ADVERTISEMENT

ಸಿದ್ದರಾಮಯ್ಯ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 31 ಮೇ 2012, 19:00 IST
Last Updated 31 ಮೇ 2012, 19:00 IST
ಸಿದ್ದರಾಮಯ್ಯ ರಾಜೀನಾಮೆ
ಸಿದ್ದರಾಮಯ್ಯ ರಾಜೀನಾಮೆ   

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡದಿರುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದಿಂದ ತೀವ್ರ ಅಸಮಧಾನಗೊಂಡಿರುವ ಸಿದ್ದರಾಮಯ್ಯ ಅವರು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬಳಿಕ ಬೆಂಬಲಿಗರ ಸಭೆ ನಡೆಸಿದ ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರ ಕೈಗೊಂಡರು. ತಕ್ಷಣವೇ ಫ್ಯಾಕ್ಸ್ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಒಂದು ಸಾಲಿನ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಅದನ್ನು ವಿಧಾನಸಭೆಯ ಸ್ಪೀಕರ್ ಅವರಿಗೆ ಕಳುಹಿಸುವಂತೆಯೂ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

ರಾಜೀನಾಮೆಗೆ ಸಂಬಂಧಿಸಿದಂತೆ ಮೂವರು ಮುಖಂಡರಿಗೂ ಖುದ್ದಾಗಿ ಪತ್ರವನ್ನೂ ರವಾನಿಸಿದ್ದಾರೆ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಬೇಸತ್ತು ತಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರದಲ್ಲಿ ಹೇಳಿದ್ದಾರೆ. ಎಲ್ಲಾ ಪ್ರಮುಖ ಸಂದರ್ಭಗಳಲ್ಲಿ ತನ್ನನ್ನು ಕಡೆಗಣಿಸಲಾಗುತ್ತಿದೆ. ಸೂಕ್ತ ಗೌರವವನ್ನೂ ನೀಡುತ್ತಿಲ್ಲ. ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಇದೇ ಅನುಭವ ಆಗಿದೆ ಎಂಬುದಾಗಿ ವಿವರಿಸಿದ್ದಾರೆ ಎನ್ನಲಾಗಿದೆ.
            
ತಮ್ಮ ಬೆಂಬಲಿಗರಾದ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹಾಗೂ ಬೈರತಿ ಸುರೇಶ್ ಅವರಿಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಕಾಂಗ್ರಸ್ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಈ ಪೈಕಿ ಇಬ್ರಾಹಿಂ ಅವರಿಗೆ ಟಿಕೆಟ್ ನೀಡುವ ಸ್ಪಷ್ಟ ಭರವಸೆಯನ್ನು ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ನೀಡಿತ್ತು. ಆದರೆ, ಅವರು ದೆಹಲಿಯಿಂದ ವಾಪಸಾದ ಬಳಿಕ ನಿರ್ಧಾರ ಬದಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಿದ್ದರಾಮಯ್ಯ ಕೋಪಗೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುತ್ತಿದಂತೆಯೇ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು. ಇಬ್ರಾಹಿಂ, ಶಾಸಕರಾದ ಡಾ. ಎಚ್.ಸಿ. ಮಹದೇವಪ್ಪ, ಮಂಜುನಾಥ್, ಪಕ್ಷೇತರ ಶಾಸಕ ಪಿ.ಎಂ ನರೇಂದ್ರಸ್ವಾಮಿ, ಮುಖಂಡ ವಿ.ಎಸ್.ಉಗ್ರಪ್ಪ ಮತ್ತಿತರರು ಸಭೆಯಲ್ಲಿ  ಪಾಲ್ಗೊಂಡಿದ್ದರು.

`ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದ ಹೈಕಮಾಂಡ್ ಕೆಲವರ ಒತ್ತಡಕ್ಕೆ ಮಣಿದು ಅದನ್ನು ಈಡೇರಿಸಿಲ್ಲ. ಈ ಮೂಲಕ ತನ್ನನ್ನು ಅವಮಾನಿಸಿದೆ~ ಎಂದು ಸಿದ್ದರಾಮಯ್ಯ ತಮ್ಮ ಬೆಂಬಲಿಗರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಕೆಲ ಹೊತ್ತಿನ ಚರ್ಚೆಯ ಬಳಿಕ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಫ್ಯಾಕ್ಸ್ ಮೂಲಕ ಸೋನಿಯಾ ಅವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಅಲ್ಲದೇ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಗೈರು ಹಾಜರಾಗಲು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.

ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಸುರೇಶ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಿದ್ದರಾಮಯ್ಯ ಬಣ ಯೋಚಿಸಿದೆ. ಜೆಡಿಎಸ್ ತನ್ನ ಅಭ್ಯರ್ಥಿಯ ಗೆಲುವಿನ ಬಳಿಕ ಉಳಿಯುವ ಹೆಚ್ಚುವರಿ ಮತಗಳನ್ನು ಸುರೇಶ್ ಅವರಿಗೆ ನೀಡುವ ಭರವಸೆ ನೀಡಿದೆ. ಐವರು ಪಕ್ಷೇತರ ಶಾಸಕರ ಮತಗಳನ್ನೂ ಪಡೆಯುವ ಪ್ರಯತ್ನಕ್ಕೆ ಕೈಹಾಕಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.