ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಯನ್ನು ಆರಿಸುವ ಚುನಾವಣೆಯಲ್ಲಿ ಹರ್ಷ ಮೊಯಿಲಿ ಅವರ ನಾಮಪತ್ರ ತಿರಸ್ಕೃತಗೊಳ್ಳುವುದಕ್ಕೆ, ಅವರು ಸಮಾಜ ಸೇವೆಯ ಅರ್ಹತೆಯನ್ನು ಪೂರೈಸದಿರುವುದೇ ಕಾರಣ’ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಹರ್ಷ ಮೊಯಿಲಿ ಅವರ ನಾಮಪತ್ರ ತಿರಸ್ಕಾರಗೊಂಡ ಗೊಂದಲಗಳ ಕುರಿತು ಪ್ರತಿಕ್ರಿಯಿಸಿದ ಅವರು, ‘ಲೋಕಸಭಾ ಅಭ್ಯರ್ಥಿ ಆಯ್ಕೆಯ ಚುನಾವಣೆಗೆ ನಾಮಪತ್ರ ಸಲ್ಲಿಸುವವರು ಅಪರಾಧಿ ಹಿನ್ನೆಲೆ ಹೊಂದಿರಬಾರದು. ಸಂಸದನಾಗುವುದಕ್ಕೆ ಬೇಕಾದ ಅರ್ಹತೆ ಹೊಂದಿರಬೇಕು.
ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ಪಕ್ಷದ ಯಾವುದಾದರೂ ಘಟಕಗಳಲ್ಲಿ ಹುದ್ದೆಯನ್ನು ಅಲಂಕರಿಸಿದವರು, ಶಾಸಕರು, ಸಂಸದರು, ಮಾಜಿ ಸಂಸದರು, ಮಾಜಿ ಶಾಸಕರು, ಮಾಜಿ ಅಥವಾ ಹಾಲಿ ಮೇಯರ್, ಮಾಜಿ ಅಥವಾ ಹಾಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಕಳೆದ ಲೋಕಸಭಾ ಅಥವಾ ರಾಜ್ಯಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ಪಕ್ಷದ ಕಾರ್ಯಕರ್ತರಲ್ಲದವರೂ ನಾಮಪತ್ರ ಸಲ್ಲಿಸಲು ಅವಕಾಶವಿದೆ.
ಆದರೆ, ಅವರು ಸಾರ್ವಜನಿಕ ಸೇವೆ ಅಥವಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರಬೇಕು ಹಾಗೂ ಬೇರೆ ಪಕ್ಷದ ಸದಸ್ಯರರಾಗಿರಬಾರದು. ಹರ್ಷ ಮೊಯಿಲಿ ಅವರು ಈ ವರ್ಗದ ಅಡಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಈ ವರ್ಗದ ಅಡಿ ನಾಮಪತ್ರ ಸಲ್ಲಿಸುವುದಕ್ಕೆ ಬೇಕಾದ ಅರ್ಹತೆಯನ್ನು ಅವರು ಹೊಂದಿಲ್ಲ ಎಂಬ ಕಾರಣಕ್ಕಾಗಿ ಎಐಸಿಸಿಯು ಅವರ ನಾಮಪತ್ರ ತಿರಸ್ಕರಿಸಿದೆ’ ಎಂದು ಕಾಂಗ್ರೆಸ್‌ನ ಲೋಕಸಭಾ ಅಭ್ಯರ್ಥಿ ಆಯ್ಕೆ ಚುನಾವಣಾಧಿಕಾರಿ ಪ್ರಮೋದ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಐಸಿಸಿ ನಿರ್ಧಾರ ಬೇಸರ ತಂದಿದೆ’
‘ಸಾರ್ವಜನಿಕ ಸೇವೆ/ ಸಾಮಾಜಿಕ ಕಾರ್ಯದ ಹಿನ್ನೆಲೆ ಅಡಿ ನಾಮಪತ್ರ ಸಲ್ಲಿಸಲು ಬೇಕಾದ ಅರ್ಹತೆಗಳನ್ನು ನಾನು ಹೊಂದಿದ್ದೆ. ನಾನು ಕಿಸಾನ್ ಸಭಾ ಟ್ರಸ್ಟ್‌ನ ಆಡಳಿತ ಮಂಡಳಿ ಸದಸ್ಯ ಹಾಗೂ ಕಾರ್ಯದರ್ಶಿಯಾಗಿದ್ದೇನೆ. ಬಡವರ್ಗದ ಮಕ್ಕಳಿಗೆ ಶಿಕ್ಷಣ ಒದಗಿಸುವ ಶಾಲೆಗಳನ್ನು ನಡೆಸಲು ಈ ಟ್ರಸ್ಟ್ ಅನ್ನು ಆರಂಭಿಸಲಾಗಿದೆ.
ಗ್ರಾಮೀಣ ಪ್ರದೇಶದ ಹೈನುಗಾರರ ಸಬಲೀಕರಣಕ್ಕಾಗಿ ದುಡಿಯುವ ಮೋಕ್ಷ ಯುಗ್ ಆಕ್ಸೆಸ್ ಇಂಡಿಯ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿಯೂ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ಆದರೂ ಎಐಸಿಸಿ ನನ್ನ ನಾಮಪತ್ರವನ್ನು ತಿರಸ್ಕರಿಸಿರುವುದು ಬೇಸರ ತಂದಿದೆ’ ಎಂದು ಹರ್ಷ ಮೊಯಿಲಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.