ADVERTISEMENT

ಸಿಡಿಲು, ಮಳೆ ಆರ್ಭಟ: ಬೆಂಗಳೂರಿನಲ್ಲಿ ಇಬ್ಬರು ಸೇರಿ ರಾಜ್ಯದಲ್ಲಿ ಏಳು ಸಾವು

ಗೋಡೆ ಕುಸಿದು ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 20:02 IST
Last Updated 13 ಅಕ್ಟೋಬರ್ 2017, 20:02 IST
ಬೆಂಗಳೂರಿನ ಹೊಸಹಳ್ಳಿ ಕೆಳಸೇತುವೆಯಲ್ಲಿ ನೀರು ನಿಂತಿತ್ತು –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಹೊಸಹಳ್ಳಿ ಕೆಳಸೇತುವೆಯಲ್ಲಿ ನೀರು ನಿಂತಿತ್ತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜಧಾನಿಯಲ್ಲಿ ಶುಕ್ರವಾರ ಸಂಜೆಯಿಂದ ಸುರಿದ ಅಬ್ಬರದ ಮಳೆಗೆ ಇಬ್ಬರು ಮೃತಪಟ್ಟಿದ್ದು, ಮತ್ತೆ ಮೂವರು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮತ್ತು ಸಿಡಿಲಿಗೆ ಐವರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಹಾಗೂ ಅಥಣಿಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದರೆ, ಶಿವಮೊಗ್ಗ, ಅಫಜಲಪುರ ಹಾಗೂ ಬೀದರ್ ಸಮೀಪ ತಲಾ ಒಬ್ಬರು ನೀರುಪಾಲಾಗಿದ್ದಾರೆ.

ರಾಜಾಜಿನಗರ ಸಮೀಪದ ಕುರುಬರಹಳ್ಳಿಯ 18ನೇ ಕ್ರಾಸ್‌ನಲ್ಲಿ ಮನೆಗೆ ನೀರು ನುಗ್ಗಿ ಗೋಡೆ ಕುಸಿದು ಶಂಕರಪ್ಪ, ಕಮಲಮ್ಮ ದಂಪತಿ ಮೃತಪಟ್ಟಿದ್ದಾರೆ. ಲಗ್ಗೆರೆ ಸಮೀಪದ ರಾಜಕಾಲುವೆಯಲ್ಲಿ ನಿಂಗಮ್ಮ (57) ಹಾಗೂ ಅವರ ಮಗಳು ಪುಷ್ಪಾ (22) ಕೊಚ್ಚಿಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ₹ 5 ಲಕ್ಷ ಪರಿಹಾರವನ್ನು ಮೇಯರ್ ಆರ್.ಸಂಪತ್‌ರಾಜ್ ಘೋಷಿಸಿದ್ದಾರೆ.

ADVERTISEMENT

ಕುರುಬರಹಳ್ಳಿಯ ವರಸಿದ್ಧಿ ವಿನಾಯಕ ಹಾಗೂ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿಯ ರಸ್ತೆಯ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಅರ್ಚಕ ವಾಸುದೇವ ಭಟ್‌ ಮಳೆ ನೀರುಗಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದ (ಎಸ್‌ಡಿಆರ್‌ಎಫ್‌) 12 ಮಂದಿ, ಕೊಚ್ಚಿ ಹೋದವರಿಗಾಗಿ ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆಸಿದರು. ಈ ವೇಳೆ, ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ 15 ಸಿಲಿಂಡರ್‌ಗಳು ಪತ್ತೆಯಾದವು. ಇವು ಕಾಲುವೆಯಲ್ಲಿ ಸಿಲುಕಿಕೊಂಡಿದ್ದರಿಂದ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು.

