ಬೆಂಗಳೂರು: ನಗರದ ಕತ್ರಿಗುಪ್ಪೆ ಬಳಿಯ ರಾಮರಾವ್ ಬಡಾವಣೆಯಲ್ಲಿ ನಾಗರಿಕ ಉದ್ದೇಶಕ್ಕೆ (ಸಿ.ಎ) ಮೀಸಲಿಟ್ಟಿದ್ದ ನಿವೇಶನದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅವಕಾಶ ನೀಡಿದೆ ಎಂದು ದೂರಿ ಶ್ರೀನಿವಾಸ ಗುಪ್ತ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ನೇತೃತ್ವದ ವಿಭಾಗೀಯ ಪೀಠ ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ತುರ್ತು ನೋಟಿಸ್ ಜಾರಿಗೆ ಗುರುವಾರ ಆದೇಶಿಸಿದೆ.
ಸಿ.ಎ ನಿವೇಶನದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲು ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಬಿಬಿಎಂಪಿಗೆ ಈ ಹಿಂದೆ ಪತ್ರ ಬರೆದಿತ್ತು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್ ಧ್ವಂಸ ಮಾಡುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
`ವ್ಯಾಪಾರಿಗಳಿಗೆ ಪರಿಹಾರ'
ಮಲ್ಲೇಶ್ವರದ ಮಾರುಕಟ್ಟೆ ಪ್ರದೇಶದಲ್ಲಿರುವ ವ್ಯಾಪಾರಿಗಳಿಗೆ ಪರಿಹಾರ ನೀಡಲಾಗುವುದು, ಅವರಿಗೆ ಪುನರ್ವಸಿ ಕಲ್ಪಿಸಲಾಗುವುದು ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಗುರುವಾರ ತಿಳಿಸಿತು.
`ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಈಗ 247 ಅಂಗಡಿಗಳು ಇವೆ. ಅಗತ್ಯ ಕಾನೂನು ಪ್ರಕ್ರಿಯೆ ಅನುಸರಿಸದೆ, ಅವರನ್ನು ಒಕ್ಕಲೆಬ್ಬಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಕೇವಲ ಎರಡು ದಿನ ಮುಂಚಿತವಾಗಿ ನೋಟಿಸ್ ನೀಡಿ, ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಯತ್ನ ನಡೆದಿದೆ' ಎಂದು ಶಿವಣ್ಣ ಎಂಬುವರು ಸಲ್ಲಿಸಿರುವ ಅರ್ಜಿಯಲ್ಲಿ ದೂರಲಾಗಿದೆ. ಮಾರುಕಟ್ಟೆ ಇರುವ ಸ್ಥಳದಲ್ಲಿ ಬಹುಮಹಡಿ ಮಾಲ್ ನಿರ್ಮಿಸಲು ಉದ್ದೇಶಿಸಲಾಗಿದೆ.
ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಅವರು ನಡೆಸಿದರು. ವ್ಯಾಪಾರಿಗಳಿಗೆ ನೀಡಲು ಉದ್ದೇಶಿಸಿರುವ ಪರಿಹಾರ ಕುರಿತು ಲಿಖಿತ ಹೇಳಿಕೆ ಸಲ್ಲಿಸುವಂತೆ ನಿರ್ದೇಶನ ನೀಡಿದ ಪೀಠ, ವಿಚಾರಣೆ ಮುಂದೂಡಿದೆ.
