ADVERTISEMENT

ಹಜಾರೆಗೆ ಬೆಂಬಲ: ಸಿಎಂಗೆ ನೈತಿಕತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2011, 19:30 IST
Last Updated 9 ಏಪ್ರಿಲ್ 2011, 19:30 IST

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೆಂಬಲ ನೀಡುವ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಲ್ಲ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ಶನಿವಾರ ಇಲ್ಲಿ ಟೀಕಿಸಿದರು.

ಭ್ರಷ್ಟಾಚಾರ, ಹಗರಣಗಳ ಆರೋಪದಲ್ಲಿ ಸಿಲುಕಿರುವ ಯಡಿಯೂರಪ್ಪ ಕುಂಟು ನೆಪಗಳನ್ನು ಹೇಳುತ್ತಾ ತನಿಖೆಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ಇಂತಹ ಮುಖ್ಯಮಂತ್ರಿಗೆ ಹಜಾರೆ ಅವರ ಹೋರಾಟವನ್ನು ಬೆಂಬಲಿಸುವ ನೈತಿಕತೆ ಇದೆಯೇ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಭ್ರಷ್ಟಾಚಾರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಜನ ಲೋಕಪಾಲ ಮಸೂದೆ ಜಾರಿಗಾಗಿ ಕೇಂದ್ರ ಸರ್ಕಾರವನ್ನು ಮಣಿಸುವಲ್ಲಿ ಯಶಸ್ವಿಯಾದ ಹಜಾರೆ ಅವರಿಗೆ ಅಭಿನಂದನೆ ಸಲ್ಲಿಸಿದ ದತ್ತ, ಜನಶಕ್ತಿಯ ಮುಂದೆ ರಾಜ್ಯಶಕ್ತಿ ತಲೆತಗ್ಗಿಸಲೇಬೇಕು ಎನ್ನುವುದನ್ನು ಹಜಾರೆ ಅವರ ಹೋರಾಟ ಸಾಬೀತುಪಡಿಸಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಎಂದರು.ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಯಡಿಯೂರಪ್ಪ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದುದು ಎಂದರು.

 ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದರೆ ಹೊಸದಾಗಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ, ವೃದ್ದಾಪ್ಯ ವೇತನ ಮತ್ತಿತರ ಸೌಲಭ್ಯಗಳನ್ನು ಮಂಜೂರು ಮಾಡದಂತೆ ಆದೇಶ ಹೊರಡಿಸುವ ಅಗತ್ಯವಿತ್ತೇ ಎಂದು  ಅವರು  ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.