ADVERTISEMENT

‘ಸುಮ್ಮನೆ ಕೂರಲು ಇದು ಷಂಡರ ಸಮಾಜವಲ್ಲ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 19:43 IST
Last Updated 10 ಜುಲೈ 2017, 19:43 IST
‘ಸುಮ್ಮನೆ ಕೂರಲು ಇದು ಷಂಡರ ಸಮಾಜವಲ್ಲ’
‘ಸುಮ್ಮನೆ ಕೂರಲು ಇದು ಷಂಡರ ಸಮಾಜವಲ್ಲ’   

ಬೆಂಗಳೂರು: ಗೃಹಖಾತೆಯನ್ನೂ  ಹೊಂದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತದೆ. ಮೊದಲು ಅವರು ಆ ಕೆಲಸ ಮಾಡಲಿ’ ಎಂದು  ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.

‘ಬಿಜೆಪಿಯವರು ಸುಮ್ಮನಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತದೆ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕೊಲೆಗಳಾಗುತ್ತಿರುವುದನ್ನು ನೋಡಿ ಸುಮ್ಮನೆ ಕೂರಲು ಇದು ಷಂಡರ ಸಮಾಜವಲ್ಲ. ಇನ್ನೂ ಎಷ್ಟು ಕೊಲೆಯಾಗುವವರೆಗೆ ಸುಮ್ಮನಿರಬೇಕು ಎನ್ನುವುದನ್ನು ಅವರು ಹೇಳಲಿ’ ಎಂದು ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಆಗ್ರಹಿಸಿದರು.

‘ಹಿಂದು–ಮುಸ್ಲಿಮರ ಮಧ್ಯೆ ಗಲಭೆ ಹುಟ್ಟಿಸಿದರೆ ಕಾಂಗ್ರೆಸ್‌ಗೆ ಮತ ಬೀಳುತ್ತದೆ ಎಂಬ ಭಾವನೆ ಸಿದ್ದರಾಮಯ್ಯ ಅವರಲ್ಲಿದೆ. ಗಲಭೆಯ ದುರ್ಲಾಭ ಪಡೆಯಲು ಸರ್ಕಾರ ಯತ್ನಿಸುತ್ತಿದೆ. ಯಾವುದೇ ಧರ್ಮದವರು ಕೊಲೆಯಾದರೂ ಅಪರಾಧಿಗಳನ್ನು ಬಂಧಿಸುತ್ತೇವೆ ಎಂದು ಹೇಳಬೇಕಾದ ಮುಖ್ಯಮಂತ್ರಿ, ಬಿಜೆಪಿಯವರ ಮೇಲೆ ಆಪಾದನೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಕೊಲೆಗಡುಕರಿಗೆ ಭಯವೇ ಇಲ್ಲವಾಗಿದೆ. ಸರ್ಕಾರ ಕೊಲೆಗಡುಕರ ಬೆನ್ನಿಗೆ ನಿಂತಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅವರಿಗೆ ನೈತಿಕತೆ ಇಲ್ಲ’ ಎಂದು ಜರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.