ADVERTISEMENT

ಸಿಗದ ಸಂಪರ್ಕ: 108 ಆಂಬುಲೆನ್ಸ್ ಸೇವೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 19:59 IST
Last Updated 18 ಜೂನ್ 2013, 19:59 IST

ಬೆಂಗಳೂರು: ಆಂತರಿಕ ದೂರವಾಣಿ ಸಂಪರ್ಕ ಕಡಿತವಾಗಿ ರಾಜ್ಯದಾದ್ಯಂತ 108 ಆಂಬುಲೆನ್ಸ್‌ಗಳು ಸೋಮವಾರ ರಾತ್ರಿಯಿಂದಲೇ ಸೇವೆಯನ್ನು  ಸ್ಥಗಿತಗೊಳಿಸಿವೆ! ಇದರಿಂದ ಅತ್ತ ರೋಗಿಗಳ ಸಂಬಂಧಿಕರು ಪರದಾಡಿದರೆ ಇತ್ತ ಸಿಬ್ಬಂದಿಗಳು ಕೆಲಸವಿಲ್ಲದೇ ಸುಮ್ಮನೆ ಕೂರುವ ಪರಿಸ್ಥಿತಿ ಎದುರಾಯಿತು.

ರಾಜ್ಯದಲ್ಲಿ ಸುಮಾರು 517 ಆಂಬುಲೆನ್ಸ್‌ಗಳಿದ್ದು, ಅದರಲ್ಲಿ ಕಾರ್ಯ ನಿರ್ವಹಿಸುವ  ಚಾಲಕ ಮತ್ತು ನರ್ಸ್ ಸಿಬ್ಬಂದಿಗೆ ಏರ್‌ಟೆಲ್ ಪೋಸ್ಟ್‌ಪೇಯ್ಡ ಸಂಪರ್ಕವನ್ನು ಒದಗಿಸಲಾಗಿದೆ. ಆದರೆ ಏರ್‌ಟೆಲ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದರಿಂದ 108 ಸಹಾಯಕೇಂದ್ರದಲ್ಲಿ ತುರ್ತು ಕರೆಗಳನ್ನು ಸ್ವೀಕರಿಸಿದರೂ, ಆಂಬುಲೆನ್ಸ್‌ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮಾಹಿತಿ ರವಾನಿಸಲು ಸಾಧ್ಯವಾಗಲಿಲ್ಲ.

ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಆರೋಗ್ಯ ಕವಚ 108 ನೌಕರರ ಸಂಘದ ಅಧ್ಯಕ್ಷ ಶ್ರೀಧರ್, `ಸೋಮವಾರ ರಾತ್ರಿಯಿಂದಲೇ ಏರ್‌ಟೆಲ್ ಪೋಸ್ಟ್‌ಪೇಯ್ಡ ದೂರವಾಣಿಗಳು ಸ್ತಬ್ದಗೊಂಡವು. ಪ್ರತಿನಿತ್ಯ ರಾತ್ರಿ ಒಂದು ಆಂಬುಲೆನ್ಸ್ ಸಿಬ್ಬಂದಿಯು ಮೂರಕ್ಕಿಂತ ಹೆಚ್ಚು ತುರ್ತು ಪ್ರಕರಣಗಳನ್ನು ನಿಭಾಯಿಸುತ್ತಿದ್ದರು. ಆದರೆ ಒಂದು ಕರೆಯೂ ಸಿಬ್ಬಂದಿಯನ್ನು ತಲುಪಲಿಲ್ಲ' ಎಂದರು.

