ADVERTISEMENT

ಸೆಕ್ಸ್ ನಿರಾಕರಣೆಯೂ ಕ್ರೌರ್ಯ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಬೆಂಗಳೂರು: ವಿವಾಹದ ಆರಂಭದ ದಿನಗಳಿಂದಲೇ ಏನೇನೋ ಸಬೂಬು ಹೇಳಿ ಸಂತೃಪ್ತ ಲೈಂಗಿಕ ಜೀವನ ನಡೆಸಲು ಸಂಗಾತಿ ನಿರಾಕರಿಸಿದರೆ ಅದು `ಕ್ರೌರ್ಯ~ ಎಂದಿರುವ ಹೈಕೋರ್ಟ್, ವಿಚ್ಛೇದನಕ್ಕೆ ಇದೂ ಒಂದು ಕಾರಣ ಆಗಬಹುದು ಎಂದು ಮಹತ್ವದ ತೀರ್ಪು ನೀಡಿದೆ.

ಪತ್ನಿ ನೀಡುತ್ತಿರುವ ಸಬೂಬುಗಳಿಂದ ಬೇಸತ್ತ ಪತಿಯೊಬ್ಬರು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ಅದು `ಕ್ರೌರ್ಯ~ ಅಲ್ಲ ಎಂದಿದ್ದ ಕೌಟುಂಬಿಕ ಕೋರ್ಟ್ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತರಾದ ಪತ್ನಿಯ ವಿರುದ್ಧ ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕಕೋರ್ಟ್ ವಜಾಗೊಳಿಸಿತ್ತು. ಈ ಆದೇಶವನ್ನೇ ಈಗ ರದ್ದು ಮಾಡಿರುವ ಹೈಕೋರ್ಟ್, ಪತಿಗೆ ವಿಚ್ಛೇದನ ದೊರಕಿಸಿಕೊಟ್ಟಿದೆ.

ವಿವಾಹವಾಗಿ 10 ವರ್ಷಗಳಾದರೂ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ತೋರದ ಪತ್ನಿ, `ನಾನು ಪತಿಯ ಜೊತೆ ನೆಲೆಸಲು ಇಚ್ಛಿಸುತ್ತೇನೆ~ ಎಂದು ಕೋರ್ಟ್ ಮುಂದೆ ಹೇಳಿದರೂ ಅದನ್ನು ಮಾನ್ಯ ಮಾಡದ ನ್ಯಾಯಾಲಯ ಪತಿಯನ್ನು ಪತ್ನಿಯಿಂದ `ಬಿಡುಗಡೆ~ಗೊಳಿಸಿದೆ.

`ದೈಹಿಕ ಹಿಂಸೆಯಷ್ಟೇ ಕ್ರೂರತನ ಆಗಲಾರದು. ಲೈಂಗಿಕ ಸಂಪರ್ಕ ವಿವಾಹದ ಒಂದು ಪ್ರಮುಖ ಅಂಶ. ವಿನಾಕಾರಣ ಅದನ್ನು ನಿರಾಕರಿಸುವುದು ಸಲ್ಲದು. ವಿವಾಹ ಕಾಯ್ದೆಯಲ್ಲಿ `ಕ್ರೌರ್ಯ~ ಕುರಿತು ಸ್ಪಷ್ಟ ವ್ಯಾಖ್ಯಾನ ಇಲ್ಲದಿದ್ದರೂ ವೈವಾಹಿಕ ಜೀವನವನ್ನು ಗಣನೆಗೆ ತೆಗೆದುಕೊಂಡಾಗ ಲೈಂಗಿಕ ಸಂಪರ್ಕ ಅಗತ್ಯ~ ಎಂದು ನ್ಯಾಯಮೂರ್ತಿಗಳಾದ ಎನ್.ಕೆ. ಪಾಟೀಲ್ ಹಾಗೂ ಬಿ.ವಿ.ಪಿಂಟೋ ಅವರನ್ನು ಒಳಗೊಂಡ ವಿಭಾಗೀಯ ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಪ್ರಕರಣ ವಿವರ: ಚೆನ್ನೈ ಮೂಲದ ಪ್ರಕಾಶ್‌ಕುಮಾರ್ ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿಯ ಟಿ.ಎನ್.ಸುಮಾ (ಇಬ್ಬರ ಹೆಸರು ಬದಲಾಯಿಸಲಾಗಿದೆ) ದಂಪತಿ ನಡುವಿನ ಪ್ರಕರಣ ಇದು. ಪ್ರಕಾಶ್ ಚೆನ್ನೈ ಕಂಪನಿಯೊಂದರಲ್ಲಿ ಕೆಲಸದಲ್ಲಿ ಇದ್ದರೆ ಸುಮಾ ಜೀವ ವಿಮಾ ನಿಗಮದ ದಾವಣಗೆರೆ ಶಾಖೆಯಲ್ಲಿನ ಉದ್ಯೋಗಿ.