ಸ್ಥಳಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಆರ್.ಸಂಪತ್‌ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ವಾಸುದೇವ ಭಟ್‌ ಅವರು ದೇವಸ್ಥಾನದಿಂದ, ಹಿಂಭಾಗದಲ್ಲಿರುವ ಮನೆಗೆ ಸಂಜೆ 5.30ಕ್ಕೆ ಹಿಂದಿರುಗುವಾಗ ಅವಘಡ ನಡೆದಿದೆ. ಪಕ್ಕದ ರಸ್ತೆ ಮೇಲೆ ಐದು ಅಡಿಯಷ್ಟು ನೀರು ಹರಿಯುತ್ತಿತ್ತು. ಅದರಲ್ಲಿ ನಡೆದುಕೊಂಡು ಹೋಗುವಾಗ ಮಳೆನೀರುಗಾಲುವೆಯಲ್ಲಿ ಕೊಚ್ಚಿಹೋಗಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ಮನೆಗೆ ನೀರು ನುಗ್ಗಿದ್ದರಿಂದ ಸುರಕ್ಷಿತ ಸ್ಥಳಕ್ಕೆ ಹೋಗಲು ಹೊರ ಬಂದಿದ್ದೆವು. ಅದೇ ಸಮಯದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ನೋಡನೋಡುತ್ತಿದ್ದಂತೆ ಪತ್ನಿ ಹಾಗೂ ಪುಷ್ಪಾ ನೀರಿನಲ್ಲಿ ಮುಳುಗಿದರು. ಕ್ಷಣಾರ್ಧದಲ್ಲಿ ಅವರು ಕಾಣೆಯಾದರು. ಮೊಮ್ಮಗುವನ್ನು ಮಾತ್ರ ರಕ್ಷಿಸಲು ನನ್ನಿಂದ ಸಾಧ್ಯವಾಯಿತು’ ಎಂದು ನಿಂಗಮ್ಮ ಅವರ ಪತಿ ಹೇಳಿದ್ದಾರೆ.

‘ಕಾಲುವೆಯ ಮುರಿದ ಸಿಮೆಂಟ್ ಸ್ಲ್ಯಾಬ್‌ಗಳನ್ನು ದುರಸ್ತಿ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅವಘಡಕ್ಕೆ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ’ ಎಂದು ಸ್ಥಳಕ್ಕೆ ಬಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.

ಬಸವೇಶ್ವರ ನಗರದ ಸಾಣೆಗುರುವನಹಳ್ಳಿಯಲ್ಲಿ ಒಂದು ಹಾಗೂ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮೂರು ಮನೆಗಳ ಗೋಡೆಗಳು ಕುಸಿದಿವೆ. ವೀರೇಶ್ ಚಿತ್ರಮಂದಿರದ ಎದುರಿನ ರಸ್ತೆ ಸಂಪೂರ್ಣವಾಗಿ ಜಲಾವೃತವಾಯಿತು. ನವರಂಗ್ ವೃತ್ತದಲ್ಲಿ ಸುಮಾರು 5 ಅಡಿಯಷ್ಟು ನೀರು ನಿಂತಿದ್ದರಿಂದ, ರಸ್ತೆ ಬದಿ ನಿಲ್ಲಿಸಿದ್ದ 50 ಕಾರು, ಬೈಕ್‌ಗಳು ಮುಳುಗಿದ್ದವು. ಈ ಭಾಗದಲ್ಲಿ ಓಡಾಟ ಸಂಪೂರ್ಣವಾಗಿ ಬಂದ್ ಆಗಿತ್ತು.

ಸಂಜೆಯಿಂದ ವಿದ್ಯುತ್‌ ಕಡಿತ: ‘ವಿದ್ಯುತ್‌ ಅವಘಡವನ್ನು ತಪ್ಪಿಸಲು ಸಂಜೆಯಿಂದ ವಿದ್ಯುತ್‌ ಸರಬರಾಜು ಕಡಿತಗೊಳಿಸಲಾಗಿತ್ತು. ನಗರದ ಅನೇಕ ಕಡೆ ಮರಗಳು ವಿದ್ಯುತ್‌ ತಂತಿಯ ಮೇಲೆ ಬಿದ್ದ ಬಗ್ಗೆ ದೂರುಗಳು ಬಂದಿವೆ. ತಡರಾತ್ರಿವರೆಗೂ ಪರಿಶೀಲನೆ ನಡೆಸಿದೆವು’ ಎಂದು ಬೆಸ್ಕಾಂ ಅಧಿಕಾರಿ ತಿಳಿಸಿದರು.

14 ಸೆಂ.ಮೀ. ಮಳೆ

ಸಂಜೆಯಿಂದ ಸತತ ಮೂರು ತಾಸು ವರ್ಷ ಧಾರೆಯಾಗಿದ್ದು, ರಾಜಾಜಿನಗರದಲ್ಲಿ 14 ಸೆಂ.ಮೀ ಮಳೆಯಾಗಿದೆ. ಕೊಟ್ಟಿಗೆಪಾಳ್ಯ 13.6 ಸೆಂ.ಮೀ, ರಾಜಮಹಲ್‌ ಗುಟ್ಟಹಳ್ಳಿ 12.2 ಸೆಂ.ಮೀ, ಹೆಗ್ಗನಹಳ್ಳಿ 9.4 ಸೆಂ.ಮೀ, ನಂದಿನಿ ಬಡಾವಣೆ 8.8 ಸೆಂ.ಮೀ ಮಳೆಯಾಗಿದೆ. ಶನಿವಾರವೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು.