`ಹಳ್ಳಿಹಳ್ಳಿಗಳಲ್ಲಿ ಏರ್‌ಟೆಲ್ ನೆಟ್‌ವರ್ಕ್ ಸಮರ್ಪಕವಾಗಿ ದೊರೆಯುತ್ತದೆ. ಹಾಗಾಗಿ ಸಹಾಯ ಕೇಂದ್ರಗಳಿಂದ ಮಾಹಿತಿ ಪಡೆಯಲು ಆಂಬುಲೆನ್ಸ್‌ನಲ್ಲಿರುವ ಚಾಲಕ ಮತ್ತು ನರ್ಸ್ ಸಿಬ್ಬಂದಿಗೆ ಈ ಏರ್‌ಟೆಲ್ ಸಂಪರ್ಕವನ್ನೇ ವಿತರಿಸಲಾಗಿದೆ. ಇದರೊಂದಿಗೆ ವೊಡಾಫೋನ್ ಸಂಪರ್ಕವನ್ನು ಕೂಡ ನೀಡಲಾಗಿದೆ. ಆದರೆ ಇದು ಕೇವಲ ನಗರ ಕೇಂದ್ರಿತ ಪ್ರದೇಶಗಳಲ್ಲಿ ಮಾತ್ರ ಸಕ್ರಿಯಗೊಂಡಿದೆ. ಹಾಗಾಗಿ ಬಹುತೇಕ ಸಿಬ್ಬಂದಿ ಏರ್‌ಟೆಲ್ ಸಂಪರ್ಕವನ್ನೇ ಬಳಸುತ್ತಾರೆ' ಎಂದು ಮಾಹಿತಿ ನೀಡಿದರು.

ADVERTISEMENT

`ಏಕಾಏಕಿ ಏರ್‌ಟೆಲ್ ಸಂಪರ್ಕ ಸ್ತಬ್ದಗೊಳ್ಳಲು ಕಾರಣ ಈವರೆಗೆ ತಿಳಿದು ಬಂದಿಲ್ಲ. ಏರ್‌ಟೆಲ್ ಸಂಸ್ಥೆಗೆ ಬಿಲ್ ಪಾವತಿ ಮಾಡಿಲ್ಲ ಎಂಬ ಮಾತಿದೆ. ಆದರೆ ಸಿಬ್ಬಂದಿಗಳಿಗೆ ಮಾಹಿತಿ ನೀಡದೇ ಏರ್‌ಟೆಲ್ ಸಂಪರ್ಕಕ್ಕೆ ಪರ್ಯಾಯವಾಗಿ ವೊಡಾಫೋನ್ ಸಂಪರ್ಕಗಳನ್ನು ಬಳಕೆ ಮಾಡುವಂತೆ ಹೇಳಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ' ಎಂದು ಅಭಿಪ್ರಾಯಪಟ್ಟರು.

`ನೂರಾರು ತುರ್ತು ಕರೆಗಳು ಸಹಾಯ ಕೇಂದ್ರಗಳಲ್ಲಿ ದಾಖಲಾಗಿದ್ದರೂ ಕೂಡ ಆಂಬುಲೆನ್ಸ್ ಸಿಬ್ಬಂದಿಗಳಿಗೆ ಅದು ತಲುಪದೇ ತುರ್ತು ಪ್ರಕರಣಗಳನ್ನು ನಿರ್ವಹಿಸಲು ಆಗಿಲ್ಲ. ಇದರಿಂದ ಕೊನೆಗೂ ರೋಗಿ ಹಾಗೂ ರೋಗಿಯ ಸಂಬಂಧಿಕರು ತೊಂದರೆ ಅನುಭವಿಸಿದರು' ಎಂದರು.

ಈ ಪರಿಸ್ಥಿತಿ ಮಂಗಳವಾರವೂ ಮುಂದುವರಿದ್ದರೂ ಜಿವಿಕೆ ತುರ್ತು ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಪಾಟೀಲ್ ಅವರು ಈ  ಆರೋಪವನ್ನು ಸಂಪೂರ್ಣವಾಗಿ  ಅಲ್ಲಗೆಳೆದಿದ್ದಾರೆ. `ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ. ಇದು ಕೆಲವೇ ಮಂದಿ ಹಬ್ಬಿಸಿರುವ ಸುಳ್ಳು ಸುದ್ದಿ. ಏರ್‌ಟೆಲ್‌ಗೆ ಬಿಲ್ ಪಾವತಿ ಮಾಡಲಾಗಿದೆ' ಎಂದು ಸ್ಪಷ್ಟನೆ ನೀಡಿದರು.

