ಬೆಂಗಳೂರು: ಮಾಜಿ ಸಚಿವ ಎಚ್. ಹಾಲಪ್ಪನವರ ವಿರುದ್ಧ ಇರುವ ಅತ್ಯಾಚಾರ ಪ್ರಕರಣದ ಆರೋಪ ಪಟ್ಟಿಯನ್ನು ಸಂಬಂಧಿತ ಕೋರ್ಟ್‌ಗೆ ಇದೇ 31ರ ಒಳಗೆ ಸಲ್ಲಿಸುವಂತೆ ಹೈಕೋರ್ಟ್ ಸಿಐಡಿ ಪೊಲೀಸರಿಗೆ ಮಂಗಳವಾರ ನಿರ್ದೇಶಿಸಿದೆ.
ಈ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುವ ಸಂಬಂಧ ರಾಜ್ಯ ಮಾನವ ಹಕ್ಕುಗಳ ಆಯೋಗ ಹೊರಡಿಸಿರುವ ಆದೇಶದ ರದ್ದತಿಗೆ ಕೋರಿ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
‘ಇದು ಅಪರೂಪದಲ್ಲಿ ಅಪರೂಪದ ಪ್ರಕರಣವೇನಲ್ಲ. ಸಿಬಿಐಗೆ ಇದನ್ನು ವಹಿಸಿಕೊಡುವಷ್ಟು ಗಂಭೀರ ಪ್ರಕರಣವಲ್ಲ’ ಎಂದು ಪೀಠ ಅಭಿಪ್ರಾಯ ಪಟ್ಟಿತು.
ಚಂದ್ರಾವತಿ, ಹಾಲಪ್ಪನವರ ಸ್ನೇಹಿತ ವೆಂಕಟೇಶ ಮೂರ್ತಿ ಅವರ ಪತ್ನಿಯಾಗಿದ್ದು, ತಮ್ಮ ಮೇಲೆ ಹಾಲಪ್ಪ ಅತ್ಯಾಚಾರ ಎಸಗಿರುವುದಾಗಿ ಅವರು ಆಯೋಗದ ಮುಂದೆ ದೂರಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಿ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್ 2010ರ ಮೇ 21ರಂದು ಆದೇಶಿಸಿದ್ದರು.
ಈ ಆದೇಶದ ರದ್ದತಿಗೆ ಸರ್ಕಾರ ಕೋರಿದೆ. ಸಿವಿಲ್ ಪ್ರಕ್ರಿಯಾ ಸಂಹಿತೆಯ ಅಡಿ ಆಯೋಗಕ್ಕೆ ಸಿವಿಲ್ ಕೋರ್ಟ್‌ನ ಅಧಿಕಾರ ನೀಡಲಾಗಿದೆ ನಿಜ. ಆದರೆ ಈ ಅಧಿಕಾರ ಬಳಸುವಾಗ ಆಯೋಗವು ಆರೋಪಿಗೆ ಸಮನ್ಸ್ ಜಾರಿಗೆ ಆದೇಶಿಸಿ ಅವರ ಹೇಳಿಕೆ ಪಡೆಯಬೇಕು.
ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಆದರೆ ಇದಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಆಯೋಗ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ ಆಯೋಗಕ್ಕೆ ಸಿಬಿಐ ತನಿಖೆಗೆ ವಹಿಸಲು ಶಿಫಾರಸು ಮಾಡಬಹುದೇ ವಿನಾ ನಿರ್ದೇಶನ ನೀಡುವ ಹಕ್ಕು ಇಲ್ಲ ಎಂದು ಅಡ್ವೊಕೇಟ್ ಜನರಲ್ ಅಶೋಕ ಹಾರ್ನಹಳ್ಳಿ ವಾದಿಸಿದರು.
ತನಿಖೆಯ ನೇತೃತ್ವ ವಹಿಸಿರುವ ಡಿಐಜಿ (ಸಿಐಡಿ) ಚರಣ ರೆಡ್ಡಿ ಅವರು ಮಂಗಳವಾರ ವಿಚಾರಣೆ ವೇಳೆ ಹಾಜರು ಇದ್ದರು. ತನಿಖೆಯು ಅಂತಿಮ ಹಂತದಲ್ಲಿದೆ. ಇನ್ನೆರಡು ವಾರಗಳಲ್ಲಿ ಆರೋಪ ಪಟ್ಟಿಯನ್ನೂ ತಯಾರು ಮಾಡಲಾಗುವುದು ಎಂದರು. ಈ ಹಿನ್ನೆಲೆಯಲ್ಲಿ ತಿಂಗಳಾಂತ್ಯದ ಗಡುವನ್ನು ಪೀಠ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.