ADVERTISEMENT

ಸೋಲಿಸಲು ಷಡ್ಯಂತ್ರ ರೂಪಿಸಿದರು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST
ಶಾಸಕ ಸಿದ್ದರಾಮಯ್ಯ ಅವರು ಬಾದಾಮಿಯ ಬನಶಂಕರಿ ದೇವಿಗೆ ಗುರುವಾರ ವಿಶೇಷ ಪೂಜೆ ಸಲ್ಲಿಸಿದರು
ಶಾಸಕ ಸಿದ್ದರಾಮಯ್ಯ ಅವರು ಬಾದಾಮಿಯ ಬನಶಂಕರಿ ದೇವಿಗೆ ಗುರುವಾರ ವಿಶೇಷ ಪೂಜೆ ಸಲ್ಲಿಸಿದರು   

ಬಾದಾಮಿ (ಬಾಗಲಕೋಟೆ): ‘ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಿದೆ ಎಂಬ ಹೊಟ್ಟೆಯುರಿ ತಡೆಯಲಾರದೇ ವಿರೋಧಿಗಳ ನನ್ನ ವಿರುದ್ಧ ಷಡ್ಯಂತ್ರ ಮಾಡಿದರು. ಜೆಡಿಎಸ್, ಬಿಜೆಪಿಯವರಲ್ಲದೆ ಇನ್ನೂ ಕೆಲವರು ಸೇರಿಕೊಂಡು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದರು’ ಎಂದು ಶಾಸಕ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಜಮ್ಮನಕಟ್ಟಿಯಲ್ಲಿ ಮೇ 25ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ರಾಜಪ್ಪ ಜಲಗೇರಿ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ, ನಂತರ ಗ್ರಾಮಸ್ಥರ ಒತ್ತಾಯದ ಮೇರೆಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಬಾದಾಮಿಯ ಜನ ನನ್ನ ಕೈ ಬಿಡದೇ ಆಶೀರ್ವಾದ ಮಾಡಿದ್ದೀರಿ, ನಿಮ್ಮ ಉಪಕಾರ ಜೀವನಪರ್ಯಂತ ಸ್ಮರಿಸುವೆ. ಮಾಜಿ ಮುಖ್ಯಮಂತ್ರಿಯಾಗಿರುವ ಕಾರಣ ಉಳಿದವರಿಗಿಂತ ನನಗೆ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ನಿಮ್ಮ ಗ್ರಾಮದ, ಕುಟುಂಬದ ಸದಸ್ಯನಾಗಿ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುವೆ’ ಎಂದು ಭರವಸೆ ನೀಡಿದರು.

ADVERTISEMENT

‘ಸ್ವಾತಂತ್ರ್ಯಾನಂತರ ಇಲ್ಲಿಯವರೆಗೆ ಹಿಂದಿನ ಯಾವುದೇ ಮುಖ್ಯಮಂತ್ರಿ ಮಾಡದಷ್ಟು ಕೆಲಸ ಕಳೆದ ಐದು ವರ್ಷಗಳಲ್ಲಿ ಮಾಡಿದ್ದೆ. ಆದರೂ ಜನ ಕೈಹಿಡಿಯಲಿಲ್ಲ ಎಂಬ ನೋವಿದೆ. ಪ್ರಜಾಪ್ರಭುತ್ವದಲ್ಲಿ ನೀವೇ ಮಾಲೀಕರು. ಹಾಗಾಗಿ ನಿಮ್ಮ ತೀರ್ಪನ್ನು ಒಪ್ಪಿಕೊಂಡಿರುವೆ’ ಎಂದು ಭಾವುಕರಾದರು.

