ADVERTISEMENT

ಸುವರ್ಣ ಭೂಮಿ ಬದಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2011, 19:10 IST
Last Updated 22 ಏಪ್ರಿಲ್ 2011, 19:10 IST

ಬೆಂಗಳೂರು: ‘ರೈತರಿಗೆ ಮಂಕುಬೂದಿ ಎರಚುವ ‘ಸುವರ್ಣ ಭೂಮಿ’ ಯೋಜನೆಯಿಂದ ಬಿಜೆಪಿ ಕಾರ್ಯಕರ್ತರಿಗೆ ಲಾಭವೇ ವಿನಾ ರೈತರಿಗೆ ಏನೂ ಇಲ್ಲ. ಈ ಯೋಜನೆಯ ಮಾರ್ಗಸೂಚಿ ಬಿಜೆಪಿ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸಲು ಪೂರಕವಾಗಿದ್ದು, ತಕ್ಷಣ ಇದನ್ನು ಬದಲಿಸಬೇಕು’ ಎಂದು ಜೆಡಿಎಸ್ ವಕ್ತಾರರೂ ಆದ ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ.ದತ್ತ ಶುಕ್ರವಾರ ಇಲ್ಲಿ ಒತ್ತಾಯ ಮಾಡಿದರು.

‘ಅರ್ಜಿ ಸಲ್ಲಿಸುವುದಕ್ಕೆ ಬೇಕಾಗುವ ದಾಖಲೆಗಳನ್ನು ಹೊಂದಿಸಿಕೊಳ್ಳಲು ರೈತರು 500ರಿಂದ 1500 ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಈ ಸಲುವಾಗಿ ನೆಮ್ಮದಿ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಇಷ್ಟಾದರೂ ಈ ಯೋಜನೆಯಡಿ 10 ಸಾವಿರ ರೂಪಾಯಿ ಸಿಗುವುದು ಅನುಮಾನ. ಕಾರಣ ಇತ್ತೀಚೆಗೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವುದಾಗಿ ಸರ್ಕಾರ ಪ್ರಕಟಿಸಿದ್ದು, ಇದೊಂದು ರೈತರನ್ನು ದಾರಿತಪ್ಪಿಸುವ ಕಾರ್ಯಕ್ರಮ’ ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

‘ಹತ್ತು ಲಕ್ಷ ಸಣ್ಣ ಹಿಡುವಳಿದಾರರ ಕೃಷಿ ಭೂಮಿಯನ್ನು ಸಾರಯುಕ್ತಗೊಳಿಸಲು ರೂ 1000 ಕೋಟಿ ಖರ್ಚು ಮಾಡುತ್ತಿದ್ದು, ಇದರ ಅನುಷ್ಠಾನಕ್ಕೆ ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಿ, 300 ರೈತರಿಗೆ ಒಬ್ಬರಂತೆ ‘ರೈತ ಅನುವುಗಾರ’ರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದೆ. ಇವರಿಗೆ ಗೌರವ ಧನದ ಜತೆಗೆ ಲೇಖನ ಸಾಮಗ್ರಿ, ಪ್ರವಾಸದ ಖರ್ಚು ನೀಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ರೀತಿಯ ಅನುವುಗಾರರು ಬಿಜೆಪಿ ಕಾರ್ಯಕರ್ತರೇ ಆಗಿರುತ್ತಾರೆ. ಅಂತಹ ಅನುವುಗಾರರ ಮರ್ಜಿಯಲ್ಲಿ ರೈತರು ಬಾಳಬೇಕು. ಹೀಗಾಗಿ ಇದು ಬಿಜೆಪಿ ಕಾರ್ಯಕರ್ತರ ಮನೆಗೆ ನೇರವಾಗಿ ಹಣ ತಲುಪಿಸುವ ಯೋಜನೆ’ ಎಂದುರು.

‘ಈ ಅನುವುಗಾರರಿಗೆ ಹೆಚ್ಚು ಅಧಿಕಾರ ಕೂಡ ನೀಡಲಾಗಿದೆ. ಫಲಾನುಭವಿಗಳ ಆಯ್ಕೆ ಸೇರಿದಂತೆ ಕೊಟ್ಟ ಹಣವನ್ನು ರೈತರು ಸದ್ಬಳಕೆ ಮಾಡಿದ್ದಾರೆಯೇ ಎನ್ನುವುದನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನೂ ವಹಿಸಲಾಗಿದೆ.

ಒಂದು ವೇಳೆ ಹಣ ಸದ್ಬಳಕೆಯಾಗಿಲ್ಲ ಎಂದು ಇವರು ವರದಿ ಕೊಟ್ಟರೆ, ಸಂಬಂಧಪಟ್ಟ ರೈತರಿಗೆ ಮುಂದಿನ ಮೂರು ವರ್ಷಗಳ ಕಾಲ ಸರ್ಕಾರದ ಯಾವ ಸೌಲಭ್ಯವೂ ಸಿಗುವುದಿಲ್ಲ. ಇದು ಮಾರ್ಗಸೂಚಿಯಲ್ಲಿರುವ ಷರತ್ತು. ಇಂತಹ ನಿಯಮಗಳನ್ನು ಇಟ್ಟುಕೊಂಡು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಟೀಕಿಸಿದರು.

ಒಟ್ಟು 3500 ಮಂದಿ ರೈತ ಅನುವುಗಾರರನ್ನು ನೇಮಕ ಮಾಡುತ್ತಿದ್ದು, ಅವರ ಗೌರವ ಧನ ಇತ್ಯಾದಿಯ ಖರ್ಚಿಗಾಗಿ 20 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಈ ಯೋಜನೆ ರೈತರ ಸಲುವಾಗಿಯೊ ಅಥವಾ ಬಿಜೆಪಿ ಕಾರ್ಯಕರ್ತರ ಸಲುವಾಗಿಯೊ ಎಂಬುದನ್ನು ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಪಡಿಸಿದರು.

ಭಾಗ್ಯಲಕ್ಷ್ಮಿ ಟೀಕೆ: ಹೆಣ್ಣು ಭ್ರೂಣ ಹತ್ಯೆ ತಡೆ ಮತ್ತು ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಗೌರವ ಸಿಗಲಿ ಎನ್ನುವ ಉದ್ದೇಶದಿಂದ ಭಾಗ್ಯಲಕ್ಷ್ಮಿ ಯೋಜನೆ ಜಾರಿ ಮಾಡಿದ್ದು. ಆದರೆ, ಅದನ್ನು ಈಗ ಬಿಪಿಎಲ್ ಕುಟುಂಬಗಳಿಗೆ ಮಾತ್ರ ಎಂದು ಹೇಳಿರುವುದು ಸರಿಯಲ್ಲ. ಎಲ್ಲ ಹೆಣ್ಣು ಮಕ್ಕಳಿಗೂ ಈ ಸೌಲಭ್ಯ ಸಿಗಬೇಕು ಎಂದು ಆಗ್ರಹಪಡಿಸಿದರು.

ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂದು ಗೊತ್ತಾದ ತಕ್ಷಣ ಯೋಜನೆಗಳ ದಿಕ್ಕನ್ನೇ ಬದಲಿಸುವ ಕೆಲಸ ಈ ಸರ್ಕಾರ ಮಾಡುತ್ತಿದೆ. ಇದಕ್ಕೆ ಜನರ ಹಿತಕ್ಕಿಂತ ಸ್ವಹಿತ ಮುಖ್ಯವಾಗಿದೆ ಎಂದು ಟೀಕಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.