ADVERTISEMENT

ಸೆಪ್ಟೆಂಬರ್‌ಗೆ ಸಾವಯವ ಮೌಲ್ಯಮಾಪನ ; ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2011, 19:30 IST
Last Updated 28 ಆಗಸ್ಟ್ 2011, 19:30 IST
ಸೆಪ್ಟೆಂಬರ್‌ಗೆ ಸಾವಯವ ಮೌಲ್ಯಮಾಪನ ; ಮುಖ್ಯಮಂತ್ರಿ
ಸೆಪ್ಟೆಂಬರ್‌ಗೆ ಸಾವಯವ ಮೌಲ್ಯಮಾಪನ ; ಮುಖ್ಯಮಂತ್ರಿ   

ಯಾದಗಿರಿ: ಸಾವಯವ ಕೃಷಿಕರ ಜೊತೆಗಿನ ಸಂವಾದ ಕಾರ್ಯಕ್ರಮದ ವಾರ್ಷಿಕೋತ್ಸವ ಯಾದಗಿರಿ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಮುಂದಿನ ತಿಂಗಳು ಸಾವಯವ ಕೃಷಿ ಸಂವಾದ ಕಾರ್ಯಕ್ರಮದ ಮೌಲ್ಯಮಾಪನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.

ಜಿಲ್ಲೆಯ ದೇವತ್ಕಲ್ ಗ್ರಾಮದಲ್ಲಿ ಭೀಮರಾಯ ಮೂಲಿಮನಿ ಅವರ ಮನೆಯಲ್ಲಿ ಭೋಜನ ಸ್ವೀಕರಿಸಿದ ಬಳಿಕ ಭಾನುವಾರ ಹುಣಸಗಿಯಲ್ಲಿ ಏರ್ಪಡಿಸಿದ್ದ ಸಾವಯವ ಕೃಷಿಕರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಗಲಕೋಟೆ ಜಿಲ್ಲೆಯ ಶಿರೋಳ ಗ್ರಾಮದ ಕೃಷಿಕನ ಮನೆಯಿಂದ ಈ ಕಾರ್ಯಕ್ರಮ ಆರಂಭವಾಗಿತ್ತು. ಯಾದಗಿರಿ ಜಿಲ್ಲೆಯಲ್ಲಿ ನಡೆಯುತ್ತಿರುವುದು 12ನೇ ಕಾರ್ಯಕ್ರಮ. ಎಲ್ಲ ಕಾರ್ಯಕ್ರಮಗಳಲ್ಲಿ ಘೋಷಿಸಿದ ಯೋಜನೆಗಳ ಅನುಷ್ಠಾನದ ಕುರಿತು ಮೌಲ್ಯಮಾಪನ ಮಾಡಲಾಗುವುದು. ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಬಜೆಟ್‌ನಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮಾರುಕಟ್ಟೆಯಲ್ಲಿ ಬೆಲೆಗಳ ಏರಿಳಿತ ಆಗುವುದರಿಂದ ರೈತರೇ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದು, ಇದು ಅತ್ಯಂತ ಅವಶ್ಯಕವಾಗಿದೆ ಎಂದರು. ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣದ ಅವಧಿಯಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸುವ ಕುರಿತು ಶಿಕ್ಷಣ ಸಚಿವರ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾವಯವ ಕೃಷಿ ದಂಪತಿಗಳನ್ನು ವಿಧಾನಸೌಧಕ್ಕೆ ಕರೆಯಿಸಿ, ಸಚಿವಾಲಯ ಹಾಗೂ ಅವುಗಳ ಕಾರ್ಯವೈಖರಿ ಕುರಿತು ಪರಿಚಯಿಸಲು, `ವಿಧಾನಸೌಧದ ಮೊಗಸಾಲೆಯಲ್ಲಿ ಅನ್ನದಾತ~ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಲಾಗುವುದು.

ಸಿಎಂ ಆದೇಶ: ರೈತರು ನೀಡುವ ಅರ್ಜಿಗಳನ್ನು ಕಸದ ಬುಟ್ಟಿಗೆ ಹಾಕುವಂತಿಲ್ಲ. ರಾಜ್ಯದಲ್ಲಿ ಎಲ್ಲ ಅಧಿಕಾರಿಗಳಿಗೂ ಈ ವೇದಿಕೆಯಿಂದಲೇ ಆದೇಶ ನೀಡುತ್ತೇನೆ. ರೈತರು ಕೊಟ್ಟ ಅರ್ಜಿಗಳ ಬಗ್ಗೆ ಸೂಕ್ತ ಕೈಗೊಂಡು ಉತ್ತರಿಸಬೇಕು ಎಂದು ತಾಕೀತು ಮಾಡಿದರು.

ಸಚಿವರಾದ ನರಸಿಂಹ ನಾಯಕ, ರೇವು ನಾಯಕ ಬೆಳಮಗಿ, ಶಾಸಕರಾದ ದೊಡ್ಡಪ್ಪಗೌಡ ನರಬೋಳಿ, ವಾಲ್ಮೀಕ ನಾಯಕ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.