನ್ನು ಅಕ್ರಮವಾಗಿ ತೆಗೆದ್ದಿದರು. ಈ ಸಲುವಾಗಿ ಖಜಾನೆಯ ಚಲನ್‌ಗಳನ್ನೂ ಅಕ್ರಮವಾಗಿ ತಿದ್ದಿದ್ದರು ಎಂಬುದನ್ನು ಲೆಕ್ಕಪರಿಶೋಧನೆ ವೇಳೆ ಪತ್ತೆಹಚ್ಚಲಾಗಿದೆ.

ಪ್ರಗತಿ ಇಲ್ಲ: 2007ರಿಂದ 2012ರ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಅನುದಾನ ಹಂಚಿಕೆ ಏರುಗತಿಯಲ್ಲಿದ್ದರೂ ನಿರೀಕ್ಷಿತ ಪ್ರಗತಿ ಆಗಿಲ್ಲ ಎಂದೂ ವರದಿ ಹೇಳಿದೆ.

ವೆಚ್ಚದ ಮೇಲೂ ಜಿಲ್ಲಾ ಪಂಚಾಯಿತಿಗಳಿಗೆ ಹಿಡಿತ ಇಲ್ಲ. ಪಂಚಾಯತ್‌ರಾಜ್ ಸಂಸ್ಥೆಗಳ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವ ಬದಲಾವಣೆಗಳನ್ನೂ ಮಾಡಿಲ್ಲ. ಹೀಗಾಗಿ ವಿಕೇಂದ್ರೀಕರಣ ವ್ಯವಸ್ಥೆಯ ಪರಿಶೀಲನೆಗೆ ಉನ್ನತ ಮಟ್ಟದಲ್ಲಿ ಯಾವ ವ್ಯವಸ್ಥೆಯೂ ಇಲ್ಲ . ಬಜೆಟ್ ಸಿದ್ಧಪಡಿಸುವ ವಿಷಯದಲ್ಲಿ ತಾಲ್ಲೂಕು ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ಇಲ್ಲ ಎಂದೂ ವಿವರಿಸಲಾಗಿದೆ.

ಜೆನರ್ಮ್‌ನಲ್ಲೂ ಲೋಪ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ಇತರ ಕೆಲವು ಪ್ರಮುಖ ನಗರಗಳಲ್ಲಿ ಮೂಲಸೌಲಭ್ಯ ಕಲ್ಪಿಸುವ ಜವಾಹರಲಾಲ್ ನೆಹರು ನಗರೋತ್ಥಾನ ಯೋಜನೆ (ಜೆ ನರ್ಮ್) ಜಾರಿಯಲ್ಲೂ ಕೆಲವು ತಪ್ಪುಗಳಾಗಿವೆ ಎಂಬುದನ್ನು ಲೆಕ್ಕಪರಿಶೋಧನಾ ವರದಿ ತಿಳಿಸಿದೆ.

2005-12ರ ಅವಧಿಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ತಪ್ಪುಗಳು ಬೆಳಕಿಗೆ ಬಂದಿವೆ. ಯೋಜನೆ ಜಾರಿ ಮಾಡುವಾಗ ಕಡ್ಡಾಯವಾಗಿ ಪಾಲಿಸಬೇಕಿದ್ದ ಕೆಲವು ಸುಧಾರಣಾ ಕ್ರಮಗಳನ್ನು ಪಾಲಿಸಿಲ್ಲ. ನಿರ್ದಿಷ್ಟ ಉದ್ದೇಶಕ್ಕೆ ಬಳಸಬೇಕಾಗಿದ್ದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿರುವುದು, ಶಾಸನಬದ್ಧ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದಿರುವುದು ಕಂಡುಬಂದಿದೆ.

ಹಣಕಾಸು ನಿರ್ವಹಣೆ ಸರಿ ಇಲ್ಲ ಎಂದೂ ಹೇಳಲಾಗಿದೆ.ಮಳೆ ನೀರು ಚರಂಡಿಗಳ ಪುನರ್ ನಿರ್ಮಾಣದಲ್ಲೂ ಲೋಪಗಳಾಗಿವೆ. ಗುತ್ತಿಗೆದಾರರಿಗೆ ಅನುಕೂಲ ಮಾಡಲು ಪೂರಕವಾದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿ ಉಲ್ಲೇಖಿಸಿದ್ದು, ಗುತ್ತಿಗೆದಾರರು ಅಧಿಕ ದರಗಳನ್ನು ನಮೂದಿಸಿದ್ದರು ಎಂದು ತಿಳಿಸಿದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.