ADVERTISEMENT

ಸಿದ್ದಗಂಗಾ ಸ್ವಾಮೀಜಿಗೆ 104ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 19:00 IST
Last Updated 1 ಏಪ್ರಿಲ್ 2011, 19:00 IST
ಸಿದ್ದಗಂಗಾ ಸ್ವಾಮೀಜಿಗೆ 104ರ ಸಂಭ್ರಮ
ಸಿದ್ದಗಂಗಾ ಸ್ವಾಮೀಜಿಗೆ 104ರ ಸಂಭ್ರಮ   

ತುಮಕೂರು: ತ್ರಿವಿಧ ದಾಸೋಹಿ, ಕಾಯಕ ಯೋಗಿ ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ 103 ವಸಂತಗಳನ್ನು ದಾಟಿ ಶುಕ್ರವಾರ 104ಕ್ಕೆ ಕಾಲಿಟ್ಟರು.
ಸ್ವಾಮೀಜಿ ಜನ್ಮದಿನದ ಹಿನ್ನೆಲೆಯಲ್ಲಿ ಮಠದಲ್ಲಿ ಸಂಭ್ರಮ ಮನೆ ಮಾಡಿತ್ತು. ಮಠದ ಪ್ರಾರ್ಥನಾ ಆವರಣದಲ್ಲಿ ಸ್ವಾಮೀಜಿ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಈ ಸಂಭ್ರಮ ಸವಿಯಲು ವಿವಿಧೆಡೆಯಿಂದ ಬಂದಿದ್ದ ಭಕ್ತರು ಸ್ವಾಮೀಜಿ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪುತ್ರ, ಸಂಸದ ಬಿ.ಎಸ್.ರಾಘವೇಂದ್ರ, ವಿಜಯೇಂದ್ರ, ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಮಠಕ್ಕೆ ಆಗಮಿಸಿ ಸ್ವಾಮೀಜಿಗೆ ಹುಟ್ಟು ಹಬ್ಬದ ಶುಭ ಹಾರೈಸಿ ಆಶೀರ್ವಾದ ಪಡೆದರು. ಅರ್ಧ ಗಂಟೆ ಕಾಲ ಸ್ವಾಮೀಜಿ ಜತೆ ಕಳೆದರು. ನಂತರ ಎಡೆಯೂರಿಗೆ ತೆರಳಿ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಸ್ವಾಮೀಜಿ ಸನ್ಯಾಶ್ರಮಕ್ಕೆ ಕಾಲಿಟ್ಟು 81 ವಸಂತಗಳು ಸಂದು ಶುಕ್ರವಾರ 82ರ ವಸಂತಕ್ಕೆ ಬಿತ್ತು. ಇದರೊಂದಿಗೆ ಅತಿ ದೀರ್ಘ ಕಾಲ ಮಠಾಧಿಪತಿಯಾಗಿ ಕಾರ್ಯನಿರ್ವಹಿಸಿದ ದಾಖಲೆ, ಕೀರ್ತಿಯೂ ಸಂದಿದೆ.

ಹುಟ್ಟು ಹಬ್ಬದ ಸಂಭ್ರಮದಲ್ಲೂ ಸ್ವಾಮೀಜಿ ತಮ್ಮ ಕಾಯಕ ಮಾತ್ರ ಮರೆಯಲಿಲ್ಲ. ಎಂದಿನಂತೆ ಬೆಳಗ್ಗಿನ ಜಾವ 2.30ಕ್ಕೆ ಎದ್ದು, ನಿತ್ಯದಂತೆ ತಮ್ಮ ಕಾಯಕ ಆರಂಬಿಸಿದರು. ಸ್ನಾನ, ಧ್ಯಾನ, ಓದಿನ ನಂತರ ಇಷ್ಟ ಲಿಂಗಕ್ಕೆ ಪೂಜೆ ಸಲ್ಲಿಸಿದರು. ಮುಂಜಾನೆ 5.30ರಲ್ಲಿ ಹಳೆ ಮಠದಿಂದ ಸ್ವಾಮೀಜಿ ಅವರನ್ನು ಪ್ರಾರ್ಥನಾ ಸ್ಥಳಕ್ಕೆ ಪೂರ್ಣ ಕುಂಭ ಸ್ವಾಗತ ನೀಡಿ ಕರೆ ತರಲಾಯಿತು.

ADVERTISEMENT

ನಂತರ ನಾಡಿನ ಹದಿನೇಳು ವೀರಶೈವ ಮಠಗಳ ಮಠಾಧೀಶರು, ಸಿದ್ಧಲಿಂಗ ಸ್ವಾಮೀಜಿ, ಬೇಲಿ ಮಠದ ಸ್ವಾಮೀಜಿ ನೇತೃತ್ವದಲ್ಲಿ ಪಾದ ಪೂಜೆ ನೆರವೇರಿಸಿದರು. ಧಾರ್ಮಿಕ ಪೂಜಾ ಕಾರ್ಯಕ್ರಮದ ನಂತರ ಭಕ್ತರು ಸ್ವಾಮೀಜಿ ಆಶೀರ್ವಾದ ಪಡೆದರು.


ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಸಿ.ಸಿ.ಪಾಟೀಲ್, ಶಾಸಕರಾದ ಎಸ್.ಶಿವಣ್ಣ, ಬಿ.ಸುರೇಶ್‌ಗೌಡ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಸೇರಿದಂತೆ ನೂರಾರು ಪ್ರಮುಖರು ಪಾಲ್ಗೊಂಡಿದ್ದರು.

24ರಂದು ಗುರುವಂದನೆ: 104 ವಸಂತಕ್ಕೆ ಕಾಲಿಟ್ಟ ಸ್ವಾಮೀಜಿಗೆ ಏ. 24ರಂದು ಸಿದ್ದಗಂಗಾ ಮಠದಲ್ಲಿ ಬೃಹತ್ ಮಟ್ಟದಲ್ಲಿ ಆಯೋಜಿಸಿರುವ ಗುರುವಂದನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸೇರಿದಂತೆ ನಾಡಿನ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.