ADVERTISEMENT

ಸೆರೆಬ್ರಲ್ ಪಾಲ್ಸಿ ಜಾಗೃತಿ ರಾಜ್ಯಪಾಲರ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST

ಬೆಂಗಳೂರು: `ಸೆರೆಬ್ರಲ್ ಪಾಲ್ಸಿ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ. ನಾನಾ ಬಗೆಯ ಕಾಯಿಲೆ ಪೀಡಿತರಿಗೆ ನೆರವಾಗಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ರೋಗ ನಿಯಂತ್ರಣಕ್ಕೆ ಸಂಘ ಸಂಸ್ಥೆಗಳು ಮುಂದಾಗಬೇಕು~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಲಹೆ ನೀಡಿದರು.

ಸ್ಪಾಸ್ಟಿಕ್ ಸೊಸೈಟಿ ಆಫ್ ಕರ್ನಾಟಕದ ಆಶ್ರಯದಲ್ಲಿ `ಸೆರೆಬ್ರಲ್ ಪಾಲ್ಸಿ~ ದಿನಾಚರಣೆಯ ಅಂಗವಾಗಿ ರಾಜಭವನದಲ್ಲಿ ಶನಿವಾರ `ಅರಿವಿಗಾಗಿ ನಡಿಗೆ~ಗೆ ಚಾಲನೆ ನೀಡಿ ಅವರು ಮಾತನಾಡಿದರು.

`ಪೋಲಿಯೊ ಬಗ್ಗೆ ರೋಟರಿ ಸಂಸ್ಥೆ ನಿರಂತರವಾಗಿ ಜಾಗೃತಿ ಮೂಡಿಸಿದೆ. ಅದೇ ಮಾದರಿಯಲ್ಲಿ ಸೆರೆಬ್ರಲ್ ಪಾಲ್ಸಿ ಬಗ್ಗೆಯೂ ರೋಟರಿ ಜಾಗೃತಿ ಮೂಡಿಸಬೇಕು~ ಎಂದು  ಕಿವಿಮಾತು ಹೇಳಿದರು.   

ಅರಿವಿಗಾಗಿ ನಡಿಗೆಯ ಸಂಯೋಜಕ ಡಾ.ಎಂ.ಎಸ್.ಮಹಾದೇವಯ್ಯ, `ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು ಹಾಗೂ ಕುಟುಂಬದ ಸದಸ್ಯರಲ್ಲಿ ಜಾಗೃತಿ ಮೂಡಿಸಿ ಇಂಡಿಯನ್ ಅಕಾಡೆಮಿ ಆಫ್ ಸೆರೆಬ್ರಲ್ ಪಾಲ್ಸಿ ಅಗತ್ಯ ಸೇವೆಗಳನ್ನು ಒದಗಿಸುತ್ತಿದೆ. ಪ್ರತಿವರ್ಷ ದೇಶದಾದ್ಯಂತ ಅಕ್ಟೋಬರ್ 3ರಂದು ಸೆರೆಬ್ರಲ್ ಪಾಲ್ಸಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ~ ಎಂದರು.

`ಐಸಾಕ್~ ಸಂಘಟನಾ ಕಾರ್ಯದರ್ಶಿ ರಬೀಂದ್ರನ್, ರೋಟರಿ ಇಂಟರ್‌ನ್ಯಾಷನಲ್ ಅಧ್ಯಕ್ಷ ಅತುಲ್ ಗುರ್ಜಾರ್ ಮತ್ತಿತರರು ಉಪಸ್ಥಿತರಿದ್ದರು. ರಾಜಭವನದಿಂದ ಆರಂಭಗೊಂಡ ನಡಿಗೆ ಲ್ಯಾವೆಲ್ಲೆ ರಸ್ತೆಯ ರೋಟರಿ ಕ್ಲಬ್ ಕಟ್ಟಡದ ವರೆಗೆ ಸಾಗಿಬಂತು. ನಡಿಗೆಯಲ್ಲಿ ಸೆರೆಬ್ರಲ್ ಪಾಲ್ಸಿ ಪೀಡಿತರು ಸೇರಿದಂತೆ ಸುಮಾರು 200 ಜನರು ಪಾಲ್ಗೊಂಡಿದ್ದರು.

ಕಸ ಸಮಸ್ಯೆ-ಕಳವಳ
ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವುದಕ್ಕೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ತೀವ್ರ   ಕಳವಳ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, `ಕೆಲವು ದಿನಗಳಿಂದ ನಾನಾ ಕಾರಣಗಳಿಂದ ನಗರದಲ್ಲಿ ಕಸ ಸಮರ್ಪಕವಾಗಿ ವಿಲೇವಾರಿಯಾಗುತ್ತಿಲ್ಲ. ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಸಂಪೂರ್ಣ ಸಹಕಾರ ನೀಡಬೇಕು~ ಎಂದು ತಿಳಿಸಿದರು.   
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT