ADVERTISEMENT

`ಸೇಡಿನ ರಾಜಕಾರಣ ಇಲ್ಲ'

​ಪ್ರಜಾವಾಣಿ ವಾರ್ತೆ
Published 11 ಮೇ 2013, 20:00 IST
Last Updated 11 ಮೇ 2013, 20:00 IST

ಬೆಂಗಳೂರು: `ಯಾವುದೇ ಸಂದರ್ಭದಲ್ಲಿ ಸೇಡಿನ ರಾಜಕಾರಣ ಮಾಡುವುದಿಲ್ಲ'. ಇದು ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಅವರ ಶಪಥ.

`ಆದರೆ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಕಾನೂನಿನ ಕ್ರಮ ತನ್ನಷ್ಟಕ್ಕೆ ತಾನೇ ನಡೆಯುತ್ತದೆ ' ಎಂದು ಸ್ಪಷ್ಟನೆ ನೀಡಿದರು.
ಶನಿವಾರ ಇಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, `ಬಿಜೆಪಿ ಸರ್ಕಾರ ಆರಂಭಿಸಿದ್ದ ಜನೋಪಯೋಗಿ ಯೋಜನೆಗಳನ್ನು ರದ್ದು ಮಾಡುವುದಿಲ್ಲ. ಆದರೆ ಅದರಲ್ಲಿನ ಲೋಪದೋಷ ಸರಿಪಡಿಸಿ ಅಂತಹ ಯೋಜನೆಗಳನ್ನು ಸರಿದಾರಿಗೆ ತರುತ್ತೇವೆ' ಎಂದರು.

ಅಕ್ರಮ ಗಣಿಗಾರಿಕೆ ಮೂಲಕ ಹಣ ಲೂಟಿ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು. ಆದರೆ ಇದರಲ್ಲಿ ಡಿನೋಟಿಫಿಕೇಷನ್ ಹಗರಣ ಸೇರಿಸುವುದಿಲ್ಲ ಎಂದ ಅವರು, ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ `ಸಕಾಲ' ಯೋಜನೆಯನ್ನು ಪುನರ್ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

ಸೂಕ್ತ ಅಧಿಕಾರಿಗಳನ್ನು ಸೂಕ್ತ ಜಾಗಕ್ಕೆ ತರುವುದು ಹಾಗೂ ಸಂಪನ್ಮೂಲ ಸೋರಿ ಹೋಗುವುದನ್ನು ತಪ್ಪಿಸುವುದು ತಮ್ಮ ಮೊದಲ ಆದ್ಯತೆ. ಲೋಕೋಪಯೋಗಿ, ವಿದ್ಯುತ್, ನೀರಾವರಿ, ಗ್ರಾಮೀಣಾಭಿವೃದ್ಧಿ ಮುಂತಾದ ಇಲಾಖೆಗಳಲ್ಲಿ ಸಂಪನ್ಮೂಲ ಸೋರಿಕೆಯಾಗುತ್ತಿದ್ದು ಅದನ್ನು ತಡೆಯಲಾಗುವುದು ಎಂದು ಘೋಷಿಸಿದರು.

`ಕಳೆದ 5 ವರ್ಷದಲ್ಲಿ ಕರ್ನಾಟಕದ ಆಡಳಿತ ಹಳಿ ತಪ್ಪಿತ್ತು. ಅದನ್ನು ಸರಿ ದಾರಿಗೆ ತರಬೇಕಾಗಿದೆ. ಅಧಿಕಾರಿಗಳಲ್ಲಿ ವಿಶ್ವಾಸವನ್ನು ಮೂಡಿಸಿ ಅವರನ್ನು ಹುರಿದುಂಬಿಸಬೇಕಾಗಿದೆ' ಎಂದರು.

`ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ವಿಭಿನ್ನ ಆಡಳಿತ ಆರಂಭವಾಗುತ್ತದೆ. ಅದಕ್ಕೆ ಯಾವುದೇ ಸಮಯದ ಮಿತಿಗಳಿಲ್ಲ. ನಮ್ಮ ಕನಸುಗಳನ್ನು ಈಗ ಹೇಳುತ್ತಾ ಹೋಗುವುದಿಲ್ಲ. ಕೆಲಸ ಮಾಡಿ ತೋರಿಸುತ್ತೇನೆ' ಎಂದರು.

ಸಾಹಿತಿಗಳ ಭೇಟಿ: ಸಿದ್ದರಾಮಯ್ಯ ಅವರು ಶನಿವಾರ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಯು.ಆರ್.ಅನಂತಮೂರ್ತಿ ಮತ್ತು ಚಂದ್ರಶೇಖರ ಕಂಬಾರರ ಮನೆಗಳಿಗೆ ಭೇಟಿ ಕೊಟ್ಟು ಗೌರವ ಸಮರ್ಪಿಸಿದರು. ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ ಸಲಹೆಗಳನ್ನೂ ಪಡೆದುಕೊಂಡರು.