ಮಲ್ಲೇಶ್ವರ ಪ್ರದೇಶದಲ್ಲಿ `ಮಂತ್ರಿ' ಹಾಗೂ `ಒರಾಯನ್' ಮಾಲ್‌ಗಳು ಈಗಾಗಲೇ ಇವೆ. ಇವುಗಳ ನಿರ್ಮಾಣ ಆದ ನಂತರ ಸಂಪಿಗೆ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಮಾರುಕಟ್ಟೆ ಪ್ರದೇಶದಲ್ಲಿ ಬಹುಮಹಡಿಗಳ ಮಾಲ್ ನಿರ್ಮಿಸಿದರೆ ಸಂಪಿಗೆ ರಸ್ತೆಯಲ್ಲಿ ವಾಹನ ದಟ್ಟಣೆ ಇನ್ನಷ್ಟು ಹೆಚ್ಚಲಿದೆ ಎಂಬ ಆತಂಕವನ್ನೂ ಅರ್ಜಿದಾರರು ವ್ಯಕ್ತಪಡಿಸಿದ್ದಾರೆ.
`ಮೇಯರ್ ಮೀಸಲಾತಿಪರಿಶೀಲನೆ'
ಬಿಬಿಎಂಪಿ ಮೇಯರ್ ಹುದ್ದೆಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗೆ ಮೀಸಲಿಟ್ಟು ಹೊರಡಿಸಿರುವ ಅಧಿಸೂಚನೆಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಸರ್ಕಾರ, ಹೈಕೋರ್ಟ್‌ಗೆ ಗುರುವಾರ ತಿಳಿಸಿತು. ಬಿಬಿಎಂಪಿ ಮೇಯರ್ ಹುದ್ದೆಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗೆ ಮೀಸಲಿಟ್ಟು ಫೆಬ್ರುವರಿ 8ರಂದು ಅಧಿಸೂಚನೆ ಹೊರಡಿಸಲಾಗಿದೆ.
ಇದನ್ನು ಲೋಕೇಶ ವಿ. ನಾಯಕ ಎಂಬುವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ನಡೆಸಿದರು.
ಅಧಿಸೂಚನೆಯನ್ನು ಹಿಂಪಡೆಯಲಾಗುತ್ತದೆಯೇ ಎಂಬ ಕುರಿತು ಮಾಹಿತಿ ನೀಡಲು ಸರ್ಕಾರದ ಪರ ವಕೀಲ ಎನ್.ಬಿ. ವಿಶ್ವನಾಥ್ ಅವರಿಗೆ ನಿರ್ದೇಶನ ನೀಡಿದ ಪೀಠ, ವಿಚಾರಣೆಯನ್ನು ಮುಂದೂಡಿತು. ಮೇಯರ್ ಸ್ಥಾನಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟ ಮಾಡದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಪೀಠ ಬದಲಾಯಿಸಿಲ್ಲ. ತಡೆಯಾಜ್ಞೆ ಅಬಾಧಿತವಾಗಿದೆ.
ಅತ್ಯಾಚಾರಿಗೆ ಏಳು ವರ್ಷ ಜೈಲು
ಬೆಂಗಳೂರು: ಹೆಣ್ಣುಮಗಳೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾಗಿದ್ದ ವ್ಯಕ್ತಿಯೊಬ್ಬನಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಹೈಕೋರ್ಟ್, `ಅತ್ಯಾಚಾರವು ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಮಾತ್ರವಲ್ಲ, ಅದು ಸಮಾಜದ ಸ್ವಾಸ್ಥ್ಯದ ಮೇಲೆ ನಡೆಯುವ ಹಲ್ಲೆಯೂ ಹೌದು' ಎಂದು ಗುರುವಾರ ಹೇಳಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ 9ನೇ ತರಗತಿಯ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾಗಿದ್ದ ಮೂಡುಬಿದಿರೆ ಸಮೀಪದ ಮಾರೂರಿನ ಅಬ್ದುಲ್ ಸಲೀಂ ಎಂಬುವನಿಗೆ ನ್ಯಾಯಮೂರ್ತಿ ಕೆ. ಶ್ರೀಧರ ರಾವ್ ನೇತೃತ್ವದ ವಿಭಾಗೀಯ ಪೀಠ ಶಿಕ್ಷೆ ವಿಧಿಸಿದೆ. ಸಲೀಂಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ಮೆಟ್ಟಿಲೇರಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.