ಪ್ರತ್ಯೇಕ ಘಟನೆ: ನೀರಿನಲ್ಲಿ ಕೊಚ್ಚಿ ಹೋದ ಮೂವರು
ಕಲಬುರ್ಗಿ/ಶಿವಮೊಗ್ಗ:
ಇಬ್ಬರು ಬಾಲಕರು ಸೇರಿದಂತೆ ಮೂವರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ಕಲಬುರ್ಗಿ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಯ ಹಲವೆಡೆ ಗುರುವಾರ ರಾತ್ರಿ ಭಾರಿ ಮಳೆಯಾಗಿದೆ.

ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕು ತೆಲ್ಲೂರನಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸಾಗರ ಧರಿಗೊಂಡ (16) ಶುಕ್ರವಾರ ಕೊಚ್ಚಿಕೊಂಡು ಹೋಗಿದ್ದಾನೆ. ಬಾಲಕನ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ.

ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಕ್ಯಾತನಾಳದಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ತೊಂದರೆಗೆ ಒಳಗಾಗಿದ್ದಾರೆ. ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ 24 ಗಂಟೆಗಳ ಅವಧಿಯಲ್ಲಿ ಗರಿಷ್ಠ 12.3 ಸೆಂ.ಮೀ. ಮಳೆಯಾಗಿದೆ.

ಶಿವಮೊಗ್ಗದಲ್ಲಿ ತಾಯಿ ಜತೆಗೆ ಬಟ್ಟೆ ತೊಳೆಯಲು ಶುಕ್ರವಾರ ಬೆಳಿಗ್ಗೆ ಬೊಮ್ಮನಕಟ್ಟೆಯ ತುಂಗಾ ನಾಲೆ ಬಳಿ ಹೋಗಿದ್ದ ಬಾಲಕನೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಆಶ್ರಯ ಬಡಾವಣೆ ನಿವಾಸಿ ಯೂಸೂಫ್ ಅವರ ಪುತ್ರ ಅಯಾನ್ (13) ನೀರುಪಾಲಾದ ಬಾಲಕ. ಮಳೆಯಿಂದಾಗಿ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.

ಯುವಕ ನೀರುಪಾಲು
ಬೀದರ್‌ ಜಿಲ್ಲೆಯ ಕಮಲನಗರ ಸಮೀಪದ ಹೆಬ್ಬಾಳ ಸೇತುವೆ ಮೇಲೆ ಹರಿಯುತ್ತಿರುವ ನೀರಿನ ರಭಸಕ್ಕೆ ಶುಕ್ರವಾರ ಸಂಜೆ ಹಂದಿಖೇರಾದ ಶಿವಾಜಿ ಚವಾಣ್‌ (27) ಕೊಚ್ಚಿಕೊಂಡು ಹೋಗಿದ್ದಾರೆ.

ಸಿಡಿಲು ಬಡಿದು ಮಹಿಳೆ ಸಾವು
ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳಿಯ ಕೋಡಿಹಳ್ಳಿಯ ಲಕ್ಷ್ಮಯ್ಯ (50) ಅವರು ಸಿಡಿಲು ಬಡಿದು ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ಅವರೆಕಾಯಿ ಬಿಡಿಸಲು ಲಕ್ಷ್ಮಯ್ಯ ಹೊಲಕ್ಕೆ ಹೋಗಿದ್ದಾರೆ. ಸಂಜೆ ಮಳೆ ಶುರುವಾದಾಗ ಹೊಲದ ಸಮೀಪದ ಆಂಜನೇಯ ಗುಡಿ ಪಕ್ಕದಲ್ಲಿನ ಮರದಡಿಗೆ ತೆರಳಿದ್ದಾರೆ. ಆಗ ಸಿಡಿಲು ಬಡಿದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉತ್ತಮ ಮಳೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ವರ್ಷಧಾರೆ ಚುರುಕುಗೊಂಡಿದೆ. ಚಿಕ್ಕಮಗಳೂರು ನಗರದಲ್ಲಿ ಸಂಜೆ 4.30ರ ಹೊತ್ತಿಗೆ ವರುಣನ ಆರ್ಭಟ ಶುರುವಾಯಿತು. ಸುಮಾರು ಅರ್ಧಗಂಟೆ ಮುಸಲಧಾರೆ ಸುರಿಯಿತು.

