ADVERTISEMENT

ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ಬೆಂಗಳೂರು: `ಲೋಕಪಾಲ ಮಸೂದೆ ಜಾರಿಗೊಳಿಸುವಂತೆ ಹಾಗೂ ಲೋಕಾಯುಕ್ತರನ್ನು ನೇಮಕ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಜುಲೈ 25 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಮಾಡಲಾಗುವುದು~ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಅಣ್ಣಾ ತಂಡದವರು ನವದೆಹಲಿಯ ಜಂತರ ಮಂತರ್‌ನಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದು ಅದಕ್ಕೆ ಬೆಂಬಲ ಸೂಚಿಸಲು ಇಲ್ಲಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ದೇಶದ ಜನತೆ ಲೋಕಪಾಲ ಮಸೂದೆಗಾಗಿ 44 ವರ್ಷ ಕಾದಿದೆ.

ಕಳೆದ ವರ್ಷ ಲಕ್ಷಗಟ್ಟಲೇ ಭಾರತೀಯರು ಲೋಕಪಾಲ ಮಸೂದೆಯನ್ನು ಜಾರಿಗೊಳಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು. ಆದರೆ, ಸಂಸತ್ತಿನಲ್ಲಿ ಚರ್ಚಿಸಲು ಸಮಯ ಬೇಕೆಂದು ಸರ್ಕಾರ ಹೇಳಿತ್ತು. ಇದುವರೆಗೂ ಆ ಸಮಯ ಬಂದಿಲ್ಲ~ ಎಂದರು.

`ದೇಶವು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾದ ಭ್ರಷ್ಟಾಚಾರವನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರ್ಕಾರ ವಸೂದೆಯನ್ನು ಜಾರಿಗೆ ತರಲು ಆಸಕ್ತಿಯನ್ನು ತೋರಿಸುತ್ತಿಲ್ಲ. ಅದಕ್ಕಾಗಿ ಮತ್ತೊಮ್ಮೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ~ ಎಂದರು.

`15 ಮಂದಿ ಭ್ರಷ್ಟ ಮಂತ್ರಿಗಳ ವಿರುದ್ಧ ತನಿಖೆ ನಡೆಸಿ 6 ತಿಂಗಳೊಳಗೆ ವರದಿ ಸಲ್ಲಿಸಲು ವಿಶೇಷ ತನಿಖಾ ಸಮಿತಿ ನೇಮಿಸಬೇಕು, ಸಮಿತಿಗೆ ರಾಜಕೀಯ ಪಕ್ಷಗಳ ನಾಯಕರ ವಿರುದ್ಧ ಉಳಿದಿರುವ ಮೊಕದ್ದಮೆಗಳ ವರ್ಗಾವಣೆ, 162 ಸಂಸದರ ಮೇಲಿನ ಆರೋಪಗಳನ್ನು ವಿಚಾರಣೆ ನಡೆಸಿ 6 ತಿಂಗಳೊಳಗೆ ತೀರ್ಪು ನೀಡಲು ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮಾಡಲು ಮುಂದಾಗಬೇಕು~ ಎಂದು ಹೇಳಿದರು.

`ರಾಜ್ಯದಲ್ಲಿ 11 ತಿಂಗಳಿನಿಂದ ಲೋಕಾಯುಕ್ತ ಹುದ್ದೆ ಖಾಲಿಯಾಗಿದ್ದು, ಲೋಕಾಯುಕ್ತರಿಂದ ಆಡಳಿತ, ಭ್ರಷ್ಟಾಚಾರ ಸುಧಾರಣೆಯಾಗಲಿದ್ದು, ಅವರ ನೇಮಕವಾದರೆ  ರಾಜ ಕಾರಣಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣದಿಂದ ಸರ್ಕಾರ ನೇಮಕಕ್ಕೆ  ಹಿಂದೇಟು ಹಾಕುತ್ತಿದೆ. ಸರ್ಕಾರ ಕೂಡಲೇ ಲೋಕಾಯುಕ್ತ ನ್ಯಾಯಮೂರ್ತಿಯನ್ನು ನೇಮಿಸಬೇಕು~ ಎಂದು ಆಗ್ರಹಿಸಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಮಾತನಾಡಿ, `ನಾವು ಈ ಸ್ವಾತಂತ್ರ್ಯಕೋಸ್ಕರ ಹೋರಾಡಲಿಲ್ಲ. ಈಗ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಸಮಯ ಬಂದಿದೆ. ಸಂವಿಧಾನ, ಕಾನೂನುಗಳನ್ನು ಸಂರಕ್ಷಿಸುವ ಸಂಘಟನೆಗಳನ್ನು ಸ್ಥಾಪಿಸುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದೆ. ಲೋಕಾಯುಕ್ತರನ್ನು ನೇಮಕ ಮಾಡುವಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳಿಗೆ ಆಸಕ್ತಿಯಿಲ್ಲದಿರುವುದು ಕಾಣುತ್ತಿದ್ದು, ಇದಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ~ ಎಂದು ತಿಳಿಸಿದರು.

`ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಅರ್ಜಿಯನ್ನು ಹಾಕಿಕೊಂಡು ಲೋಕಪಾಲ ವಿಚಾರವಾಗಿ ಷಡ್ಯಂತರ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಅಪರಾಧಿಗಳಿದ್ದು, ಅವರು ಗಣಿ ಮಾಲೀಕರ ಜತೆಗೆ ಶಾಮೀಲಾಗಿರುವುದು ಕಂಡು ಬಂದಿದೆ.

ಜನರು ಸಮಗ್ರ ಬದಲಾವಣೆಗೆ ಹೋರಾಟ ಮಾಡಬೇಕಾಗಿದ್ದು, ಲೋಕಾಯುಕ್ತ ಮತ್ತು ಲೋಕಪಾಲ ಮಸೂದೆಯನ್ನು ಜಾರಿಗೆ ತರಲು ರಾಜಕಾರಣಿಗಳು ಸರ್ಕಾರದ ಮೇಲೆ ಒತ್ತಡ ಹಾಕಲು ಮುಂದಾಗಬೇಕು~ ಎಂದರು.ಪತ್ರಿಕಾಗೋಷ್ಠಿಯಲ್ಲಿ ಭ್ರಷ್ಟಾಚಾರ ವಿರೋಧಿ ಭಾರತ ಸಂಸ್ಥೆಯ ಸಂಚಾಲಕ ಪೃಥ್ವಿ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT