ADVERTISEMENT

ಸಿಡಿಲಬ್ಬರ: 6 ತಿಂಗಳಲ್ಲಿ 73 ಬಲಿ

ಕೆ.ಓಂಕಾರ ಮೂರ್ತಿ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ಸಿಡಿಲಬ್ಬರ: 6 ತಿಂಗಳಲ್ಲಿ 73 ಬಲಿ
ಸಿಡಿಲಬ್ಬರ: 6 ತಿಂಗಳಲ್ಲಿ 73 ಬಲಿ   

ಮೈಸೂರು: ರಾಜ್ಯದಲ್ಲಿ ಸಿಡಿಲಿನ ಅಬ್ಬರಕ್ಕೆ ಸಿಲುಕಿ ಆರು ತಿಂಗಳಲ್ಲಿ 73 ಜನ ಬಲಿಯಾಗಿದ್ದಾರೆ. ಇದರಲ್ಲಿ ಮೈಸೂರು ಜಿಲ್ಲೆಯಲ್ಲೇ ಹೆಚ್ಚು ಜೀವಹಾನಿ ಉಂಟಾಗಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ನಂದಿನಾಥಪುರದಲ್ಲಿ ಈಚೆಗೆ ಸಿಡಿಲಬ್ಬರಕ್ಕೆ ಸಿಲುಕಿ ಒಂದೇ ದಿನ ಮೃತಪಟ್ಟ 6 ಜನ ಸೇರಿದಂತೆ ಜಿಲ್ಲೆಯಲ್ಲಿ 2017–18ನೇ ಸಾಲಿನಲ್ಲಿ ಇದುವರೆಗೆ 12 ಸಾವು ಸಂಭವಿಸಿವೆ.

ರಾಜ್ಯದಲ್ಲಿ ಕಳೆದ 9 ವರ್ಷಗಳಲ್ಲಿ ಒಟ್ಟು 593 ಜನ ಬಲಿಯಾಗಿದ್ದು, ಸಿಡಿಲಿನಿಂದ ಉಂಟಾಗುವ ಜೀವ ಹಾನಿ ತಡೆಗಟ್ಟಲು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಆ್ಯಪ್‌ ಅಭಿವೃದ್ಧಿಪಡಿಸಲು ಮುಂದಾಗಿದೆ.

ADVERTISEMENT

‘ಸಿಡಿಲಿನ ಬಗ್ಗೆ ಅರ್ಧ ಗಂಟೆ ಮೊದಲೇ ಮುನ್ಸೂಚನೆ ನೀಡುವ ಆ್ಯಪ್‌ ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದೆ. 2–3 ತಿಂಗಳಲ್ಲಿ ಈ ಆ್ಯಪ್‌ ಲಭ್ಯವಾಗಲಿದ್ದು, ಜನಸಾಮಾನ್ಯರು ತಮ್ಮ ಮೊಬೈಲ್‌ಗಳಲ್ಲಿ ಅಳವಡಿಸಿಕೊಳ್ಳಬಹುದು. ಅದಕ್ಕಾಗಿ ಸಿಡಿಲಿನ ಮುನ್ಸೂಚನೆ ನೀಡುವ 12 ಸೆನ್ಸರ್‌ಗಳನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಕೇಂದ್ರದ ನಿರ್ದೇಶಕ ಜಿ.ಎಸ್‌.ಶ್ರೀನಿವಾಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೋಡಗಳು ಹೆಚ್ಚು ಹೊತ್ತು ದಟ್ಟವಾಗಿ ಕವಿಯುವುದರಿಂದ ಸಿಡಿಲಿನ ಆರ್ಭಟ ಜೋರಾಗಿದೆ. ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾಗೂ ಮರದ ಕೆಳಗೆ ನಿಂತಾಗ ಸಿಡಿಲು ಬಡಿದು ಮೃತಪಟ್ಟವರೇ ಅಧಿಕ. ಕಟ್ಟಡಗಳಿಗೆ ಅಪ್ಪಳಿಸಿರುವುದು ಕಡಿಮೆ’ ಎಂದರು.

ಕಂದಾಯ ಇಲಾಖೆಯ ವಿಕೋಪ ನಿರ್ವಹಣಾ ಘಟಕ ನೀಡಿರುವ 9 ವರ್ಷಗಳ ಅಂಕಿ ಅಂಶ ಗಮನಿಸಿದರೆ ಕಲಬುರ್ಗಿ, ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ ಜೀವಹಾನಿ ಸಂಭವಿಸಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಸಿಡಿಲಬ್ಬರಕ್ಕೆ ಮೂವರು ಬಲಿಯಾಗಿದ್ದಾರೆ.

‘ಸಿಡಿಲಿನಿಂದ ಮೃತಪಟ್ಟ ಕುಟುಂಬದವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ತಲಾ 4 ಲಕ್ಷ ನೀಡಲಾಗಿದೆ. ಜನರು ಮಾತ್ರವಲ್ಲ; ಸಾವಿರಾರು ಜಾನುವಾರುಗಳು ಸಿಡಿಲಿಗೆ ಬಲಿಯಾಗಿವೆ. ಅಪಾರ ಪ್ರಮಾಣದಲ್ಲಿ ಆಸ್ತಿ ನಷ್ಟವಾಗಿದೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.