ADVERTISEMENT

ಸುಗಮ ಸಂಗೀತ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2011, 19:30 IST
Last Updated 26 ಮಾರ್ಚ್ 2011, 19:30 IST
ಸುಗಮ ಸಂಗೀತ ಸಮ್ಮೇಳನಕ್ಕೆ ಅದ್ದೂರಿ ಚಾಲನೆ
ಸುಗಮ ಸಂಗೀತ ಸಮ್ಮೇಳನಕ್ಕೆ ಅದ್ದೂರಿ ಚಾಲನೆ   

ಮೈಸೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಮೈಸೂರು ಜಿಲ್ಲಾಡಳಿತ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಎರಡು ದಿನ ಆಯೋಜಿಸಿರುವ ಎಂಟನೆಯ ಸುಗಮ ಸಂಗೀತ ಸಮ್ಮೇಳನ (ಗೀತೋತ್ಸವ-2011) ಕ್ಕೆ ಶನಿವಾರ ವರ್ಣರಂಜಿತ ಚಾಲನೆ ದೊರೆಕಿತು.

ಸಮ್ಮೇಳನದ ಅಧ್ಯಕ್ಷೆ, ಸಂತ ಶಿಶುನಾಳ ಷರೀಫ್ ಪ್ರಶಸ್ತಿ ಪುರಸ್ಕೃತ ಶ್ಯಾಮಲಾ ಜಾಗೀರ್‌ದಾರ್ ಅವರನ್ನು ಕನ್ನಡ ಧ್ವಜಗಳಿಂದ  ಅಲಂಕಾರ ಮಾಡಿದ್ದ ಸಾರೋಟಿನಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಸಮ್ಮೇಳನದ ವೇದಿಕೆಗೆ ಕರೆತರಲಾಯಿತು. ವಿವಿಧ ಜಾನಪದ ಕಲಾತಂಡಗಳು, ಸಾಹಿತಿಗಳು, ಹಿರಿಯ ಕಿರಿಯ ಗಾಯಕ, ಗಾಯಕಿಯರು ಮೆರವಣಿಗೆಯಲ್ಲಿ ಸಾಗಿ ಸಾಂಸ್ಕೃತಿಕ ನಗರಿಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದರು.

ಸಮ್ಮೇಳನಕ್ಕೆ ನಾಡೋಜ ಪ್ರೊ. ಚನ್ನವೀರ ಕಣವಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯವಾಗಿ ತರಬೇತಿ ಹೊಂದಿದ 50ಕ್ಕೂ  ಹೆಚ್ಚು ಕಲಾವಿದರು ಏಕಧ್ವನಿಯಲ್ಲಿ ನಾಡಗೀತೆಯನ್ನು ಪ್ರಸ್ತುತ ಪಡಿಸಿ, ಕೇಳುಗರಿಂದ ಚಪ್ಪಾಳೆ ಗಿಟ್ಟಿಸಿದರು.

ADVERTISEMENT

ಈ ಸಂದರ್ಭದಲ್ಲಿ ಸಾಹಿತಿ ಚನ್ನವೀರ ಕಣವಿ ಮಾತನಾಡಿ ‘ಸುಗಮ ಸಂಗೀತವು ಕನ್ನಡ ಭಾವಗೀತೆಯ ಆಧುನಿಕ ಆವಿಷ್ಕಾರ. ಇದು  ಕನ್ನಡ ಕಾವ್ಯಕ್ಕೆ ವಿಶಿಷ್ಟ ಸಂಗೀತವಾಗಿ, ಕಾವ್ಯದ ಅನಿವಾರ್ಯ ಭಾಗವಾಗಿ ಬೆಳೆದು ಬಂದಿದೆ. ಕಾವ್ಯ ಓದುವ ಹಾಗೂ ಗ್ರಹಿಸುವ ಕ್ರಮ ಗಳು ಆಯಾ ಕಾಲದಲ್ಲಿ ಬೇರೆ ಬೇರೆಯಾಗಿ ನಡೆದು ಬಂದಿವೆ. ಬಂಡಾಯ ಚಳವಳಿ ಕಾವ್ಯವನ್ನು ಜನ ಸಮುದಾಯದ ಬಳಿ ಕರೆದುಕೊಂಡು ಹೋಗಲು ಈ ಗೇಯತೆ ಸಹಾಯಕವಾಯಿತು. ಆದರೆ ಕಾವ್ಯವು ಪ್ರಧಾನವಾಗಿರಬೇಕೆ ಹೊರತು ಸಂಗೀತವೇ ಪ್ರಧಾನ ಆಗಿರಬಾರದು’ ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷೆ ಶ್ಯಾಮಲಾ ಜಾಗೀರ್‌ದಾರ್ ಮಾತನಾಡಿ, ‘ಜನಪದರ ಮನಗೆದ್ದಿರುವ ಸುಗಮ ಸಂಗೀತವು ವಿಕಾಸವಾಗುತ್ತಿದೆ.  ಆದರೆ, ಕ್ಯಾಸೆಟ್‌ನಿಂದ ಸುಗಮ ಸಂಗೀತ ಕಲಿಕೆ ಕ್ಷೇಮವಾದುದಲ್ಲ. ಕೇಂದ್ರ ಸರ್ಕಾರವು ಸುಗಮ ಸಂಗೀತ ಕಲಾವಿದರನ್ನು ಗುರುತಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿದರು. ವೈದ್ಯಕೀಯ ಶಿಕ್ಷಣ ಸಚಿವ  ಎಸ್.ಎ.ರಾಮದಾಸ್ ‘ಗೀತ ಸಂಗಮ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ,  ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.