ADVERTISEMENT

ಹಂಪಿ ದೇವಾಲಯ ಸುತ್ತ ಒತ್ತುವರಿ ಸಮೀಕ್ಷೆ....

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ವಿಶ್ವ ಪರಂಪರೆ ತಾಣಗಳಲ್ಲಿ ಒಂದಾದ ಹಂಪಿಯಲ್ಲಿನ ದೇವಾಲಯಗಳ ಸುತ್ತಲೂ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿಕೊಂಡಿರುವವರ ಸಮೀಕ್ಷೆ ನಡೆಸುವ ಸಂಬಂಧ ಭಾರತೀಯ ಸರ್ವೇಕ್ಷಣಾ ನಿರ್ದೇಶನಾಲಯದ ಅಧಿಕಾರಿಗಳಿಗೆ ಪೊಲೀಸ್ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಹಂಪಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಆರ್.ಪಂಪನಗೌಡ ಅವರು ಸಮೀಕ್ಷೆ ಕಾರ್ಯಕ್ಕೆ ಅಡ್ಡಿಪಡಿಸುತ್ತಿರುವುದಾಗಿ ನಿರ್ದೇಶನಾಲಯವು ಕೋರ್ಟ್‌ಗೆ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆಗೆ ಆದೇಶಿಸಲಾಗಿದೆ.

ಈ ಸಮೀಕ್ಷೆ ಕಾರ್ಯವನ್ನು ಇದೇ 7ರಿಂದ 9ರವರೆಗೆ ನಡೆಸುವಂತೆ ಹಾಗೂ ಇದರ ವರದಿಯನ್ನು 12ರಂದು   ಕೋರ್ಟ್‌ಗೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಮತ್ತು ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅವರನ್ನು ಒಳಗೊಂಡ ವಿಭಾಗೀಯಪೀಠ ನಿರ್ದೇಶಿಸಿದೆ.

ಇಲ್ಲಿರುವ ಹಲವು ದೇವಾಲಯಗಳ ಸುತ್ತಲೂ ಅಕ್ರಮ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಜಾಗ ತೆರವು ಮಾಡುವಂತೆ ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಳೆದ ನವೆಂಬರ್ 11ರಂದು ನೀಡಿರುವ ನೋಟಿಸ್‌ನ್ನು ಪ್ರಶ್ನಿಸಿ ಹಲವಾರು ಮಂದಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.
 
ಒತ್ತುವರಿದಾರರನ್ನು ಗುರುತಿಸಿ ತೆರವು ಕಾರ್ಯವನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಹಾಗೂ ಹೈಕೋರ್ಟ್ ಈ ಹಿಂದೆ ನಿರ್ದೇಶನಾಲಯಕ್ಕೆ ಹಾಗೂ ಸರ್ಕಾರಕ್ಕೆ ಆದೇಶಿಸಿತ್ತು. ಇಲ್ಲಿ 346 ಮಂದಿ ಒತ್ತುವರಿದಾರರು ವಾಸಿಸುತ್ತಿರುವುದಾಗಿ ಸರ್ಕಾರದ ವಾದ. 
 
ಆದರೆ ಇವರ ಸಂಖ್ಯೆ 100ಕ್ಕಿಂತಲೂ ಕಡಿಮೆ ಎನ್ನುವುದು ನಿರ್ದೇಶನಾಲಯದ ಪ್ರತಿವಾದ. 
ಈ ಕುರಿತು ಸತ್ಯಾಸತ್ಯತೆಯನ್ನು ತಿಳಿಯಲು ದಾಖಲೆಗಳನ್ನು ಸಂಗ್ರಹಿಸುವ ಕಾರ್ಯವನ್ನು ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ್ದರು.

ಆದರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ನಿರ್ದೇಶನಾಲಯದ ಸೂಪರಿಂಟೆಂಡೆಂಟ್ ಅವರಿಗೆ ಪತ್ರ ಬರೆದು ಕಾರ್ಯವನ್ನು ಕೂಡಲೇ ಸ್ಥಗಿತಗೊಳಿಸುವಂತೆ ತಿಳಿಸಿದ್ದರು. ಗ್ರಾಮ ಪಂಚಾಯಿತಿಯಿಂದ ಸಮೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಕಾರ್ಯ ಸ್ಥಗಿತಗೊಳಿಸಬೇಕು ಎನ್ನುವುದು ಅವರ ಸೂಚನೆಯಾಗಿತ್ತು.

ಈ ಸೂಚನೆ ಮೇರೆಗೆ ಸಮೀಕ್ಷೆ ಕಾರ್ಯ ಮುಂದುವರಿಸಲು ಅಸಾಧ್ಯವಾಗಿದೆ ಎಂದು ನಿರ್ದೇಶನಾಲಯದ ಪರ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ಪೊಲೀಸ್ ರಕ್ಷಣೆ ನೀಡಲು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.