ADVERTISEMENT

ಹಣಕ್ಕಾಗಿ ಮೌಲ್ವಿ ಅಪಹರಣ: ಒತ್ತೆಯಾಳು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 19:30 IST
Last Updated 21 ಜೂನ್ 2011, 19:30 IST

ಮೈಸೂರು: ಬೆಂಗಳೂರಿಗೆ ಬಂದಿದ್ದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಮೌಲ್ವಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು. ನಗರ ಸಿಸಿಬಿ ಪೊಲೀಸರು ಸೋಮವಾರ ಕುಶಾಲನಗದಲ್ಲಿ ಐವರು ಆರೋಪಿಗಳನ್ನು ಬಂಧಿಸಿ, ಮೌಲ್ವಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತಃ ಉತ್ತರ ಪ್ರದೇಶದ ಮುಜಾಫರ್ ನಗರದ ನಯಾಜ್‌ಪುರ್ ಮೊಹಲ್ಲಾದ ಮೌಲ್ವಿ ಫಜ್ಲೂರ್ ರೆಹಮಾನ್ (46) ಅಪಹರಣವಾಗಿದ್ದವರು.

ಕೊಡಗು ಜಿಲ್ಲೆ ಕುಶಾಲನಗರದವರಾದ ಮಹಮ್ಮದ್ ಕಬೀರ್ (52), ಮಹಮ್ಮದ್ ಜಮೀಲ್ (27), ಬೈಚನಹಳ್ಳಿಯ ಉಮ್ಮರ್ (42), ಗುಮ್ಮಕೊಲ್ಲಿಯ ಇರ್ಷಾದ್ (31) ಹಾಗೂ ಕೂಡಿಗೆಯ ನಾಸಿರ್ (34) ಬಂಧಿತರು. 

ಚಿತ್ರದುರ್ಗದ ಹೊಳಲ್ಕೆರೆಯಲ್ಲಿ 8 ವರ್ಷಗಳಿಂದ ವಾಸವಿದ್ದ ಮೌಲ್ವಿ ಫಜ್ಲೂರ್ ರೆಹಮಾನ್ ಟೈಲರಿಂಗ್ ವೃತ್ತಿ ಮಾಡಿ ಜೀವನ ಸಾಗಿಸುತ್ತಿದ್ದರು. ಜೂನ್ 13 ರಂದು ಟೈಲರಿಂಗ್ ಉಪಕರಣಗಳನ್ನು ಕೊಂಡುಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ರಾತ್ರಿ 10 ಗಂಟೆ ಸುಮಾರಿನಲ್ಲಿ ಕಲಾಸಿಪಾಳ್ಯದ ತಾಜ್ ಹೋಟೆಲ್  ಮುಂಭಾಗ ನಿಂತಿದ್ದ ರೆಹಮಾನ್‌ರನ್ನು ಕಾರಿನಲ್ಲಿ ಬಂದ ಅಬ್ದುಲ್ ರಜಾಕ್ ಮತ್ತು ಐವರು ಸಹಚರರು ಅಪಹರಿಸಿದ್ದರು.

ಅಪಹರಣಕಾರರು ನಂತರ ರೆಹಮಾನ್‌ರನ್ನು ನಗರದ ಶಾಂತಿನಗರದ ಮನೆಯೊಂದರಲ್ಲಿ ಕೂಡಿಹಾಕಿದ್ದರು. ನಂತರ ಪಿರಿಯಾಪಟ್ಟಣ ಮತ್ತು ಕುಶಾಲನಗರಕ್ಕೆ  ಒತ್ತೆಯಾಳನ್ನು ದುಷ್ಕರ್ಮಿಗಳು ಸ್ಥಳಾಂತರಿಸಿದ್ದರು.

ರೆಹಮಾನ್ ಅವರ ಭಾವ ರಾಜಸ್ತಾನದ ತೌಫಿಕ್‌ಗೆ ದೂರವಾಣಿ ಕರೆ ಮಾಡಿದ ಅಪಹರಣಕಾರರು ರೂ.12 ಲಕ್ಷ ಕೊಟ್ಟರೆ ಒತ್ತೆಯಾಳನ್ನು ಬಿಡುಗಡೆ  ಮಾಡುವುದಾಗಿ ಬೇಡಿಕೆ ಇಟ್ಟರು. ಭಾವಮೈದುನ ರೆಹಮಾನ್ ಅಪಹರಣ ಆಗಿರುವ ಕುರಿತು ತೌಫಿಕ್ ಬೆಂಗಳೂರಿನ ಡಿಜಿ ಕಚೇರಿಗೆ ನೇರವಾಗಿ ದೂರು ನೀಡಿದ್ದರು. ಪ್ರಕರಣ ಕುರಿತು ಕೂಡಲೇ ತನಿಖೆ ಮಾಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಡಿಜಿ ಕಚೇರಿಯಿಂದ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ತಂಡವನ್ನು ರಚಿಸಲಾಗಿತ್ತು.

~ಕುಶಾಲನಗರದಲ್ಲಿ ರೆಹಮಾನ್ ಅವರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದ್ದು, ರೂ.12 ಲಕ್ಷ ಕೊಟ್ಟರೆ ಬಿಡುಗಡೆ ಮಾಡುವುದಾಗಿ ದುಷ್ಕರ್ಮಿಗಳು ಭಾನುವಾರ  ರಾತ್ರಿ ತೌಫಿಕ್ ಮೊಬೈಲ್‌ಗೆ ಕರೆ ಮಾಡಿದರು. ಇದರ ಮಾಹಿತಿ ಆಧರಿಸಿದ ಸಿಸಿಬಿ ತಂಡ ಕುಶಾಲನಗರದಲ್ಲಿ ಐವರು ದುಷ್ಕರ್ಮಿಗಳನ್ನು ಸೋಮವಾರ ಬೆಳಿಗ್ಗೆ  ಬಂಧಿಸಿ ಒತ್ತೆಯಾಳಾಗಿದ್ದ ಮೌಲ್ವಿಯನ್ನು ರಕ್ಷಿಸಿದರು.

ರೆಹಮಾನ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರಿಂದ ಹಣೆಗೆ ಸ್ವಲ್ಪ ಪೆಟ್ಟಾಗಿದೆ. ಪ್ರಕರಣದ ಪ್ರಮುಖ  ಆರೋಪಿ ಅಬ್ದುಲ್ ರಜಾಕ್ ಮತ್ತು ಮತ್ತೊಂದು ತಂಡ ತಲೆಮರೆಸಿಕೊಂಡಿದೆ. ಅಪಹರಣಕ್ಕೆ ಬಳಸಿದ್ದ ವ್ಯಾನ್ ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬೀಳಬೇಕಿದೆ~ ಎಂದು ಸುನೀಲ್ ಅಗರವಾಲ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.