ಬನಶಂಕರಿ ಎರಡನೇ ಹಂತದ ತಮ್ಮ ಮನೆಗೆ ಬಂದ ನಿಯೋಜಿತ ಮುಖ್ಯಮಂತ್ರಿಯನ್ನು ಜಿಎಸ್‌ಎಸ್ ಅಭಿನಂದಿಸಿದರು. ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

`ಜನತೆ ನಿಮ್ಮ ಮೇಲೆ ಭರವಸೆ ಇಟ್ಟು ಬಹುಮತ ನೀಡಿದ್ದಾರೆ. ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿರುವುದರಿಂದ ಸಂತಸವಾಗಿದೆ. ಜನರಲ್ಲಿ ನಿಮ್ಮ ಬಗ್ಗೆ ನಿರೀಕ್ಷೆಗಳೂ ಜಾಸ್ತಿ ಇವೆ. ಅವುಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಉತ್ತಮ ಆಡಳಿತ ನೀಡುವ ಮೂಲಕ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಿ' ಎಂಬ ಹಾರೈಕೆಯ ಪತ್ರ ನೀಡಿದರು.

`ರಾಜ್ಯದಲ್ಲಿ ಶತಮಾನಕ್ಕೂ ಹಳೆಯದಾದ ಪ್ರಾಥಮಿಕ ಶಾಲೆಗಳಿವೆ. ಅವುಗಳಲ್ಲಿ ಕೆಲವು ಮುಚ್ಚಿಹೋಗಿವೆ. ಇನ್ನು ಕೆಲವು ಮುಚ್ಚುವ ಹಂತದಲ್ಲಿವೆ. ಅಂತಹ ಶಾಲೆಗಳನ್ನು ಪುನರುಜ್ಜೀವನ ಮಾಡಬೇಕು. ಶಾಲೆಗಳಿಗೆ ಅಗತ್ಯ ಶಿಕ್ಷಕರು, ಮೂಲಸೌಕರ್ಯ ಒದಗಿಸಬೇಕು. ಶಾಲೆಗಳನ್ನು ಮುಚ್ಚುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು' ಎಂದು ಆಗ್ರಹಿಸಿದರು.

ಸಾಹಿತಿಗಳಾದ ಪ್ರೊ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಜಿ.ಕೆ.ಗೋವಿಂದರಾವ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾವಳ್ಳಿ ಶಂಕರ್ ಮತ್ತಿತರರು ಹಾಜರಿದ್ದರು.

ನಂತರ ಕತ್ರಿಗುಪ್ಪೆಯಲ್ಲಿರುವ ಚಂದ್ರಶೇಖರ ಕಂಬಾರ ಅವರ ಮನೆಗೆ ತೆರಳಿದ ಸಿದ್ದರಾಮಯ್ಯ, ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ ಕೆಲಕಾಲ ಸಮಾಲೋಚನೆ ನಡೆಸಿದರು. ಕಂಬಾರ ಅವರು ಸಿದ್ದರಾಮಯ್ಯ ಅವರ ಆಯ್ಕೆಗೆ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದರು.

`ತಪ್ಪು ಮಾಡಬಾರದು': ಬಳಿಕ ಸದಾಶಿವನಗರಕ್ಕೆ ತೆರಳಿ ಅನಂತಮೂರ್ತಿ ಅವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದರು. ಇಬ್ಬರೂ ಹಳೆಯ ದಿನಗಳನ್ನು ನೆನಪಿಸಿಕೊಂಡು ಸಂತಸಪಟ್ಟರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂಬ ತಮ್ಮ ಆಸೆ ಈಡೇರಿದೆ ಎಂದು ಅನಂತಮೂರ್ತಿ ಖುಷಿಪಟ್ಟರು. ಮೈಸೂರಿನಲ್ಲಿ ಕಾಲೇಜು ದಿನಗಳಿಂದ ಅನಂತಮೂರ್ತಿ ಅವರ ಜೊತೆಗಿನ ಒಡನಾಟವನ್ನು ಸಿದ್ದರಾಮಯ್ಯ ನೆನಪಿಸಿಕೊಂಡರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅನಂತಮೂರ್ತಿ, `ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೇಬೇಕು ಎಂಬ ನಮ್ಮೆಲ್ಲರ ಬಹಳ ದಿನಗಳ ಆಸೆ ಈಡೇರಿದೆ. ಮುಖ್ಯಮಂತ್ರಿಯಾದ ಅವರು ತಪ್ಪು ಮಾಡಬಾರದು. ಅವರು ತಪ್ಪು ಮಾಡದಂತೆ ಎಚ್ಚರ ವಹಿಸುವುದು ನಮ್ಮ ಕರ್ತವ್ಯ' ಎಂದರು.

ತಕ್ಷಣವೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, `ಅನಂತಮೂರ್ತಿ ಅವರ ಜೊತೆ ದೀರ್ಘ ಕಾಲದ ಒಡನಾಟವಿದೆ. ಅವರು ನಮ್ಮಿಂದ ತಪ್ಪು ಮಾಡಿಸುವುದಿಲ್ಲ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.