ADVERTISEMENT

ಸ್ಥಾನಮಾನದ ಆಸೆ ಬಿಡಿ- ಬಿಜೆಪಿ ಅಧ್ಯಕ್ಷರ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ಬೆಂಗಳೂರು: `ಸ್ಥಾನಮಾನದ ಉದ್ದೇಶ ಇಟ್ಟುಕೊಂಡವರು ಎಂದೂ ಬಿಜೆಪಿ ಕಾರ್ಯಕರ್ತರಾಗಲು ಸಾಧ್ಯ ಇಲ್ಲ. ಯಾರು ವೈಚಾರಿಕವಾಗಿ ಬೆಳೆಯುತ್ತಾರೊ ಅವರು ಮಾತ್ರ ಬಿಜೆಪಿ ಕಾರ್ಯಕರ್ತರಾಗಲು ಸಾಧ್ಯ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳುವುದರ ಮೂಲಕ ಸ್ಥಾನಮಾನಕ್ಕಾಗಿ ಪೈಪೋಟಿ ನಡೆಸುತ್ತಿರುವವರಿಗೆ ಪರೋಕ್ಷ ಎಚ್ಚರಿಕೆ ನೀಡಿದರು.

ಬಿಜೆಪಿ ನಗರ ಘಟಕದ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕಾರಿಣಿ ಉದ್ಘಾಟನೆ ನಂತರ ಸಂಸದ ಅನಂತಕುಮಾರ್ ಮಾತನಾಡಿದರು. `ನಗರದಲ್ಲಿ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇತರ ಮೂಲಸೌಲಭ್ಯಗಳ ಕೊರತೆ ಇದ್ದು, ಅವುಗಳ ನಿವಾರಣೆಗೆ ಎಲ್ಲರೂ ಕೆಲಸ ಮಾಡಬೇಕು. ನಮ್ಮದೇ ಸರ್ಕಾರ ಇದ್ದಾಗ ವಾರ್ಡ್‌ನಿಂದ ಜಿಲ್ಲಾ ಘಟಕದವರೆಗೆ ಪ್ರತಿಯೊಬ್ಬ ಕಾರ್ಯಕರ್ತರೂ ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು~ ಎಂದು ಹೇಳಿದರು.

ಕಾವೇರಿ 4ನೇ ಹಂತದ ಕುಡಿಯುವ ನೀರು ಯೋಜನೆ ಸದ್ಯದಲ್ಲೇ ಕೆಲಸ ಆರಂಭಿಸಲಿದ್ದು, ಇದು ಕೂಡ ಬಿಜೆಪಿಯ ಕೊಡುಗೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಇದಕ್ಕೆ ಒಪ್ಪಿಗೆ ಸಿಕ್ಕಿದ್ದು. `ನಮ್ಮ ಮೆಟ್ರೊ~ ಕೂಡ ವಾಜಪೇಯಿ ಅವರ ಕೊಡುಗೆ. ನಗರಕ್ಕೇ ಪ್ರತ್ಯೇಕ ವಿದ್ಯುತ್ ಸ್ಥಾವರ ಅಗತ್ಯ ಇದ್ದು, ಬಿಡದಿ ಸಮೀಪ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪನೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ವಿಷಯದಲ್ಲಿ ಅಗತ್ಯಬಿದ್ದರೆ ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಬೇಕು ಎಂದೂ ಸಚಿವ ಅಶೋಕ ಅವರಿಗೆ ಸಲಹೆ ಮಾಡಿದರು.

ಸಚಿವ ಆರ್.ಅಶೋಕ ಇಡೀ ದಿನ ಕಾರ್ಯಕಾರಿಣಿಯಲ್ಲಿ ಹಾಜರಿದ್ದರು. ಸಂಸದರು, ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಕಾರ್ಯಕಾರಿಣಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಶೋಕ ಉತ್ತರ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.