`ಏರ್‌ಟೆಲ್ ಜತೆಯಲ್ಲಿ ವೊಡಾಫೋನ್  ದೂರವಾಣಿ ಸಂಪರ್ಕ ಇರುವುದರಿಂದ ತುರ್ತು ಪ್ರಕರಣಗಳನ್ನು ನಿಭಾಯಿಸಲು ಯಾವುದೇ ತೊಂದರೆಯಾಗಿಲ್ಲ. ಸೋಮವಾರ ರಾತ್ರಿಯಿಂದ ಈವರೆಗೆ ರಾಜ್ಯದ ನಾನಾ ಭಾಗಗಳಲ್ಲಿ ಸುಮಾರು 1,065 ಕರೆಗಳು ದಾಖಲಾಗಿದ್ದು, ಅದರಲ್ಲಿ 955 ತುರ್ತು ಪ್ರಕರಣಗಳಿಗೆ ಆಂಬುಲೆನ್ಸ್ ಸಿಬ್ಬಂದಿ ಸ್ಪಂದಿಸಿದ್ದಾರೆ' ಎಂದರು.

ಪ್ರತಿ ಜಿಲ್ಲೆಯಲ್ಲೂ 4ರಿಂದ 5 ಆಂಬುಲೆನ್ಸ್‌ಗಳಿವೆ. ಆದರೆ ದೂರವಾಣಿ ಸಂಪರ್ಕವೇ ಇಲ್ಲದಿರುವುದರಿಂದ ಯಾವುದೇ ತುರ್ತುಪ್ರಕರಣಗಳನ್ನು ಸ್ವೀಕರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಪರಿಚಯಸ್ಥ ರೋಗಿಗಳು ಮಾತ್ರ ವೈಯಕ್ತಿಕ ದೂರವಾಣಿಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ. ಮಂಗಳವಾರ ರಾತ್ರಿಯವರೆಗೆ ಸಹಾಯಕೇಂದ್ರದಿಂದ ಏರ್‌ಟೆಲ್ ಸಂಖ್ಯೆಯ ದೂರವಾಣಿಗೆ ಯಾವುದೇ ಕರೆ ಬಂದಿಲ್ಲ ಮತ್ತು  ಕರೆ ಮಾಡಲು ಸಾಧ್ಯವಾಗಿಲ್ಲ
-ನವೀನ್, 108 ಆಂಬುಲೆನ್ಸ್ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ವೊಡಾಫೋನ್ ದೂರವಾಣಿ ಚಾಲ್ತಿಯಲ್ಲಿರುವುದರಿಂದ ಕೆಲವು ತುರ್ತು ಕರೆಗಳನ್ನು ಸ್ವೀಕರಿಸಲಾಗಿದೆ. ಸೋಮವಾರ ರಾತ್ರಿ ಯಾವುದೇ ತುರ್ತು ಪ್ರಕರಣಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಸ್ವಂತ ಮೊಬೈಲ್‌ಗೆ ಕರೆ ಮಾಡಿದವರಿಗೆ ಮಾತ್ರ ನೆರವು ನೀಡಲಾಯಿತು.
-ಪ್ರವೀಣ್,  ಆಂಬುಲೆನ್ಸ್ ಸಿಬ್ಬಂದಿ, ವಿಕ್ಟೋರಿಯಾ

ಸೋಮವಾರ ರಾತ್ರಿ ಮಗಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹಾಗಾಗಿ 108ಕ್ಕೆ ಕರೆ ಮಾಡಿ ಮಾಡಿದ್ದೆವು. ಕರೆ ಸ್ವೀಕರಿಸಿದ್ದರೂ ಆಂಬುಲೆನ್ಸ್ ಮನೆಯತ್ತ ಬರಲಿಲ್ಲ. ಆ ನಂತರ ಖಾಸಗಿ ಆಂಬುಲೆನ್ಸ್ ಕರೆ ಮಾಡಿ ವಾಣಿವಿಲಾಸ ಆಸ್ಪತ್ರೆಗೆ ದಾಖಲು ಮಾಡಿದೆವು.
-ನಿಂಗಮ್ಮ, ಪೀಣ್ಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.