ADVERTISEMENT

ಹನಿಟ್ರ್ಯಾಪ್: ಯುವತಿಯರು ಸೇರಿ 6 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 5:25 IST
Last Updated 23 ಮಾರ್ಚ್ 2018, 5:25 IST
ಹನಿಟ್ರ್ಯಾಪ್: ಯುವತಿಯರು ಸೇರಿ 6 ಜನರ ಬಂಧನ
ಹನಿಟ್ರ್ಯಾಪ್: ಯುವತಿಯರು ಸೇರಿ 6 ಜನರ ಬಂಧನ   

ಮಂಗಳೂರು: ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರನ್ನು ಮಸಾಜ್‌ ಮಾಡುವ ನೆಪದಲ್ಲಿ ನಂಬಿಸಿ ಹನಿಟ್ರ್ಯಾಪ್‌ ಮೂಲಕ ₹ 3 ಲಕ್ಷ ಸುಲಿಗೆ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಮೂವರು ಯುವತಿಯರ ಸಹಿತ 6 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜೈಲು ರೋಡ್‌ನ‌ ಪ್ರೀತೇಶ್‌ (36), ಕಳಸದ ರವಿ (35), ಶಕ್ತಿನಗರದ ರಮೇಶ್‌ (35) ಮತ್ತು ಮೂವರು ಯುವತಿಯರು ಪ್ರಕರಣದ ಆರೋಪಿಗಳು. ಕಳಸದ ರವಿ ವಿರುದ್ಧ ಈ ಹಿಂದೆಯೇ ಕಾವೂರು ಠಾಣೆಯಲ್ಲಿ ದರೋಡೆ ಹಾಗೂ ಆಸ್ತಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.

ಪ್ರಕರಣ ವಿವರ: ನಿವೃತ್ತ ಸರ್ಕಾರಿ ಉದ್ಯೋಗಿ, ಮೇರಿಹಿಲ್‌ ನಿವಾಸಿಯೊಬ್ಬರನ್ನು ಯುವತಿಯರಿಂದ ಮಸಾಜ್‌ ಮಾಡಿಸುವುದಾಗಿ ಆರೋಪಿಗಳು ನಂಬಿಸಿದ್ದರು. ಅದರಂತೆ ಅವರಿಗೆ ದೇರೆಬೈಲ್‌ನಲ್ಲಿರುವ ಯುವತಿಯನ್ನು ಪರಿಚಯಿಸಿ ಮಾ.20ರಂದು ಆಕೆಯ ಮನೆಗೆ ಕಳುಹಿಸಿಕೊಟ್ಟಿದ್ದರು. ಆ ಮನೆಗೆ ಹೋದ ಕೆಲ ಹೊತ್ತಿನ ಬಳಿಕ ಮೂವರು ಅಪರಿಚಿತ ಯುವಕರು ಏಕಾಏಕಿ ಪ್ರವೇಶಿಸಿ, ಮಸಾಜ್‌ಗಾಗಿ ಬಂದ ವ್ಯಕ್ತಿಯನ್ನು ಬಲಾತ್ಕಾರವಾಗಿ ಬೆತ್ತಲೆಗೊಳಿಸಿ ಯುವತಿಯರ ಜತೆ ವೀಡಿಯೋ, ಫೋಟೋ ತೆಗೆಸಿ ₹ಮೂರು ಲಕ್ಷ ಹಣದ ಬೇಡಿಕೆಯಿಟ್ಟು ಬ್ಲ್ಯಾಕ್‌ಮೇಲ್‌ ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಆಘಾತಗೊಂಡ ಆ ವ್ಯಕ್ತಿ ಯುವಕರಿಗೆ ಹಣ ನೀಡಲು ಒಪ್ಪಿಗೆ ನೀಡಿದ್ದಲ್ಲದೆ, 3 ಲಕ್ಷ ರೂ.ಗಳನ್ನು ಆರೋಪಿ ರವಿಯ ಬ್ಯಾಂಕ್‌ ಖಾತೆಗೆ ಜಮಾ ಮಾಡಿದ್ದರು.

ADVERTISEMENT

ಮತ್ತೆ ಬೆದರಿಕೆ ಹಾಕಿದರು: ಈ ಘಟನೆ ನಡೆದು ಕೆಲವು ದಿನಗಳ ಬಳಿಕ ಆರೋಪಿಗಳು ಪುನಃ ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡದಿದ್ದಲ್ಲಿ ಯುವತಿ ಜತೆಗಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಗೆ ಹಾಕಿದ್ದ‌ರು. ಇದರಿಂದ ವಿಚಲಿತರಾದ ವ್ಯಕ್ತಿ ಕೊನೆಗೂ ಕಾವೂರು ಠಾಣೆಗೆ ದೂರು ನೀಡಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಸಫಲರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್‌ ಶಾಂತಾರಾಮ್‌, ಪಿಎಸ್‌ಐಗಳಾದ ಶ್ಯಾಮ್‌ಸುಂದರ್‌, ಕಬ್ಟಾಲ್‌ರಾಜ್‌ ಮತ್ತು ಸಿಬ್ಬಂದಿ ಭಾಗವಹಿಸಿದ್ದರು ಎಂದು ಡಿಸಿಪಿ ಹನುಮಂತ್ರಾಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.