ADVERTISEMENT

ಸಿಬಿಐನಿಂದ ಲಾರಿ ಚಾಲಕರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ಬಳ್ಳಾರಿ: ಗಣಿ- ಗಡಿ ಒತ್ತುವರಿ ಮತ್ತು ಅಕ್ರಮ ಅದಿರು ಸಾಗಣೆ ಆರೋಪ ಎದುರಿಸುತ್ತಿರುವ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ವಿರುದ್ಧ ತನಿಖೆ ನಡೆಸುತ್ತಿರುವ ಸಿಬಿಐ,ಶನಿವಾರ ಆಂಧ್ರದ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಕೆಲವು ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಅದಿರು ಸಾಗಿಸಿದ್ದ ಲಾರಿ ಚಾಲಕರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿತು.

ಆಂಧ್ರದ ಮಲಪನಗುಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಸಂಡೂರು ತಾಲ್ಲೂಕಿನ ತುಮಟಿ ಗ್ರಾಮದ ಬಳಿಯ ತುಮಟಿ ನಾರಾಯಣರೆಡ್ಡಿ (ಟಿಎನ್‌ಆರ್) ಮೈನಿಂಗ್ ಕಂಪೆನಿ, ಹಿಂದ್ ಟ್ರೇಡರ್ಸ್ (ಎಚ್‌ಟಿ) ಹಾಗೂ ಮೆಹಬೂಬ್   ಟ್ರಾನ್ಸ್‌ಪೋರ್ಟ್ಸ್‌ನ (ಎಂಬಿಟಿ) ಗಣಿಗಳಿಗೆ ತೆರಳಿದ ಸಿಬಿಐ ಅಧಿಕಾರಿಗಳು, ಈ ಹಿಂದೆ ಅಲ್ಲಿಂದ ಅದಿರು ಸಾಗಣೆ ಮಾಡಿದ್ದ ಕೆಲವು ಲಾರಿ ಚಾಲಕರು ಹಾಗೂ ಮಾಲೀಕರಿಂದ ಸಾಕಷ್ಟು ಮಾಹಿತಿ ಕಲೆಹಾಕಿದರು.

ಆಂಧ್ರದ ಸಿದ್ದಾಪುರ ಗ್ರಾಮದ ಬಳಿ ಅದಿರು ಸ್ಟಾಕ್ ಯಾರ್ಡ್ ಹೊಂದಿರುವ ಓಎಂಸಿ, ಈ ಲಾರಿ ಚಾಲಕರು ಮತ್ತು ಮಾಲೀಕರ ನೆರವಿನೊಂದಿಗೆ ಅದಿರನ್ನು ಸಾಗಿಸಿದ್ದು, ಲಾರಿಗಳ ಚಾಲಕರು ಕರ್ನಾಟಕಕ್ಕೆ ಸೇರಿರುವ ಗಣಿಗಳಿಂದ ಅದಿರನ್ನು ಅದೇ ಸ್ಟಾಕ್‌ಯಾರ್ಡ್‌ಗೆ ಸಾಗಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ನಂತರ ಅವರನ್ನು ಸಿದ್ದಾಪುರ ತಾಂಡಾದ ಬಳಿಯ ಓಎಂಸಿ ಅದಿರು ಸ್ಟಾಕ್‌ಯಾರ್ಡ್‌ಗೆ ಕರೆದೊಯ್ದ ಸಿಬಿಐ ತಂಡ, ಅದಿರನ್ನು ಸಾಗಿಸಿದ ಸ್ಥಳ ಅದೇ ಎನ್ನುವುದನ್ನೂ ಖಚಿತಪಡಿಸಿಕೊಂಡಿದೆ.

ಸಿಬಿಐ ಇನ್ಸ್‌ಪೆಕ್ಟರ್ ಸುಧಾಕರ್, ಸಬ್ ಇನ್ಸ್‌ಪೆಕ್ಟರ್ ಸೀತಾರಾಂ ಸೇರಿದಂತೆ ಒಟ್ಟು ಎಂಟು ಜನರಿದ್ದ ಸಿಬಿಐ ತಂಡ, ಗಣಿ ಮಾಲೀಕರಾದ ಹಾವಿನಾಳ್ ಮಲ್ಲಿಕಾರ್ಜುನ್, ಪ್ರಶಾಂತ್, ಟಪಾಲ್ ಗಣೇಶ್, ಟಪಾಲ್ ಏಕಾಂಬರಂ ಹಾಗೂ ಎಂಬಿಟಿಯ ವ್ಯವಸ್ಥಾಪಕರಿಂದ ವಿವರ ಪಡೆದರು. ಸಿಬಿಐ ಸೆಪ್ಟೆಂಬರ್ ಅಂತ್ಯಕ್ಕೆ ತನಿಖಾ ವರದಿ ಸಲ್ಲಿಸುವ ಸಾಧ್ಯತೆ ಇದ್ದು, ಅಂತಿಮ ಹಂತದ ವಿಚಾರಣೆಯನ್ನು ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.