ದಸರಾ ವಸ್ತುಪ್ರದರ್ಶನ ಮೈದಾನ ಜಲಾವೃತ
ಮೈಸೂರು
ನಗರದಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ನಸುಕಿನವರೆಗೆ ಸುರಿದ ಧಾರಾಕಾರ ಮಳೆಗೆ ಪಡುವಾರಹಳ್ಳಿಯ 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ದಸರಾ ವಸ್ತುಪ್ರದರ್ಶನ ಮೈದಾನ ಜಲಾವೃತಗೊಂಡಿತ್ತು. ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಅರ್ಧ ಗಂಟೆ ಬಿರುಸಿನ ಮಳೆ ಸುರಿಯಿತು.

ಹಾಸನ ಜಿಲ್ಲೆಯಲ್ಲಿ ಶುಕ್ರವಾರ ಎರಡು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಚಿಕ್ಕಪಾಳ್ಯದಲ್ಲಿ ಮನೆಯೊಂದು ಕುಸಿದಿದೆ.

ಹಳಿಗಳ ಮೇಲೆ ನೀರು: ರೈಲು ಸಂಚಾರ ವಿಳಂಬ; ರದ್ದು

ಹುಬ್ಬಳ್ಳಿ: ಗುಂತಕಲ್‌ ವಿಭಾಗದ ಪಾಮಿಡಿ ಮತ್ತು ಕಲ್ಲೂರು ಮಧ್ಯೆ ಹಳಿಗಳ ಮೇಲೆ ನೀರು ಹರಿದಿದ್ದರಿಂದ ಕೆಲವು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಇನ್ನೂ ಕೆಲವು ರೈಲುಗಳು ಕೆಲವು ಗಂಟೆ ತಡವಾಗಿ ಸಂಚರಿಸಿವೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಶುಕ್ರವಾರದ ವಿಜಯವಾಡ– ಹುಬ್ಬಳ್ಳಿ ಪ್ಯಾಸೆಂಜರ್‌ ರೈಲು (ಸಂಖ್ಯೆ 56501) ಹಾಗೂ ಶನಿವಾರ ಹೊರಡಬೇಕಿದ್ದ ಹುಬ್ಬಳ್ಳಿ– ಬೆಂಗಳೂರು ಪ್ಯಾಸೆಂಜರ್‌ ರೈಲು (ಸಂಖ್ಯೆ 56516) ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಚಾರ ವಿಳಂಬ
ಶುಕ್ರವಾರ ಸಂಜೆ 6.20ಕ್ಕೆ ಹುಬ್ಬಳ್ಳಿಯಿಂದ ಮೈಸೂರಿಗೆ ಹೋಗಬೇಕಾಗಿದ್ದ ಹಂಪಿ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 16591) ಆರು ಗಂಟೆ ವಿಳಂಬವಾಗಿ, ಮಧ್ಯಾಹ್ನ 2.10ಕ್ಕೆ ಬಾಗಲಕೋಟೆಯಿಂದ ಮೈಸೂರಿಗೆ ಹೊರಡಬೇಕಿದ್ದ ಬಸವ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 17308) ರಾತ್ರಿ 8.10ಕ್ಕೆ ಹೊರಟಿತು ಎಂದು ವಿವರಿಸಿದರು.

ಗುಂಡಿಗೆ ಬಿದ್ದು ಬಾಲಕ ಸಾವು
ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ):
ಹಟ್ಟಿ ಕ್ಯಾಂಪ್‌ನ ಬಸವ ಸಮಿತಿ ಬಳಿ ಗುರುವಾರ ಗುಂಡಿಗೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ.
‌ಹಟ್ಟಿ ಕ್ಯಾಂಪ್‌ನ ಎನ್‌ಜಿಆರ್‌ ಕಾಲೊನಿಯ ಕಿರಣ್‌ ಕುಮಾರ್‌(9) ಮೃತಪಟ್ಟ ಬಾಲಕ.

‘ಸಂಜೆ ಟ್ಯೂಷನ್‌ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಗುಂಡಿ ಇರುವುದನ್ನು ಗಮನಿಸದೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.