‘ನನಗೆ ಯಡಿಯೂರಪ್ಪ ಹಾಗೂ ಬಿಜೆಪಿ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ ಧರ್ಮ– ಜಾತಿಯ ಹೆಸರಲ್ಲಿ ಸಮಾಜ ಒಡೆಯುವ ಕೆಲಸಕ್ಕೆ ವಿರೋಧವಿದೆ. ಮುಸ್ಲಿಮರ ಮತ ಬೇಡ, ಅವರ ಕೆಲಸ ಮಾಡಿಕೊಡುವುದಿಲ್ಲ ಎಂದು ಹೇಳುವ ಬಸನಗೌಡ ಪಾಟೀಲ ಯತ್ನಾಳ, ಅನಂತ ಕುಮಾರ ಹೆಗಡೆ ಮಟ್ಟಕ್ಕೆ ನಾನು ಇಳಿಯಲು ಆಗುವುದಿಲ್ಲ. ಅದು ಅವರಿಬ್ಬರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಶಾಸಕರಾದ ನಂತರ ಎಲ್ಲಾ ಜಾತಿ– ಧರ್ಮದವರನ್ನು ಸಮಾನವಾಗಿ ಕಾಣುವುದಾಗಿ ಪ್ರಮಾಣ ವಚನ ಸ್ವೀಕರಿಸಿರುತ್ತೇವೆ. ಯತ್ನಾಳ ಆ ಶಿಷ್ಟಾಚಾರದಂತೆ ನಡೆಯಲಿ’ ಎಂದು ಕಿವಿಮಾತು ಹೇಳಿದರು.

ಬಾದಾಮಿಯಲ್ಲೇ ಮನೆ ಮಾಡುವೆ. ತಿಂಗಳಿಗೆ ಎರಡು ಬಾರಿ ಕ್ಷೇತ್ರಕ್ಕೆ ಬರುವೆ. ನಿಮ್ಮ ಅಹವಾಲುಗಳಿದ್ದರೆ ನೇರವಾಗಿ ಮನೆಗೆ ಬಂದು ಭೇಟಿಯಾಗಿ ಎಂದು ಮನವಿ ಮಾಡಿದರು.
*
ಎಲ್ಲರೂ ನನ್ನ ಪರಮಾಪ್ತರೇ; ಸಿದ್ದರಾಮಯ್ಯ 
ಬಾದಾಮಿ: ‘ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ವೇಳೆ ನನ್ನ ಆಪ್ತರನ್ನು ಮೂಲೆ ಗುಂಪು ಮಾಡಲಾಗಿದೆ ಎಂಬ ಆರೋಪ ಸಲ್ಲ. ಈಗ ಸಚಿವರಾಗಿರುವವರೂ ನನಗೆ ಆಪ್ತರಲ್ಲೇ ಪರಮಾಪ್ತರು’ ಎಂದು ಶಾಸಕ ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.

ಇಲ್ಲಿನ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಂಪುಟದಲ್ಲಿ ಖಾಲಿ ಇರುವ ಆರು ಸ್ಥಾನಗಳನ್ನು ಪ್ರಾದೇಶಿಕತೆ, ಜಾತಿ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಭರ್ತಿ ಮಾಡಲಾಗುವುದು. ಪಕ್ಷ, ಸರ್ಕಾರ ಎಂದು ಆಡಳಿತ ನಡೆಸಬೇಕೇ ಹೊರತು, ಆಪ್ತರು, ಪರಮಾಪ್ತರಿಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂದಲ್ಲ’ ಎಂದರು.

‘ಚುನಾವಣೆ ನಂತರ ಪಕ್ಷದಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗಿದೆ ಎಂಬುದೆಲ್ಲಾ ಮಾಧ್ಯಮದವರ ಸೃಷ್ಟಿ. ಶಾಸಕಾಂಗ ಪಕ್ಷದ ನಾಯಕನ ಜೊತೆಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಕೂಡ ಆಗಿದ್ದೇನೆ’ ಎಂದು ತಿಳಿಸಿದರು.

ಸಚಿವ ಸ್ಥಾನ ಸಿಗದೇ ಅತೃಪ್ತಿಗೊಂಡಿರುವ ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ ತಮ್ಮನ್ನು ಸ್ವಾಗತಿಸಲು ಬಾದಾಮಿಗೆ ಬಂದಿಲ್ಲವೇ ಎಂಬ ಪ್ರಶ್ನೆಗೆ, ‘ಹಾಗೆಲ್ಲಾ ಒಬ್ಬೊಬ್ಬರ ಬಗ್ಗೆ ಮಾತನಾಡಲು ಆಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.