ADVERTISEMENT

ಹಬ್ಬುತ್ತಿರುವ ಡೆಂಗೆ: ಬಾಲಕ, ಮಹಿಳೆ ಬಲಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ಶಿರಸಿ (ಉ.ಕ.ಜಿಲ್ಲೆ) : ಇಲ್ಲಿನ ಗೌಳಿ ಗಲ್ಲಿಯ ಬಾಲಕನೊಬ್ಬ ಡೆಂಗೆ ಜ್ವರದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾನೆ.

ಬಾಲಕನನ್ನು ದರ್ಶನ ನಾರಾಯಣ ಗೌಳಿ (8) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆ ಕಳೆಯಲು 15 ದಿನಗಳ ಹಿಂದೆ ದಾವಣಗೆರೆ, ರಾಣೆಬೆನ್ನೂರಿಗೆ ಹೋಗಿದ್ದ ಈತ ಊರಿಗೆ ಬಂದ ಎರಡು ದಿನಗಳಲ್ಲಿ ಜ್ವರಕ್ಕೆ ತುತ್ತಾಗಿದ್ದ. ಖಾಸಗಿ ವೈದ್ಯರ ಬಳಿ ಪರೀಕ್ಷಿಸಿ ಔಷಧಿ ಕೊಡಿಸಿದರೂ ಜ್ವರ ನಿಯಂತ್ರಣಕ್ಕೆ ಬಂದಿಲ್ಲ. ಈ ಕಾರಣ ಪಾಲಕರು ಇಲ್ಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿನ ವೈದ್ಯರು ಬೆಳಗಾವಿಯ ಆಸ್ಪತ್ರೆಗೆ ಕಳುಹಿಸಿದ್ದರು.  ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮಹಿಳೆ ಸಾವು
ದಾವಣಗೆರೆ /ಶಿವಮೊಗ್ಗ: ಡೆಂಗೆ ಜ್ವರ ದಾವಣಗೆರೆ ಜಿಲ್ಲೆಯಲ್ಲೂ ವ್ಯಾಪಕವಾಗಿ ಹರಡುತ್ತಿದ್ದು,  ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ.

ಆರೋಗ್ಯ ಇಲಾಖೆಯ ಐಸಿಟಿಸಿ ಆಪ್ತ ಸಮಾಲೋಚಕ, ಭದ್ರಾವತಿ ತಾಲ್ಲೂಕು ಅರಬಿಳಚಿಯ ಲತೇಶ್ ಅವರ ಪತ್ನಿ ಭಾಗ್ಯಮ್ಮ (32) ಮೃತಪಟ್ಟವರು.  ಇವರು ಬೇಸಿಗೆ ರಜೆ ಕಳೆಯಲು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕು ಮಲಹಾಳ್ ಗ್ರಾಮದಲ್ಲಿರುವ ತವರು ಮನೆಗೆ ಬಂದ ಸಂದರ್ಭದಲ್ಲಿ ಜ್ವರ ಕಾಣಿಸಿಕೊಂಡಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶನಿವಾರ ಮೃತಪಟ್ಟಿದ್ದಾರೆ.

`ಡೆಂಗೆ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ' ಎಂದು ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿ ಡಾ.ಶಿವಣ್ಣ ರೆಡ್ಡಿ ಸೋಮವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.