ADVERTISEMENT

ಸಿಬಿಎಸ್‌ಇ ಪರೀಕ್ಷೆಗಳು ಮಾರ್ಚ್ 1ರಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 20:10 IST
Last Updated 23 ಜನವರಿ 2011, 20:10 IST

ಬೆಂಗಳೂರು: ಈ ವರ್ಷದ ಸಿಬಿಎಸ್‌ಇ ಪರೀಕ್ಷೆ ಮಾರ್ಚ್ 1ರಿಂದ ಆರಂಭವಾಗಲಿದ್ದು, ಸಿಬಿಎಸ್‌ಇ ಮಂಡಳಿಯಿಂದ ಹೊರಬಂದು ಸ್ವತಂತ್ರವಾಗಿ ಪರೀಕ್ಷೆ ನಡೆಸಲಿರುವ ಶಾಲೆಗಳ ಮೇಲೆ ಸಾಕಷ್ಟು ಹೊರೆ ಬೀಳಲಿದೆ.  ಈ ಸಲಯಿಂದ ಶಾಲೆಗಳಿಗೆ ಆಯ್ಕೆ ಅಧಿಕಾರವಿದ್ದು, ಶಾಲೆಗಳು ಸ್ವತಂತ್ರವಾಗಿ ಪರೀಕ್ಷೆ ನಡೆಸಬಹುದು ಅಥವಾ ಮಂಡಳಿ ನಡೆಸುವ ಪರೀಕ್ಷೆಗಳನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಬಹುದಾಗಿದೆ.

 ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು, ಪರೀಕ್ಷೆ ದಿನಾಂಕ ನಿಗದಿ ಮತ್ತು ಉತ್ತೀರ್ಣರಾದವರಿಗೆ ಪ್ರಮಾಣಪತ್ರ ನೀಡುವ ಜವಾಬ್ದಾರಿಯನ್ನು ಸಿಬಿಎಸ್‌ಇ ಮಂಡಳಿ ನಿರ್ವಹಿಸಲಿದೆ. ಪರೀಕ್ಷೆಗಳನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ಶಾಲೆಗಳಿಗೆ ಬಿಡಲಾಗುತ್ತದೆ. ಸಿಬಿಎಸ್‌ಇ ಮಂಡಳಿ ಹಸ್ತಕ್ಷೇಪ ಮಾಡುವುದಿಲ್ಲ.

ಶಾಲೆಗಳು ಮಂಡಳಿ ಸಿದ್ಧಪಡಿಸಿದ ಮಾದರಿ ಪ್ರಶ್ನಾವಳಿಯ ಆಧಾರದ ಮೇಲೆ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಬೇಕು. ಆ ಸ್ವಾತಂತ್ರ್ಯವನ್ನು ಶಾಲೆಗಳಿಗೆ ನೀಡಲಾಗಿದೆ. ಸಿಬಿಎಸ್‌ಇ ಸಿದ್ಧಪಡಿಸಿದ ನೀಲನಕ್ಷೆಯ ಆಧಾರದಲ್ಲಿ ಶಾಲೆಗಳು ತಮ್ಮದೇ ಆದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಬಹುದು. ಆದರೆ ಹಾಗೆ ಸಿದ್ಧಪಡಿಸಿದ ಒಂದು ವಾರದಲ್ಲಿ ಆ ಪ್ರಶ್ನೆಪತ್ರಿಕೆಯ ಪ್ರತಿಯೊಂದನ್ನು ಸಿಬಿಎಸ್‌ಇ ಮಂಡಳಿಯ ಪರಿಶೀಲನೆಗೆ ಕಳುಹಿಸಬೇಕು.

 ಮಂಡಳಿ ಸಿದ್ಧಪಡಿಸಿರುವ ರೀತಿಯಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಆಯಾ ಶಾಲೆಗಳ ಶಿಕ್ಷಕರೇ ಕೈಗೊಳ್ಳಬಹುದು. ಆದರೆ, ಶಾಲೆಗಳು ಉತ್ತರ ಪತ್ರಿಕೆಯನ್ನು ತಿದ್ದುವಾಗ ಅನುಸರಿಸುವ ಮಾನದಂಡಗಳ ಬಗ್ಗೆ ಮಂಡಳಿ ಯಾವುದೇ ಹಂತದಲ್ಲಿ ತನ್ನ ಅಧಿಕಾರಿಗಳ ಅಥವಾ ತನ್ನಿಂದ ನಾಮನಿರ್ದೇಶನಗೊಂಡ ಸದಸ್ಯರಿಂದ ಪರಿಶೀಲನೆ ನಡೆಸಬಹುದು.

ಹತ್ತನೆಯ ತರಗತಿಯ ಮಕ್ಕಳಿಗೆ ಮಾರ್ಚ್ ಎರಡನೇ ವಾರದ ನಂತರ ಪರೀಕ್ಷೆಗಳನ್ನು ನಡೆಸಬೇಕು ಎಂದು ಸಿಬಿಎಸ್‌ಇ ಸೂಚಿಸಿದೆ. ಇಂಗ್ಲಿಷ್ (ಸಂವಹನ ಮತ್ತು ಸಾಹಿತ್ಯ) ಮತ್ತು ವಿಜ್ಞಾನ ಪರೀಕ್ಷೆಗಳನ್ನು ಮಾರ್ಚ್ 23ರ ನಂತರ ನಡೆಸಬೇಕು ಎಂದು ಸಿಬಿಎಸ್‌ಇ ಶಾಲೆಗಳಿಗೆ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.