ಚಿತ್ರದುರ್ಗ: ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಮಠಾಧೀಶರ ಆಶೀರ್ವಾದ ಪಡೆಯಲು ಮಠ ಮಾನ್ಯಗಳಿಗೆ ಎಡತಾಕುವುದು ಸಾಮಾನ್ಯ. ಆಶೀರ್ವಾದ ಪಡೆಯಲು ಬಂದು ಸ್ವಾಮೀಜಿ ಜತೆ ಫೋಟೊ ಕ್ಲಿಕ್ಕಿಸಿಕೊಂಡು ಅದನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ‘ಸ್ವಾಮೀಜಿ ನಮ್ಮ ಪರ ಇದ್ದಾರೆ’ ಎಂದು ಬಿಂಬಿಸಿಕೊಳ್ಳುವುದುರಾಜಕಾರಣಿಗಳ ತಂತ್ರ.
ರಾಜಕಾರಣಿಗಳ ಇಂತಹ ತಂತ್ರಕ್ಕೆ ಸಿರಿಗೆರೆ ಮಠದ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನಿರ್ಬಂಧ ಹೇರಿದ್ದಾರೆ.
‘ಯಾವ ಪಕ್ಷದ ಅಭ್ಯರ್ಥಿಗಳೇ ಆಗಲಿ. ಸಾಮಾನ್ಯ ಭಕ್ತರಂತೆ ಬಂದು ಆಶೀರ್ವಾದ ಪಡೆಯಲು ನನ್ನ ಅಭ್ಯಂತರವಿಲ್ಲ. ಆದರೆ, ಈ ಸಂದರ್ಭದಲ್ಲಿ ಫೋಟೊ ತೆಗೆಯುವುದು ಅಥವಾ ತೆಗೆದ ಫೋಟೊಗಳನ್ನು ಪತ್ರಿಕೆಗಳಲ್ಲಿ ಹಾಕಿಸುವುದು, ಸಾಮಾಜಿಕ ಜಾಲ ತಾಣಗಳಲ್ಲಿ ಬಿತ್ತರಿಸುವುದು, ಸ್ವಾಮೀಜಿ ನಮ್ಮ ಪರ ಇದ್ದಾರೆ ಎನ್ನುವ ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳುವುದನ್ನು ಮಾಡಬಾರದು’ ಎಂದು ಚುನಾವಣೆಯ ಸಂದರ್ಭದಲ್ಲಿ ಮಠಕ್ಕೆ ಬರುವ ರಾಜಕಾರಣಿಗಳಿಗೆ ಸ್ವಾಮೀಜಿ ತಾಕೀತು ಮಾಡಿದ್ದಾರೆ.
ಹೀಗೆ ಮಠದ ಒಳಗೆ ನೀತಿ ಸಂಹಿತೆ ಜಾರಿ ಮಾಡುವ ಮೂಲಕ ಸಿರಿಗೆರೆ ಸ್ವಾಮೀಜಿ ರಾಜಕಾರಣಿಗಳಿಗೆ ಹೊಸ ನೀತಿ ಪಾಠ ಬೋಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.