ADVERTISEMENT

ಸೋಮವಾರ ಸಿದ್ದರಾಮಯ್ಯ ಪ್ರಚಾರಕ್ಕೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪಿತ್ತಕೋಶದಲ್ಲಿ ಇರುವ ಕಲ್ಲನ್ನು ಹೊರತೆಗೆಯಲು ಗುರುವಾರ ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.

ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಕಾರಣದಿಂದ ಸಿದ್ದರಾಮಯ್ಯ ಅವರು ಸೋಮವಾರ ಮಹಾವೀರ ಜೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ವಿಕ್ರಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅವರ ಪಿತ್ತಕೋಶದಲ್ಲಿ ಕಲ್ಲು ಇರುವುದು ಪತ್ತೆಯಾಗಿತ್ತು.

`ಸಿದ್ದರಾಮಯ್ಯ ಅವರ ರಕ್ತ ಪರೀಕ್ಷೆ ನಡೆಸಿದ್ದು, ಯಾವುದೇ ತೊಂದರೆ ಕಂಡುಬಂದಿಲ್ಲ. ಆದರೆ, ಪಿತ್ತಕೋಶದಲ್ಲಿ ಸಣ್ಣ ಕಲ್ಲುಗಳು ಇರುವುದು ಪರೀಕ್ಷೆ ವೇಳೆ ಕಂಡುಬಂದಿದೆ. ಅವುಗಳ ಕಾರಣದಿಂದಲೇ ಪಿತ್ತಕೋಶ ಊದಿಕೊಂಡಿದೆ. ಕಲ್ಲುಗಳನ್ನು ಹೊರತೆಗೆಯಲು ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಗಿದೆ' ಎಂದು ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ರಮೇಶ್ ಮಾಕನ್ ಅವರು ತಿಳಿಸಿದರು.

`ಗುರುವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ನಂತರ ಒಂದರಿಂದ ಎರಡು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಒಂದು ವಾರದ ವಿಶ್ರಾಂತಿಯ ನಂತರ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು' ಎಂದು ಹೇಳಿದರು.

ತೊಂದರೆ ಇಲ್ಲ: ಆಸ್ಪತ್ರೆಯಲ್ಲೇ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, `ಪಿತ್ತಕೋಶದಲ್ಲಿ ಕಲ್ಲು ಇರುವುದು ಬಹಳ ದಿನಗಳಿಂದ ತಿಳಿದಿತ್ತು. ಇತ್ತೀಚೆಗೆ ದೆಹಲಿಗೆ ಹೋದಾಗ ಕೆಲಸದ ಒತ್ತಡದಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ನನ್ನ ಆರೋಗ್ಯದ ಬಗ್ಗೆ ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ. ಸೋಮವಾರದಿಂದ ನನ್ನ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸುತ್ತೇನೆ' ಎಂದರು.

ಎರಡು ಕ್ಷೇತ್ರಗಳಲ್ಲಿ ಟಿಕೆಟ್ ಕೋರಿದ್ದ ಕುರಿತು ಪ್ರಶ್ನಿಸಿದಾಗ, `ನನಗೆ ಅಂತಹ ಯೋಚನೆ ಇರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನರ ಒತ್ತಾಯದಿಂದ ಟಿಕೆಟ್ ಕೇಳಿದ್ದೆ. ಈಗ ವರುಣಾದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ. ಗೆಲುವು ಖಚಿತ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವರುಣಾದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಕಾ.ಪು.ಸಿದ್ದಲಿಂಗಸ್ವಾಮಿ ಕಣಕ್ಕಿಳಿಯುತ್ತಿರುವ ಕುರಿತು ಪ್ರಶ್ನಿಸಿದಾಗ, ಅಂತಹವರ ಬಗ್ಗೆ ಮಾತನಾಡಿ ಸಮಯ ವ್ಯರ್ಥಮಾಡಲು ಬಯಸುವುದಿಲ್ಲ ಎಂದರು.

ಟಿಕೆಟ್ ಆಕಾಂಕ್ಷಿಗಳು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, `ಟಿಕೆಟ್ ದೊರೆಯುವುದಿಲ್ಲ ಎಂಬ ಭಾವನೆಯಿಂದ ಕೆಲವರು ಅಸಮಾಧಾನ ಹೊರ ಹಾಕುತ್ತಾರೆ. ಹೀಗೆ ಆಗುವುದು ಸಾಮಾನ್ಯ. ಇದರಿಂದ ಚುನಾವಣೆಯಲ್ಲಿ ಪಕ್ಷದ ಮೇಲೆ ಯಾವುದೇ ಪರಿಣಾಮವೂ ಆಗದು' ಎಂದು ಹೇಳಿದರು.

`ನೀವು ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯೇ' ಎಂಬ ಪ್ರಶ್ನೆಗೆ, `ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಪ್ರವೃತ್ತಿ ಕಾಂಗ್ರೆಸ್‌ನಲ್ಲಿ ಇಲ್ಲ. ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಎಲ್ಲರೂ ಅದಕ್ಕೆ ಬದ್ಧರಾಗಿ ಇರಬೇಕಾಗುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.