ADVERTISEMENT

ಸೆಪ್ಟೆಂಬರ್‌ನಲ್ಲಿ ಮತ್ತೊಂದು ಧರ್ಮ ಸಂಸದ್‌

ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಟ್ಟಾಭಿಷೇಕ ದಶಮಾನೋತ್ಸವದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST
ಧರ್ಮಾನಂದ ಸರಸ್ವತಿ ಸ್ವಾಮೀಜಿ
ಧರ್ಮಾನಂದ ಸರಸ್ವತಿ ಸ್ವಾಮೀಜಿ   

ಮಂಗಳೂರು: ಧರ್ಮಸ್ಥಳ ಸಮೀಪದ ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಟ್ಟಾಭಿಷೇಕದ ದಶಮಾನೋತ್ಸವದ ಸಂದರ್ಭದಲ್ಲಿ ಮತ್ತೊಂದು ಧರ್ಮ ಸಂಸದ್‌ಗೆ ವೇದಿಕೆ ಸಿದ್ಧವಾಗಿದೆ. ಸೆಪ್ಟೆಂಬರ್‌ 3ರಂದು ಇಲ್ಲಿ ಧರ್ಮ ಸಂಸದ್‌ ನಡೆಯಲಿದ್ದು, ಸಿದ್ಧತೆಗಳು ಆರಂಭವಾಗಿವೆ.

ಕಳೆದ ನವೆಂಬರ್‌ನಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಪರ್ಯಾಯ ಸಂದರ್ಭ ಧರ್ಮ ಸಂಸದ್‌ ನಡೆದಿತ್ತು. ಈ ಮೂಲಕ ಉಡುಪಿ ಇಡೀ ದೇಶದ ಗಮನ ಸೆಳೆದಿತ್ತು. ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಧರ್ಮ ಸಂಸದ್‌ ನಡೆಯಲಿದ್ದು, ಪೇಜಾವರ ಶ್ರೀ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಬದರೀನಾಥ, ಕೇದಾರ, ಗಂಗೋತ್ರಿ, ನೇಮಿಶಾರಣ್ಯ, ಚಿತ್ರಕೂಟ, ಉಜ್ಜಯಿನಿ, ಅಲಹಾಬಾದ್‌, ನಾಸಿಕ್‌, ರಾಮೇಶ್ವರ, ಅಸ್ಸಾಂ, ಕೇರಳ, ತಮಿಳುನಾಡು ಸೇರಿದಂತೆ ದೇಶ ವಿದೇಶದಿಂದ 2 ಸಾವಿರಕ್ಕೂ ಅಧಿಕ ಸಾಧು ಸಂತರು ಸೇರಿದಂತೆ ಒಟ್ಟು 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

ADVERTISEMENT

ಸನಾತನ ಹಿಂದೂ ಧರ್ಮವನ್ನು ಶ್ರದ್ಧಾ ಭಕ್ತಿಯಿಂದ ಪಾಲಿಸುವ ಮುಖೇನ ರಾಷ್ಟ್ರ ನಿರ್ಮಾಣದ ಕೈಂಕರ್ಯದಲ್ಲಿ ಎಲ್ಲರೂ ತೊಡಗಿಕೊಳ್ಳುವ ಪ್ರಮುಖ ಉದ್ದೇಶವನ್ನಿಟ್ಟುಕೊಂಡು ಕರಾವಳಿಯಲ್ಲಿ ಮತ್ತೊಂದು ಧರ್ಮ ಸಂಸದ್‌ ಆಯೋಜಿಸಲಾಗುತ್ತಿದೆ. ಸನಾತನ ಧರ್ಮದ ಮೌಲ್ಯಗಳು, ಜಗತ್‌ ಕಲ್ಯಾಣ, ಧರ್ಮಪೋಷಣೆಗಾಗಿ ಈ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು
ಹೇಳಿದ್ದಾರೆ.
**
ಲೋಕ ಕಲ್ಯಾಣ ಮಂಚ್‌ 
ರಾಜಕೀಯರಹಿತವಾಗಿ ರಾಷ್ಟ್ರಮಟ್ಟದಲ್ಲಿ ಎಲ್ಲ ಆಖಾಡಗಳು, ನಾಗಾ ಸಾಧುಗಳು, ಸೀತಾರಾಮ ಪರಂಪರೆ, ನಾಥ ಪಂಥ, ತ್ಯಾಗಿ, ಬೈರಾಗಿ ಇನ್ನಿತರ ಎಲ್ಲ ಸನಾತನ ಹಿಂದೂ ಧರ್ಮದ ಬೇರೆ ಬೇರೆ ಪರಂಪರೆಗಳ ಆಚಾರ್ಯರು, ಮಹಾಮಂಡಲೇಶ್ವರರು, ಮಹಾಂತರನ್ನು ಒಟ್ಟುಗೂಡಿಸಿ ಧರ್ಮ ರಕ್ಷಣೆಗಾಗಿ ರಾಷ್ಟ್ರೀಯ ಲೋಕ ಕಲ್ಯಾಣ ಮಂಚ್‌ ಸ್ಥಾಪಿಸುವ ಗುರಿ ಇದೆ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

‘ದೇಶದಲ್ಲಿ ಮುಂದಿನ ಹತ್ತು ವರ್ಷದೊಳಗೆ ಪ್ರತಿ ಹಳ್ಳಿಗಳಲ್ಲಿ ಗುರುಕುಲ ಮಾದರಿಯ ಅಂಗನವಾಡಿ ವಿದ್ಯಾಸಂಸ್ಥೆ ಪ್ರಾರಂಭಿಸಿ, ಆ ಮೂಲಕ ನಮ್ಮ ಮುಂದಿನ ಪೀಳಿಗೆಯ ಉದ್ಧಾರ ಹಾಗೂ ಪ್ರಾಥಮಿಕ ಶಾಲೆಯಿಂದ ಕಾಲೇಜು ತನಕ ಪಠ್ಯಗಳಲ್ಲಿ ನಮ್ಮ ಇತಿಹಾಸ, ಪರಂಪರೆ, ಶ್ರೇಷ್ಠ ಮಾನವ ಧರ್ಮ, ಸನಾತನ ಹಿಂದೂ ಧರ್ಮದ ಮಹತ್ವಗಳನ್ನು ಸಾರಿ ಹೇಳುವ ಕೆಲಸವಾಗಬೇಕಿದೆ’ ಎಂದು ಸ್ವಾಮೀಜಿ ತಿಳಿಸಿದರು.
*
ಈ ಬಾರಿ ಧರ್ಮಸಂಸದ್‌ ಕನ್ಯಾಡಿಯಲ್ಲಿ ನಡೆದರೆ, ಮುಂದಿನ ವರ್ಷ ಬೇರೆ ರಾಜ್ಯದಲ್ಲಿ ಆಯೋಜಿಸಲಾಗುವುದು. ಈ ಕಾರ್ಯಕ್ರಮ ದೇಶದಾದ್ಯಂತ ಪಸರಿಸಲಿದೆ.
–ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀರಾಮಕ್ಷೇತ್ರ ಕನ್ಯಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.