ಇವರ ವಿವಾಹ 2002ನೇ ಸಾಲಿನಲ್ಲಿ ನಡೆದಿತ್ತು. ವಿವಾಹವಾಗಿ ಕೆಲವು ದಿನಗಳಾದರೂ ಇಬ್ಬರ ನಡುವೆ ಲೈಂಗಿಕ ಸಂಪರ್ಕ ಇರಲಿಲ್ಲ. ಮಧುಚಂದ್ರಕ್ಕೆ ಹೋದರೂ, ಅಲ್ಲಿಯೂ ದಂಪತಿ ಒಟ್ಟಿಗೆ ಇರಲಿಲ್ಲ. ಚೆನ್ನೈನಲ್ಲಿ ಇರುವ ಪತಿಯ ಮನೆಗೆ ಹೋಗುತ್ತಿದ್ದರೂ ಲೈಂಗಿಕ ಕ್ರಿಯೆಯಲ್ಲಿ ಆಕೆ ಆಸಕ್ತಿ ತೋರುತ್ತಿರಲಿಲ್ಲ. ಚೆನ್ನೈಗೆ ವರ್ಗಾವಣೆ ಮಾಡಿಕೊಳ್ಳಲು ಅವರಿಗೆ ಅವಕಾಶ ಇದ್ದರೂ ಅದಕ್ಕೆ ಪ್ರಯತ್ನಿಸಲಿಲ್ಲ.

ಅವರ ಬೇಡಿಕೆ ಎಂದರೆ ಅತ್ತೆ, ಮಾವ ಹಾಗೂ ನಾದಿನಿ ಇವರೆಲ್ಲರೂ ಪತಿಯ ಜೊತೆ ಇರಬಾರದು ಎನ್ನುವುದು. ಅದಕ್ಕೆ ಪ್ರಕಾಶ್ ಒಪ್ಪಿರಲಿಲ್ಲ. ಈ ಮಧ್ಯೆಯೇ ಅತ್ತೆ ಹಾಗೂ ಇತರರ ವಿರುದ್ಧ ಸುಮಾ `ಕೌಟುಂಬಿಕ ದೌರ್ಜನ್ಯ ಕಾಯ್ದೆ~ ಅಡಿ ದೂರು ದಾಖಲು ಮಾಡಿದ್ದರು. ಹೈಕೋರ್ಟ್ ಅತ್ತೆ ಪರವಾಗಿ ತೀರ್ಪು ನೀಡಿತ್ತು.

ವಿಚ್ಛೇದನಕ್ಕೆ ಅರ್ಜಿ:  ಇದರಿಂದ ಬೇಸತ್ತ ಪ್ರಕಾಶ್ ಅವರು, 2005ನೇ ಸಾಲಿನಲ್ಲಿ ವಿಚ್ಛೇದನಕ್ಕೆ ಕೋರಿ ಕೌಟುಂಬಿಕ ಕೋರ್ಟ್ ಮೊರೆ ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.