ADVERTISEMENT

ಸುವರ್ಣಸೌಧ: ಶೀಘ್ರ ಕಾರ್ಯಪಡೆ ವರದಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 19:30 IST
Last Updated 17 ಜೂನ್ 2011, 19:30 IST

ಬೆಂಗಳೂರು: ಗುಣಮಟ್ಟ ನಿಯಂತ್ರಣ ಕಾರ್ಯಪಡೆಯ ಅಧ್ಯಕ್ಷ ಡಾ.ಜೆ.ವಿಶ್ವನಾಥ್ ನೇತೃತ್ವದ ತಂಡ ಶುಕ್ರವಾರ ಬೆಳಗಾವಿಗೆ ಭೇಟಿ ನೀಡಿ ಸುವರ್ಣಸೌಧ ಕಾಮಗಾರಿಯ ವಸ್ತುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದು, 2-3 ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಲಿದೆ.

ಸುವರ್ಣಸೌಧ ನಿರ್ಮಾಣ ಕಾರ್ಯದಲ್ಲಿ ಆಗಿರುವ ಪ್ರಗತಿ, ಬಾಕಿ ಇರುವ ಕಾಮಗಾರಿ, ಹೆಚ್ಚುವರಿಯಾಗಿ ಆಗಬೇಕಾಗಿರುವ ಕೆಲಸಗಳು ಇತ್ಯಾದಿಗಳ ಬಗ್ಗೆ ತಂಡದ ಸದಸ್ಯರು ಇಡೀ ದಿನ ಪರಿಶೀಲನೆ ನಡೆಸಿದರು. ಶನಿವಾರ ಲೋಕೋಪಯೋಗಿ ಇಲಾಖೆಯ ಸ್ಥಳೀಯ ಅಧಿಕಾರಿಗಳು ಮತ್ತು ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಸುವರ್ಣಸೌಧ ಕಾಮಗಾರಿಯ ಪರಿಷ್ಕೃತ ಅಂದಾಜು ವೆಚ್ಚ ಈಗಾಗಲೇ ರೂ. 370 ಕೋಟಿಗೆ ಏರಿದೆ. ಆದರೆ ಈಗ ಮತ್ತೆ 110 ಕೋಟಿ ರೂಪಾಯಿಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಯಡಿಯೂರಪ್ಪ ಸಹ ಅಸಮಾಧಾನ ವ್ಯಕ್ತಪಡಿಸಿದ್ದು, ಕಾರ್ಯಪಡೆ ಭೇಟಿ ನೀಡಿ ವರದಿ ಸಲ್ಲಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಪದೇ ಪದೇ ಅಂದಾಜು ವೆಚ್ಚವನ್ನು ಜಾಸ್ತಿ ಮಾಡುವುದು ಸರಿಯಲ್ಲ, ಬಾಕಿ ಇರುವ ಕಾಮಗಾರಿಗಳಿಗೆ ಎಷ್ಟು ಹಣ ಬೇಕು, ಹೊಸದಾಗಿ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಸಮಗ್ರವಾಗಿ ವರದಿ ನೀಡಿ ಎಂದು ಯಡಿಯೂರಪ್ಪ ಅವರು ಕಾರ್ಯಪಡೆಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪಡೆ ಪರಿಶೀಲನೆ ನಡೆಸಿದ್ದು, ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ.

ವರದಿ ಬಂದ ನಂತರ ಅದನ್ನು ಸಚಿವ ಸಂಪುಟ ಸಭೆಯಲ್ಲಿಟ್ಟು ಪರಿಷ್ಕೃತ ಅಂದಾಜು ಪಟ್ಟಿಗೆ ಒಪ್ಪಿಗೆ ನೀಡಲಾಗುತ್ತದೆ. ಅಲ್ಲಿಯವರೆಗೆ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ಕಾರ್ಯಪಡೆಯ ಕೆಲವು ಸದಸ್ಯರು ಬೆಳಗಾವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅಧ್ಯಕ್ಷರೊಂದಿಗೆ ವಿಚಾರ ವಿನಿಮಯ ನಡೆಸಿದ್ದಾರೆ. ಯಡಿಯೂರಪ್ಪ ಸೂಚನೆಯಂತೆ ಈಗ ಅಧ್ಯಕ್ಷರೇ ಖುದ್ದಾಗಿ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.